ಉಡುಪಿ: ಜಿಲ್ಲೆಯ ವಿದ್ಯುತ್ ಇಲಾಖೆಯ ವೈಫಲ್ಯ ಖಂಡಿಸಿ ಭಾರತೀಯ ಜನತಾ ಪಾರ್ಟಿಯ ಉಡುಪಿ ನಗರ ವತಿಯಿಂದ ಹಾಗೂ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ನೇತೃತ್ವದಲ್ಲಿ ಅ.28ರಂದು ಸಂಜೆ 6:30ಕ್ಕೆ ಪಂಜಿನ ಮೆರವಣಿಗೆ ಮೂಲಕ ಪ್ರತಿಭಟನಾ ಜಾಥಾ ಆಯೋಜಿಸಲಾಗಿದೆ.
ಉಡುಪಿ ಬೋರ್ಡ್ ಹೈಸ್ಕೂಲ್ ಬಳಿಯಿಂದ ಪಂಜಿನ ಮೆರವಣಿಗೆ ಆರಂಭಗೊಂಡು ಕೆ.ಎಂ. ಮಾರ್ಗವಾಗಿ ಸಾಗಿ ಡಯಾನಾ ಸರ್ಕಲ್ನಿಂದ ಮೆಸ್ಕಾಂ ಕಚೇರಿ ಬಳಿ ಸಮಾಪನಗೊಳ್ಳಲಿದೆ.
ಜಿಲ್ಲಾದ್ಯಂತ ನಿರಂತರ ಪವರ್ ಕಟ್, ಲೋ ವೋಲ್ಟೇಜ್ ಸಮಸ್ಯೆ, ವಿದ್ಯುತ್ ಕಣ್ಣಾಮುಚ್ಚಾಲೆ, ಟ್ರಾನ್ಸ್ಫಾರ್ಮರ್ ಕೊರತೆ, ಕಳಪೆ ನಿರ್ವಹಣೆ, ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಹಾಗೂ ಇನ್ನಿತರ ಸಮಸ್ಯೆಯಿಂದ ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ.
ರಾಜ್ಯ ಸರ್ಕಾರ ಇನ್ನಾದರೂ ಮೆಸ್ಕಾಂನಲ್ಲಿರುವ ಸಮಸ್ಯೆ ಪರಿಹರಿಸಿ ಜಿಲ್ಲೆಯ ಜನತೆಗೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ ಅಮೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.