ಜಿಲ್ಲಾ ಇಎಸ್ಐ ಚಿಕಿತ್ಸಾಲಯದ ಆಡಳಿತ ವಿಮಾ ವೈದ್ಯಾಧಿಕಾರಿ ಡಾ. ಹೇಮಂತ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು.
ಉಡುಪಿ: ತಂಬಾಕು ಬಳಕೆ ಕೇವಲ ಒಂದು ಸಾಮಾನ್ಯ ಅಭ್ಯಾಸವಲ್ಲ, ಅದು ಗಂಭೀರವಾದ ನಿಕೋಟಿನ್ ವ್ಯಸನವಾಗಿದೆ. ಇದು ವ್ಯಕ್ತಿಯ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಆರೋಗ್ಯದ ಮೇಲೆ ವ್ಯಾಪಕ ಪರಿಣಾಮ ಬೀರುತ್ತದೆ. ತಂಬಾಕು ಸೇವನೆಯಿಂದ ತಾತ್ಕಾಲಿಕ ಸಂತೋಷ ದೊರಕಿದರೂ, ದೀರ್ಘಾವಧಿಯಲ್ಲಿ ಅದು ಆತಂಕ, ಖಿನ್ನತೆ, ತೀವ್ರ ಅವಲಂಬನೆ ಮುಂತಾದ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ಬಾಳಿಗಾ ಆಸ್ಪತ್ರೆಯ ವೈದ್ಯಕಿಯ ನಿರ್ದೇಶಕ ಡಾ. ಪಿ.ವಿ. ಭಂಡಾರಿ ಹೇಳಿದರು.
ಡಾ ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆಯಲ್ಲಿ ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಐಎಂಎ ಉಡುಪಿ ಕರಾವಳಿ, ಆಶ್ರಯದಾತ ಆಟೋ ಯೂನಿಯನ್, ಮಣಿಪಾಲ ಆಟೋ ಚಾಲಕರ ಮತ್ತು ಮಾಲೀಕರ ಸಂಘ, ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಹಾಗೂ ಕಮಲ ಎ. ಬಾಳಿಗ ಚಾರಿಟೇಬಲ್ ಟ್ರಸ್ಟ್ ಮತ್ತು ಇತರ ಸಂಘಟನೆಗಳ ಆಶ್ರಯದಲ್ಲಿ ನಡೆದ ತಂಬಾಕು ವಿಮುಕ್ತಿ ಚಿಕಿತ್ಸಾ ಶಿಬಿರದಲ್ಲಿ ಅವರು ಮಾಹಿತಿ ನೀಡಿದರು.
ಇತ್ತೀಚಿನ ದಿನಗಳಲ್ಲಿ ಯುವಕರನ್ನು ಗುರಿಯಾಗಿಸಿಕೊಂಡು ಮಾರಾಟವಾಗುತ್ತಿರುವ ವೇಪ್ಗಳು, ಫ್ಲೇವರ್ಡ್ ತಂಬಾಕು ಉತ್ಪನ್ನಗಳು, ಗುಟ್ಕಾ, ಸಿಗರೇಟ್ಗಳು ಹಾಗೂ ಬೀಡಿಗಳು ಕೂಡ ಆರೋಗ್ಯಕ್ಕೆ ಸಮಾನವಾಗಿ ಹಾನಿಕಾರಕವಾಗಿವೆ ಎಂದು ಎಚ್ಚರಿಸಿದರು.
ಉಡುಪಿ ಜಿಲ್ಲಾ ಇಎಸ್ಐ ಚಿಕಿತ್ಸಾಲಯದ ಆಡಳಿತ ವಿಮಾ ವೈದ್ಯಾಧಿಕಾರಿ ಡಾ. ಹೇಮಂತ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು.
ಆಶ್ರಯದಾತ ಆಟೋ ಯೂನಿಯನ್ ಪ್ರಧಾನ ಕಾರ್ಯದರ್ಶಿ ಶಿವಾನಂದ ಮೂಡುಬೆಟ್ಟು, ಮಣಿಪಾಲ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಗಣೇಶ್ ಪ್ರಭು, ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರಮನೆ, ಡಾ. ದೀಪಕ್ ಮಲ್ಯ, ಡಾ. ಮಾನಸ್ ಇ.ಆರ್., ಐಎಂಎ ಉಡುಪಿ ಕರಾವಳಿಯ ಗೌರವ ಕಾರ್ಯದರ್ಶಿ ಡಾ. ಸುನಿಲ್ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಉಪಸ್ಥಿತರಿದ್ದರು.