ಉಡುಪಿ, ಮಣಿಪಾಲ, ಕಾಪು, ಕಾರ್ಕಳದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಡ್ರಗ್ಸ್​ ಮಾರಾಟ ಮಾಡುತ್ತಿದ್ದ ಆರೋಪಿಗಳು ಹಾಗೂ ಬಂಧಿತರಿಂದ ವಶಪಡಿಸಿಕೊಂಡಿರುವ ಸೊತ್ತುಗಳು. 
ಉಡುಪಿ

ಡ್ರಗ್ಸ್​, ಹೈಡ್ರೋಗಾಂಜಾ ಮಾರಾಟ; ಮೂವರ ಬಂಧನ

* ಎಂಡಿಎಂಎ ಟ್ಯಾಬ್ಲೆಟ್​ ಪತ್ತೆ

*  3.31 ಲಕ್ಷ ರೂ. ಮೌಲ್ಯದ ಸೊತ್ತು ವಶ

ಉಡುಪಿ: ಶಿವಳ್ಳಿ ಗ್ರಾಮದ ಬುಡ್ನಾರ್​ನ ಸಾರ್ವಜನಿಕ ಸ್ಥಳದಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ಪೌಡರ್​, ಹೈಡ್ರೋಗಾಂಜಾ, ಎಂಡಿಎಂಎ ಟ್ಯಾಬ್ಲೆಟ್​ ಹೊಂದಿದ್ದ ಹಾಗೂ ಕಾಪು, ಉಡುಪಿ, ಮಣಿಪಾಲ, ಕಾರ್ಕಳದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 
ಉಡುಪಿ ತಾಲೂಕಿನ ಉದ್ಯಾವರ ಗ್ರಾಮದ ಪಿತ್ರೋಡಿಯ ವಿಜಯ್​ ಸದಾಶಿವ್​ ಪೂಜಾರಿ (36), ಉಡುಪಿ ಕುಕ್ಕಂದೂರು ಗ್ರಾಮದ ಹಾರ್ಜಿಡ್ಡು ನಿವಾಸಿ ಪಿ.ಎ. ಮಹಮ್ಮದ್​ ಸಮ್ಮಾಸ್​ (24), ಕಾರ್ಕಳ ತಾಲೂಕಿನ ಮಿಯಾರು ಗ್ರಾಮದ ಕುಂಟಿಬೈಲು ನಿವಾಸಿ ಆಕಾಶ್​ ರಘು ಶೆಟ್ಟಿ (20) ಬಂಧಿತರು.
ಆರೋಪಿಗಳ ಬಳಿಯಿದ್ದ 4 ಗ್ರಾಂ ಎಂಡಿಎಂಎ ಪೌಡರ್​, 2.5 ಗ್ರಾಂ ಹೈಡ್ರೋಗಾಂಜಾ, 3.65 ಗ್ರಾಂ ಎಂಡಿಎಂಎ ಟ್ಯಾಬ್ಲೆಟ್​, 3 ಗ್ರಾಂ ಗಾಂಜಾ ಹಾಗೂ ಡ್ರಗ್ಸ್​ ಸಾಗಾಟಕ್ಕೆ ಬಳಸಿದ ಒಂದು ಕಾರು ಸೇರಿ 3,31,500 ರೂ. ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ.
ಉಡುಪಿ ಉಪವಿಭಾಗದ ಪೊಲೀಸ್​ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು., ಮಲ್ಪೆ ಪೊಲೀಸ್​ ನಿರೀಕ್ಷಕ ರಾಮಚಂದ್ರ ನಾಯಕ್​ ನೇತೃತ್ವದ ಕಾರ್ಯಾಚರಣೆಯಲ್ಲಿ ಉಡುಪಿ ಸಂಚಾರ ಠಾಣೆಯ ಪಿಎಸ್​ಐ ಮಹೇಶ ಟಿ.ಎಂ., ಸೈಬರ್​ ಅಪರಾಧ ಪೊಲೀಸ್​ ಠಾಣಾ ಸಿಬ್ಬಂದಿ ಪ್ರವೀಣ್​ ಕುಮಾರ್​, ಹಿರಿಯಡ್ಕ ಪೊಲೀಸ್​ ಠಾಣೆಯ ಪ್ರವೀಣ್​ ಶೆಟ್ಟಿಗಾರ್​, ಮಲ್ಪೆ ವೃತ್ತ ಕಚೇರಿಯ ಇಂದ್ರೇಶ್​, ಹನುಮಂತ ಅಸ್ಕಿ, ಮನು ಕುಮಾರ್​, ರಶ್ಮೀ ಹೆಗಡೆ, ರವಿ ಕುಮಾರ್​, ಉಡುಪಿ ಸಂಚಾರ ಠಾಣೆಯ ಶ್ರೀನಿವಾಸ್​, ಸಂತೋಷ್​ ದಿನೇಶ್​ ಪಾಲ್ಗೊಂಡಿದ್ದರು.
ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.