ಬಜ್ಪೆ-ಕೈಕಂಬ-ಪೊಳಲಿ ರಾಜ್ಯ ಹೆದ್ದಾರಿಯಲ್ಲಿ ಡಾಂಬರು ಕಿತ್ತು ಹೋಗಿದ್ದು ಅಪಾಯ ಆಹ್ವಾನಿಸುತ್ತಿದೆ. 
ಉಡುಪಿ

ವಾಹನ ಸಂಚಾರಕ್ಕೆ ಸಂಚಕಾರ

ಇಂದಿರಾ ಎನ್ ಕೆ

ಗುರುಪುರ: ಬಜ್ಪೆ-ಕೈಕಂಬ-ಪೊಳಲಿ ಮೂಲಕ ಬಿ.ಸಿ.ರೋಡ್ ಸಂಪರ್ಕದ ರಾಜ್ಯ ಹೆದ್ದಾರಿಯ ಕೈಕಂಬದಿಂದ ಬಜ್ಪೆವರೆಗಿನ ಡಾಂಬರು ರಸ್ತೆ ಬಹುತೇಕ ಕಿತ್ತುಹೋಗಿದ್ದು, ವಾಹನ ಸಂಚಾರ ತೀವ್ರ ಸಂಚಕಾರಕ್ಕೆ ಎಡೆ ಮಾಡಿಕೊಟ್ಟಂತಿದೆ.

ಹೆದ್ದಾರಿಯ ಬಜ್ಪೆ ಹಳೇ ಪೊಲೀಸ್ ಠಾಣೆ ಎದುರು, ಸುಂಕದಕಟ್ಟೆ, ಪಡುಪೆರಾರದಿಂದ ಗುರುಪುರ ಕೈಕಂಬದವರೆಗೆ ಅಲ್ಲಲ್ಲಿ ಭಾರಿ ಹೊಂಡಗುಂಡಿಗಳು ಬಿದ್ದಿವೆ. ರಸ್ತೆಯ ಕೆಲವು ಕಡಿದಾದ ತಿರುವುಗಳಲ್ಲಿ ಉಂಟಾಗಿರುವ ಹೊಂಡಗಳು ದ್ವಿಚಕ್ರ ವಾಹನಗಳಿಗೆ ಅಪಾಯವೊಡ್ಡುವಂತಿದೆ. ಮಳೆ ನೀರು ತುಂಬಿಕೊಂಡಿರುವ ಕೆಲವು ಹೊಂಡಗಳು ಅಪಘಾತಕ್ಕೆ ಆಹ್ವಾನ ನೀಡುತ್ತ್ತಿವೆ. ಇಲ್ಲೆಲ್ಲ ವಾಹನ ಸಂಚಾರ ಅಸಾಧ್ಯವಾಗಿದೆ.
ಈಗಾಗಲೇ ಇಲ್ಲಿನ ಹೊಂಡಗಳಿಗೆ ಬಿದ್ದ ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾಗಿವೆ. ಕೆಲವು ಗಾಯಗೊಂಡಿದ್ದಾರೆ. ಗುಂಡಿ ತಪ್ಪಿಸಲು ಹೋಗಿ ಮತ್ತೊಂದು ಗುಂಡಿಗೆ ಬೀಳುವುದು ಅಥವಾ ಹಿಂಬದಿ ವಾಹನ ಡಿಕ್ಕಿಯಾಗುವುದು ಇಲ್ಲಿ ಸಾಮಾನ್ಯವಾಗಿದೆ.
ಪಿಡಬ್ಲ್ಯುಡಿಯ ತೀವ್ರ ನಿರ್ಲಕ್ಷ್ಯದಿಂದ ಈ ರೋಡ್ ಪ್ರತಿ ಮಳೆಗಾಲದಲ್ಲೂ ತೋಡಿನಂತಾಗುತ್ತದೆ. ಈ ವರ್ಷ ಅತಿ ಹೆಚ್ಚು ಪ್ರಮಾಣದಲ್ಲಿ ಡಾಂಬರು ಕಿತ್ತು ಹೋಗಿದೆ. ಮಳೆಗಾಲಕ್ಕೆ ಮುಂಚಿತವಾಗಿ ಬಜ್ಪೆಯಿಂದ ಗುರುಪುರ ಕೈಕಂಬದವರೆಗೆ ಡಾಂಬರು ಅಳವಡಿಸುತ್ತಿದ್ದರೆ ವಾಹನ ಸವಾರರಿಗೆ ಇಷ್ಟೊಂದು ಸಂಕಷ್ಟ ಎದುರಾಗುತ್ತಿರಲಿಲ್ಲ ಎಂದು ಕೈಕಂಬದ ರಿಕ್ಷಾ ಚಾಲಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

ಚರಂಡಿ ಇಲ್ಲದ ರಸ್ತೆ

ಹೆದ್ದಾರಿಯ ಉದ್ದಕ್ಕೂ ಎರಡೂ ಪಾರ್ಶ್ವಗಳಲ್ಲಿ ಸಾಲು ಮರಗಳು ಇದ್ದು, ಮಳೆಗಾಲಕ್ಕೆ ಮುನ್ನ ಇವುಗಳ ಕೊಂಬೆರೆಂಬೆ ತೆರವುಗೊಳಿಸದ ಕಾರಣ ಈ ಭಾಗದಲ್ಲಿ ದಿನಪೂರ್ತಿ ನೆರಳಿದ್ದು, ನೀರು ಆವಿಯಾಗುವುದಿಲ್ಲ. ಜತೆಗೆ, ಚರಂಡಿ ಇಲ್ಲದ ಹೆದ್ದಾರಿಯಲ್ಲಿ ಯಥೇಚ್ಛ ಮಳೆ ನೀರು ಹರಿಯುತ್ತದೆ ಮತ್ತು ಹೊಂಡಗುಂಡಿಗಳಲ್ಲಿ ನೀರು ತುಂಬಿಕೊಂಡಿರುತ್ತದೆ.