ಮೊಗ್ರಾಲ್ ಪುತ್ತೂರು ರಾಷ್ಟ್ರೀಯ ಹೆದ್ದಾರಿಯ ಬಳಿಯ ಕಿರಿದಾದ ಸರ್ವೀಸ್ ರಸ್ತೆಯ ಅಂಡರ್‌ಪಾಸ್ ಬಳಿ ಸಂಚಾರ ದಟ್ಟಣೆ ಇರುವುದು. 
ಉಡುಪಿ

ಮೊಗ್ರಾಲ್ ಪುತ್ತೂರು ಸರ್ವೀಸ್ ರಸ್ತೆಯಲ್ಲಿ ಸಂಚಾರ ದಟ್ಟಣೆ

ವಿಜಯವಾಣಿ ಸುದ್ದಿಜಾಲ ಕುಂಬಳೆ

ತಲಪ್ಪಾಡಿಚೆಂಗಳ ರೀಚ್‌ನ ಮೊಗ್ರಾಲ್-ಪುತ್ತೂರು ರಾಷ್ಟ್ರೀಯ ಹೆದ್ದಾರಿ ಬಳಿಯ ಕಿರಿದಾದ ಸರ್ವೀಸ್ ರಸ್ತೆಯ ಅಂಡರ್‌ಪಾಸ್ ಬಳಿ ಸಂಚಾರ ದಟ್ಟಣೆ ನಿರಂತರವಾಗಿದೆ. ಜನದಟ್ಟಣೆಯ ಪ್ರದೇಶವಾಗಿರುವ ಪೇಟೆಯಲ್ಲಿ ದ್ವಿಮುಖ ಸಂಚಾರ ವಾಹನಗಳು, ಅಂಡರ್‌ಪಾಸ್‌ನಲ್ಲಿ ಬರುವ ವಾಹನಗಳು ಮತ್ತು ಸರ್ವೀಸ್ ರಸ್ತೆಯ ಪಾದಚಾರಿ ವಾರ್ಗದಲ್ಲಿ ಆಟೋರಿಕ್ಷಾ, ಬಸ್, ಭಾರಿ ವಾಹನಗಳು ಬಂದಾಗ ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರಕ್ಕೆ ತೀವ್ರ ಸಮಸ್ಯೆಯಾಗುತ್ತದೆ.
ಅಂಡರ್‌ಪಾಸ್ ಅವಲಂಬನೆ: ಮೊಗ್ರಾಲ್ ಪುತ್ತೂರು ಪಳ್ಳಿಕುನ್ನು ಮತ್ತು ಕಲ್ಲಂಗೈ ಪ್ರದೇಶಗಳ ಜನರು ರಾಷ್ಟ್ರೀಯ ಹೆದ್ದಾರಿಯನ್ನು ದಾಟಲು ಮೊಗ್ರಾಲ್ ಪುತ್ತೂರು ಅಂಡರ್‌ಪಾಸ್ ಅವಲಂಬಿಸಿರುವುದು ಕೂಡ ಸಂಚಾರ ದಟ್ಟಣೆಗೆ ಕಾರಣವಾಗುತ್ತಿದೆ. ವಸತಿ ಪ್ರದೇಶವಾಗಿರುವ ಇಲ್ಲಿ ಪ್ರತಿನಿತ್ಯ ಪಾದಚಾರಿಗಳು, ವಿದ್ಯಾರ್ಥಿಗಳು ರಸ್ತೆ ದಾಟಲು ಹರಸಾಹಸಪಡಬೇಕಿದೆ.
ಆಟೋಗಳ ಪಾರ್ಕಿಂಗ್: ಮೊಗ್ರಾಲ್ ಪುತ್ತೂರಿನಲ್ಲಿ ಪ್ರಸ್ತುತ 25 ಆಟೋರಿಕ್ಷಾ ಚಾಲಕರಿಗೆ ರಿಕ್ಷಾಗಳನ್ನು ನಿಲ್ಲಿಸಲು ನಿಲ್ದಾಣವಿಲ್ಲದ ಕಾರಣ ಅಂಡರ್‌ಪಾಸ್ ಬಳಿಯ ಸರ್ವೀಸ್ ರಸ್ತೆಯ ಪಾದಚಾರಿ ವಾರ್ಗದಲ್ಲೇ ರಿಕ್ಷಾಗಳನ್ನು ಪಾರ್ಕ್ ಮಾಡುತ್ತಾರೆ. ಎರಡು ದೊಡ್ಡ ವಾಹನಗಳು ವಿರುದ್ಧ ದಿಕ್ಕಿನಲ್ಲಿ ಬಂದಾಗ ರಿಕ್ಷಾಗಳು ನಿಂತಿರುವುದರಿಂದ ದಾರಿ ಕೊಡಲು ಸಾಧ್ಯವಾಗದಂತಹ ಸ್ಥಿತಿ ಇದೆ. ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಯತ್ತ ಗಮನಹರಿಸಿ ಪರಿಹಾರ ಮಾರ್ಗಗಳನ್ನು ಕಂಡುಕೊಂಡು ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.