ಬೆಳಕಿನ ವ್ಯವಸ್ಥೆಯಿಲ್ಲದೆ ಕತ್ತಲಲ್ಲಿರುವ ತ್ರಾಸಿ ಬೀಚ್. 
ಉಡುಪಿ

ಕತ್ತಲೆಯಲ್ಲಿ ತ್ರಾಸಿ ಬೀಚ್!

ಇಂದಿರಾ ಎನ್ ಕೆ
ಕುಂದಾಪುರ: ತ್ರಾಸಿಯ ಕಡಲ ತೀರದಲ್ಲಿ ಕಳೆದ ಕೆಲವು ಸಮಯದಿಂದ ರಾತ್ರಿ ವೇಳೆ ಬೆಳಕಿನ ವ್ಯವಸ್ಥೆ ಇಲ್ಲದೆ ಪ್ರವಾಸಿಗರಿಗೆ ತೊಂದರೆಯಾಗುತ್ತಿದೆ.
ತ್ರಾಸಿ-ಮರವಂತೆ ಬೀಚ್‌ಗೆ ಪ್ರತಿನಿತ್ಯ ಹೆದ್ದಾರಿಯಲ್ಲಿ ಸಂಚರಿಸುವ ಸಾವಿರಾರು ಮಂದಿ ಬರುತ್ತಾರೆ. ದಿನವಿಡಿ ಇಲ್ಲಿ ಪ್ರವಾಸಿಗರ ಜನದಟ್ಟಣೆ ಇರುತ್ತದೆ. ಸಂಜೆ ನಂತರವೂ ಇಲ್ಲಿಗೆ ಸಾಕಷ್ಟು ಮಂದಿ ಪ್ರವಾಸಿಗರು ಬರುತ್ತಾರೆ. ಆದರೆ ಇಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲದಿರುವುದರಿಂದ ಸಮಸ್ಯೆಯಾಗುತ್ತಿದೆ. ಬೀಚ್ ಬಳಿ ಸರಿಯಾದ ಹೈಮಾಸ್ಟ್ ಅಥವಾ ಯಾವುದೇ ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ, ಸಂಜೆಯಾಗುತ್ತಿದ್ದಂತೆ ಬೀಚ್‌ನಲ್ಲಿ ಏನೂ ಕಾಣದಂತಿದೆ.
ಪ್ರವಾಸೋದ್ಯಮ ಇಲಾಖೆ ವತಿಯಿಂದ ಕರ್ನಾಟಕ ಟೂರಿಸಂ ಡೆವಲಪ್‌ಮೆಂಟ್‌ನಿಂದ ಇಲ್ಲಿ 9.95 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕಳೆದೆರಡು ವರ್ಷಗಳಿಂದ ನಡೆಯುತ್ತಿದೆ. ಸೀವಾಕ್, ವಿಶಾಲ ಪಾರ್ಕಿಂಗ್ ವ್ಯವಸ್ಥೆ, ಫುಡ್ ಕೋರ್ಟ್, ಸೈಕಲ್ ಟ್ರ್ಯಾಕ್, ಮಕ್ಕಳ ಪಾರ್ಕ್ ಸಹಿತ ವಿವಿಧ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಬೀಚ್‌ನಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆಯಿಲ್ಲದ ಕಾರಣ ಈಗ ಅಕ್ರಮ ಚಟುವಟಿಕೆಗಳ ತಾಣವಾಗಿ ಬದಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕಳೆದೊಂದು ವರ್ಷದಿಂದ ನಿರ್ವಹಣೆಗಾಗಿ ಪ್ರವಾಸೋದ್ಯಮ ಇಲಾಖೆಯಿಂದ ಹೊಸ ಟೆಂಡರ್ ಕರೆದಿಲ್ಲ. ಹಳೆಯ ಟೆಂಡರ್ ಅವಧಿ ಮುಗಿದಿದೆ. ಆದರೂ ವಾಹನ ಪಾರ್ಕಿಂಗ್‌ಗೆ ಶುಲ್ಕ ವಿಧಿಸುತ್ತಿದ್ದಾರೆ. ನಿರ್ವಹಣೆ ಟೆಂಡರ್ ಕರೆಯದಿರುವುದರಿಂದ ಬೀಚ್ ಬಳಿ ರಾತ್ರಿ ವೇಳೆ ಬೆಳಕಿನ ವ್ಯವಸ್ಥೆಯಿಲ್ಲದೆ ಸಮಸ್ಯೆಯಾಗುತ್ತಿದೆ. ಹೊಸದಾಗಿ ಟೆಂಡರ್ ಕರೆಯಲಿ ಅಥವಾ ಸ್ಥಳೀಯ ಗ್ರಾ.ಪಂ.ಗೆ ನಿರ್ವಹಣೆ ಜವಾಬ್ದಾರಿ ಕೊಡಲಿ.

— ಮಿಥುನ್ ದೇವಾಡಿಗ ತ್ರಾಸಿ ಗ್ರಾ.ಪಂ. ಮಾಜಿ ಅಧ್ಯಕ್ಷ