ವೈದ್ಯಕಿಯ ಅಧೀಕ್ಷಕ ಡಾ. ಶಶಿಕಿರಣ್​ ಉಮಾಕಾಂತ್​ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.  
ಉಡುಪಿ

ಜೂ. 1ರಿಂದ ಟಿಎಂಎ ಪೈ ಆಸ್ಪತ್ರೆ ನೂತನ ಕಟ್ಟಡಕ್ಕೆ ಸ್ಥಳಾಂತರ

ಉಡುಪಿ: ಜೋಡುಕಟ್ಟೆ ಸಮೀಪದಲ್ಲಿರುವ ಡಾ. ಟಿ. ಎಂ. ಎ. ಪೈ ಆಸ್ಪತ್ರೆ ಕಿನ್ನಿಮೂಲ್ಕಿ ಸ್ವಾಗತಗೋಪುರ ಬಳಿ 1.4 ಎಕರೆ ವಿಸ್ತಾರದ ಸುಸಜ್ಜಿತ ಕ್ಯಾಂಪಸ್​ಗೆ ಸ್ಥಳಾಂತರಗೊಳ್ಳಲಿದ್ದು, ಜೂನ್​ 1 ರಿಂದ ಸಾರ್ವಜನಿಕ ಸೇವೆಗೆ ಮುಕ್ತವಾಗಲಿದೆ ಎಂದು ವೈದ್ಯಕಿಯ ಅಧೀಕ್ಷಕ ಡಾ. ಶಶಿಕಿರಣ್​ ಉಮಾಕಾಂತ್​ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಗಿಗಳು ಮತ್ತು ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಹೆದ್ದಾರಿ ಹಾಗೂ ಒಳರಸ್ತೆಯ ಎರಡೂ ಕಡೆಗಳಿಂದ ಪ್ರವೇಶ ಮತ್ತು ನಿರ್ಗಮನ ದ್ವಾರಗಳ ವ್ಯವಸ್ಥೆ ಹೊಂದಿದ್ದು, ಅತ್ಯಾಧುನಿಕ ಹಾಗೂ ಉನ್ನತಿಕರಿಸಿದ ಮೂಲಸೌಕರ್ಯಗಳೊಂದಿಗೆ ಉದ್ಘಾಟನೆಗೆ ಸಜ್ಜುಗೊಂಡಿದೆ. ಮೇ 22 ರಿಂದ ಮೇ 24 ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಸಾರ್ವಜನಿಕರಿಗೆ ಹೊಸ ಆಸ್ಪತ್ರೆಯ ಸೌಲಭ್ಯಗಳನ್ನು ವೀಕ್ಷಿಸಲು ವಿಶೇಷ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ತಳ ಅಂತಸ್ತು, ನೆಲ ಮಹಡಿ ಹಾಗೂ ಆರು ಮಹಡಿಗಳನ್ನು ಒಳಗೊಂಡಿರುವ ಒಟ್ಟು 1.37 ಲಕ್ಷ ಚದರ ಅಡಿ ವಿಸ್ತೀರ್ಣದ ಆಸ್ಪತ್ರೆಯು ಒಟ್ಟು 152 ಹಾಸಿಗೆಗಳ ಸಾಮರ್ಥ್ಯ ಹೊಂದಿದ್ದು, ಜನರಲ್​ ವಾರ್ಡ್​, ಸೆಮಿ ಸ್ಪೆಷಲ್​, ಸ್ಪೆಷಲ್​ ಹಾಗೂ ಅಲ್ಟ್ರಾ ಸ್ಪೆಷಲ್​ ಕೊಠಡಿಗಳ ಸೌಲಭ್ಯವಿದೆ. ಅಪಘಾತ ಮತ್ತು ತುರ್ತು ಆರೈಕೆಗಾಗಿ 10 ವಿಶೇಷ ಹಾಸಿಗೆಗಳು ಹಾಗೂ ಸದಾ ಸನ್ನದ್ಧವಾಗಿರುವ ಆಂಬ್ಯುಲೆನ್ಸ್​ ಬೆಂಬಲದೊಂದಿಗೆ 24*7 ತುರ್ತು ಅಪಘಾತ ಚಿಕಿತ್ಸಾ ಘಟಕ ಲಭ್ಯವಿರುತ್ತದೆ. ಐಸಿಯು ಸಾಮರ್ಥ್ಯವನ್ನು 25 ಹಾಸಿಗೆಗಳಿಗೆ ವಿಸ್ತರಿಸಲಾಗಿದ್ದು, ಇದರಲ್ಲಿ ಜನರಲ್​ ಐಸಿಯು, ಐಸೊಲೇಶನ್​ ಐಸಿಯು, ಮಕ್ಕಳ ಐಸಿಯು ಹಾಗೂ ನವಜಾತ ಶಿಶುಗಳ ಐಸಿಯು ಸೇರಿವೆ. ಡಯಾಲಿಸಿಸ್​ ಹಾಸಿಗೆಗಳ ಸಂಖ್ಯೆಯನ್ನು 8 ಕ್ಕೆ ಹೆಚ್ಚಿಸಲಾಗಿದೆ. ತೀವ್ರ ನಿಗಾ ಘಟಕದ ರೋಗಿಗಳಿಗೂ ಡಯಾಲಿಸಿಸ್​ ಮಾಡುವ ಸಮಗ್ರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಡಾ. ಟಿಎಂಎ ಪೈ ಆಸ್ಪತ್ರೆ ಆಡಳಿತ ಮುಖ್ಯಸ್ಥ ದೀಪಕ್​ ಪ್ರಭು ಮಾತನಾಡಿ, 1984 ರಲ್ಲಿ ಸ್ಥಾಪನೆಯಾದ ಆಸ್ಪತ್ರೆಯು ಉಡುಪಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದು, ಪ್ರಸ್ತುತ ವಿಶಾಲವಾದ ಮತ್ತು ಆಧುನಿಕ ಕ್ಯಾಂಪಸ್​ಗೆ ಸ್ಥಳಾಂತರಗೊಳ್ಳುತ್ತಿದೆ. ರೋಗಿಗಳ ಸುರಕ್ಷತೆ, ಗುಣಮಟ್ಟದ ಆರೈಕೆ, ಅವಶ್ಯ ಸೌಕರ್ಯಕ್ಕೆ ಒತ್ತು ನೀಡುವ ಮೂಲಕ ಹೊಸ ಆಸ್ಪತ್ರೆಯನ್ನು ವಿನ್ಯಾಸಗೊಳಿಸಲಾಗಿದೆ ಎಂದರು.
ತಜ್ಞರ ಸೇವೆ
ಆಸ್ಪತ್ರೆಯಲ್ಲಿ ಜನರಲ್​ ಮೆಡಿಸಿನ್​, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ಪೀಡಿಯಾಟ್ರಿಕ್ಸ್​, ಆಥೋರ್ಪೆಡಿಕ್ಸ್​, ಇ.ಎನ್​.ಟಿ, ಚರ್ಮರೋಗ, ದಂತವೈದ್ಯಕಿಯ, ನೇತ್ರಶಾಸ್ತ್ರ, ಫಿಸಿಯೋಥೆರಪಿ, ಮನೋವೈದ್ಯಶಾಸ್ತ್ರ ಸೇರಿದಂತೆ ಹಲವು ಪ್ರಮುಖ ವಿಭಾಗಗಳಿದ್ದು, ಮೊದಲ ಮಹಡಿಯಲ್ಲಿ ವಿಶಾಲವಾದ ಹೊರರೋಗಿ ಸಮಾಲೋಚನಾ ಕೊಠಡಿಗಳಿವೆ. ಕಾರ್ಡಿಯಾಲಜಿ, ಸಾಂಕ್ರಾಮಿಕ ರೋಗಗಳು, ಸರ್ಜಿಕಲ್​ ಮತ್ತು ಮೆಡಿಕಲ್​ ಆಂಕೊಲಾಜಿ (ಕ್ಯಾನ್ಸರ್​ ಚಿಕಿತ್ಸೆ), ನರವಿಜ್ಞಾನ, ನೆಫ್ರಾಲಜಿ, ನರಶಸ್ತ್ರಚಿಕಿತ್ಸೆ, ಮಕ್ಕಳ ಶಸ್ತ್ರಚಿಕಿತ್ಸೆ, ಪ್ಲಾಸ್ಟಿಕ್​ ಸರ್ಜರಿ ಹಾಗೂ ಮೂತ್ರಶಾಸ್ತ್ರ ವಿಭಾಗದ ಪ್ರಮುಖ ತಜ್ಞ ವೈದ್ಯರು ಲಭ್ಯರಿದ್ದಾರೆ ಎಂದು ತಿಳಿಸಿದರು. ಆಸ್ಪತ್ರೆಯ ಉಪ ವೈದ್ಯಕಿಯ ಅಧೀಕ್ಷಕ ಡಾ. ರಾಜಾರಾಮ್​ ಪೈ ಉಪಸ್ಥಿತರಿದ್ದರು.