ಬಂಟ್ವಾಳ: ಐದು ವರ್ಷಗಳ ಹಿಂದೆ ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಪಾಂಡೀಲು ಎಂಬಲ್ಲಿ ವೃದ್ಧೆಯೊಬ್ಬರನ್ನುವ ಕೊಲೆಗೈದು ಚಿನ್ನಾಭರಣ ದರೋಡೆ ಮಾಡಿದ ಪ್ರಕರಣದ ಮೂವರು ಅಪರಾಧಿಗಳಿಗೆ ದ.ಕ.ಜಿಲ್ಲಾ 2ನೇ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಅಮ್ಟಾಡಿ ಗ್ರಾಮದ ಏರ್ಯ ನಿವಾಸಿ ಏಲ್ಮಾ ಪ್ರೆಶ್ಚಿತ್ ಬರೆಟ್ಟೋ, ಮಂಗಳೂರು ಉರ್ವ ಹೊಯ್ಗೆಬೈಲಿನ ನಿವಾಸಿ ಪ್ರಸ್ತುತ ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ಕೇದಿಗೆಯಲ್ಲಿ ವಾಸವಿರುವ ಚರಣ್ ಕುಮಾರ್ ಹಾಗೂ ನರಿಕೊಂಬು ಗ್ರಾಮದ ಅಂತರ ನಿವಾಸಿ ಸತೀಶ ಎ.ಆರ್. ಜೀವಾವಧಿ ಶಿಕ್ಷೆಗೊಳಗಾದವರು.
ಪ್ರಕರಣದ ವಿವರ
ಅಮ್ಟಾಡಿ ನಿವಾಸಿ ಬೆನೆಡಿಕ್ಟ್ ಕಾರ್ಲೋ (73) ಅವರನ್ನು ಆರೋಪಿ ಏಲ್ಮಾ ಪ್ರೆಶ್ಚಿತ್ ಬರೆಟ್ಟೋ ನೋಡಿಕೊಳ್ಳುತ್ತಿದ್ದಳು. ವೃದ್ಧೆಯ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರ ಹಾಗೂ ಮನೆಯಲ್ಲಿದ್ದ ಇತರ ಚಿನ್ನಾಭರಣ ಗಮನಿಸಿ ಸುಲಿಗೆ ಮಾಡಲು ಸಂಚು ರೂಪಿಸಿದ ಏಲ್ಮಾ ತನ್ನ ಸ್ನೇಹಿತ ಸತೀಶ ನಾಯಕ್‌ನೊಂದಿಗೆ ಸೇರಿ ಆಹಾರದಲ್ಲಿ ವಿಷ ಪದಾರ್ಥ ಬೆರಸಿ ಬೆನೆಡಿಕ್ಟ್ ಕಾರ್ಲೋಗೆ ನೀಡಿದ್ದರು. ಆದರೆ ಬೆನಡಿಕ್ಟ್ ಸತ್ತಿರಲಿಲ್ಲ. ನಂತರ ಏಲ್ಮಾ ಸೂಚನೆಯಂತೆ ಆರೋಪಿ ಸತೀಶ ನಾಯಕ್ ಆತನ ಗೆಳೆಯನಾದ ಚರಣ್ ಕುಮಾರ್‌ನನ್ನು ಸಂಪರ್ಕಿಸಿ ಚಿನ್ನಾಭರಣದಲ್ಲಿ ಪಾಲು ನೀಡುವುದಾಗಿ ಒಪ್ಪಿಸಿ ದರೋಡೆಗೆ ಸಂಚು ರೂಪಿಸಿದ್ದರು. ಅದರಂತೆ 2021ರ ಜ.25ರಂದು ಏಲ್ಮಾ ಮತ್ತು ಚರಣ್ ಕುಮಾರ್ ಬೆನಡಿಕ್ಟ್ ಅವರನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆಗೈದು, 61.070 ಗ್ರಾಂ ತೂಕದ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದರು.
ಘಟನೆ ಕುರಿತು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಯು.ಡಿ.ಆರ್. ಪ್ರಕರಣ ದಾಖಲಾಗಿತ್ತು. ಅಂದಿನ ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಪ್ರಕರಣದ ತನಿಖೆ ನಡೆಸಿ ಮೂವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ದ.ಕ.ಜಿಲ್ಲಾ 2ನೇ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ವಿ.ಎನ್. ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.