ಪೆರ್ಲ-ಪೂವನಡ್ಕ ರಸ್ತೆ ಪೆರ್ಲ ಸಮೀಪದಲ್ಲಿ ಗುಂಡಿಬಿದ್ದು ಹದಗೆಟ್ಟಿರುವುದು.  
ಉಡುಪಿ

ಪೆರ್ಲದಲ್ಲಿ ಸಂಚಾರ ಸಂಕಷ್ಟ

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಲೋಕೋಪಯೋಗಿ ಇಲಾಖೆ ಅಧೀನದಲ್ಲಿರುವ ಪೆರ್ಲ-ಪೂವನಡ್ಕ ಸಂಪರ್ಕ ರಸ್ತೆಯು ಪೆರ್ಲ ಆಯುರ್ವೇದ ಆಸ್ಪತ್ರೆ ಸಮೀಪದಲ್ಲಿ ಸಂಪೂರ್ಣ ಹದಗೆಟ್ಟಿದ್ದು ವಾಹನ ಚಾಲಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿದ ರಸ್ತೆ ಒಂದೆರಡು ವರ್ಷದಲ್ಲಿ ಗುಂಡಿಗಳು ಸೃಷ್ಟಿಯಾಗಿದ್ದು ಗುತ್ತಿಗೆದಾರರು ಹಾಗೂ ಲೋಕೋಪಯೋಗಿ ಇಲಾಖೆಗೆ ಜನತೆ ಹಿಡಿಶಾಪಹಾಕುವಂತಾಗಿದೆ. ಮಳೆಗಾಲ ಆರಂಭಕ್ಕೂ ಮೊದಲೇ ಇಲ್ಲಿನ ರಸ್ತೆ ಶಿಥಿಲಾವಸ್ಥೆ ತಲುಪಿದ್ದರೂ, ಇಲಾಖೆ ಇತ್ತ ಗಮನಹರಿಸದಿರುವುದರಿಂದ ಮಳೆಗೆ ಮತ್ತಷ್ಟು ಹದಗೆಟ್ಟಿದ್ದು, ವಾಹನ ಸಂಚಾರ ದುಸ್ತರವೆನಿಸಿದೆ.
ಲೋಕೋಪಯೋಗಿ ಇಲಾಖೆ ಬದಿಯಡ್ಕ ವಿಭಾಗದ ಅಧೀನದಲ್ಲಿರುವ ರಸ್ತೆಗೆ 25 ಲಕ್ಷ ರೂ. ಹೆಚ್ಚು ಅನುದಾನದಲ್ಲಿ ಕಿರು ಸೇತುವೆ ಹಾಗೂ ಒಳಚರಂಡಿ ನಿರ್ಮಿಸಲಾಗಿದೆ. ಆದರೆ ಚರಂಡಿಯಲ್ಲಿ ಹರಿಯಬೇಕಾದ ಮಳೆನೀರು ರಸ್ತೆಯಲ್ಲೇ ಹರಿಯುತ್ತಿದೆ. ಇನ್ನು ರಸ್ತೆಗೆ ಅಳವಡಿಸಿದ್ದ ಕಾಂಕ್ರೀಟ್ ಎದ್ದು ಕಾಂಕ್ರೀಟ್ ಸ್ಲ್ಯಾಬ್‌ನ ಕಬ್ಬಿಣ ಕಿತ್ತು ಬಂದಿದೆ. ಎತ್ತರ ಪ್ರದೇಶದಿಂದ ಭಾರಿ ಪ್ರಮಾಣದಲ್ಲಿ ಮಳೆನೀರು ಬರುತ್ತಿದ್ದು, ಇದನ್ನು ಚರಂಡಿಗೆ ಸಂಪರ್ಕ ಕಲ್ಪಿಸಿಲ್ಲ. ಇದರಿಂದ ಮಳೆನೀರು ಸಂಪೂರ್ಣ ರಸ್ತೆಯಲ್ಲೇ ಹರಿದು ರಸ್ತೆ ಮತ್ತಷ್ಟು ಗುಂಡಿ ಬೀಳುತ್ತಿದೆ.
ಕಳಪೆ ಕಾಮಗಾರಿ ಆರೋಪ: ಗುಂಡಿ ಬಿದ್ದಿರುವ ರಸ್ತೆಯಲ್ಲಿ ದ್ವಿಚಕ್ರ ಸವಾರರು ಹಾಗೂ ಆಟೋ ಚಾಲಕರು ಸಮಸ್ಯೆ ಎದುರಿಸುತ್ತಿದ್ದಾರೆ. ಲಕ್ಷಾಂತರ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಿರುವ ರಸ್ತೆ ಒಂದೆರಡು ವರ್ಷದಲ್ಲಿ ಶಿಥಿಲಗೊಳ್ಳಲು ಗುತ್ತಿಗೆದಾರರ ಕಳಪೆ ಕಾಮಗಾರಿ ಕಾರಣವೆಂದು ಸ್ಥಳೀಯರು ಆರೋಪಿಸಿದ್ದಾರೆ.
ಈಗಾಗಲೇ ಪೂವನಡ್ಕ ಹೊಳೆಗೆ ಸೇತುವೆ ನಿರ್ಮಾಣಕ್ಕೆ ಪುತ್ತೂರು ಶಾಸಕ ಅಶೋಕ್ ರೈ ಪ್ರಯತ್ನದಿಂದ ಹಣ ಮಂಜೂರಾಗಿದ್ದು, ಸೇತುವೆ ಕಾಮಗಾರಿ ಪೂರ್ಣಗೊಂಡಲ್ಲಿ ರಸ್ತೆಯಲ್ಲಿ ವಾಹನ ದಟ್ಟಣೆ ಮತ್ತಷ್ಟು ಹೆಚ್ಚಲಿದೆ. ಶಿಥಿಲಗೊಂಡಿರುವ ರಸ್ತೆ ಮತ್ತಷ್ಟು ಹದಗೆಡುವ ಮೊದಲು ದುರಸ್ತಿ ಕಾರ್ಯ ಕೈಗೊಳ್ಳುವಂತೆ ನಾಗರಿಕರು ಲೋಕೋಪಯೋಗಿ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಪೆರ್ಲ-ಪೂವನಡ್ಕ ರಸ್ತೆ ಆಯುರ್ವೇದ ಆಸ್ಪತ್ರೆ ವಠಾರದಲ್ಲಿ ಈಗಾಗಲೇ ಚರಂಡಿ ವ್ಯವಸ್ಥೆಯೊಂದಿಗೆ ಕಾಮಗಾರಿ ನಡೆಸಲಾಗಿದೆ. ಗುಂಡಿ ಬಿದ್ದು ಹಾಳಾಗಿರುವ ರಸ್ತೆಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

— - ಕೆ.ಭರತನ್, ಪ್ರಭಾರ ಸಹಾಯಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಬದಿಯಡ್ಕ ವಿಭಾಗ