ಉಡುಪಿಯ ಐವೈಸಿ ಸಭಾಂಗಣದಲ್ಲಿ ತಾಳಮದ್ದಳೆಯ ಹಿರಿಯ ಮೂವರು ಕಲಾವಿದರಿಗೆ 'ಯಕ್ಷಗಾನ ಕಲಾರಂಗ ಪ್ರಶಸ್ತಿ' ಪ್ರದಾನ ಮಾಡಲಾಯಿತು. ಟಿ. ಶ್ಯಾಮ್ ಭಟ್, ಮೋಹನ್ ಭಾಸ್ಕರ್ ಹೆಗಡೆ, ಡಾ. ತಾಳ್ತಜೆ ವಸಂತಕುಮಾರ್, ಕೃಷ್ಣಪ್ರಸಾದ್ ಅಡ್ಯಂತಾಯ, ಎಂ. ಗಂಗಾಧರ್ ರಾವ್, ಮುರಳಿ ಕಡೆಕಾರ್, ಪಳ್ಳಿ ಕಿಶನ್ ಹೆಗ್ಡೆ ಇತರರಿದ್ದರು.
* ಬಿವಿಟಿ ನಿರ್ದೇಶಕ ಮೋಹನ್ ಭಾಸ್ಕರ್ ಹೆಗಡೆ ಅಭಿಮತ
* ಹಿರಿಯ ಕಲಾವಿದರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ
ಉಡುಪಿ: ಕರಾವಳಿಯಲ್ಲಿ ತೆಂಕು-ಬಡಗು ಎಂಬ ಎರಡು ಪ್ರಭೇದವಿದೆ. ಇವೆರಡನ್ನೂ ಒಗ್ಗೂಡಿಸಿದ ಅಥವಾ ಮಧ್ಯದಲ್ಲಿ ನಿಂತು ಸರ್ಕಾರವೂ ಮಾಡಲಾಗದ ಕಾರ್ಯವನ್ನು ಯಕ್ಷಗಾನ ಕಲಾರಂಗ ಮಾಡುತ್ತಿದೆ. ಕಲಾವಿದರ ಯೋಗಕ್ಷೇಮಕ್ಕಾಗಿ ಶ್ರಮಿಸುತ್ತಿರುವ ಮಾದರಿ ಸಂಸ್ಥೆಯಿದು. ಯಕ್ಷಗಾನ ಪರಂಪರೆ ಹಿಂದೆಯೂ ಇತ್ತು, ಮುಂದೆಯೂ ಇರಲಿದೆ. ಎಂದೂ ನಶಿಸದ ಪರಂಪರೆಯಿದು. ಎಲ್ಲವನ್ನೂ ಸ್ವೀಕರಿಸಿ ತನ್ನತನ ಅಳವಡಿಸಿಕೊಳ್ಳುವುದು ಕಲೆಯ ಮನೋಧರ್ಮ. ಸ್ವಾರ್ಥಕ್ಕೆ ಪರಂಪರೆ ಬಳಸಕೂಡದು ಎಂದು ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ (ಬಿವಿಟಿ)ನ ನಿರ್ದೇಶಕ ಮೋಹನ್ ಭಾಸ್ಕರ್ ಹೆಗಡೆ ಕಿವಿಮಾತು ಹೇಳಿದರು.
ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಶನಿವಾರ (ಜು.11) ಸಂಜೆ ಆಯೋಜಿಸಿದ್ದ 'ಯಕ್ಷಗಾನ ಕಲಾರಂಗ ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಕೀರ್ತಿ ಬಂದಾಗಲೂ ಸಹ ತನ್ನ ಗುರುವಿನ ಹೆಸರನ್ನು ಹೇಳದವರು ಕಲಾವಿದನಾಗಲಾರ. ಕಲಾವಿದರನ್ನು ಮನಬಂದಂತೆ ಟೀಕಿಸುವ ಸ್ವಾತಂತ್ರ್ಯವೂ ಸಹ ಯಾರಿಗೂ ಇಲ್ಲ ಎಂದರು.
ಪ್ರಶಸ್ತಿ ಪ್ರದಾನ
ತಾಳಮದ್ದಳೆಯ ಹಿರಿಯ ಅರ್ಥಧಾರಿಗಳಾದ ಸುಳ್ಯದ ವೆಂಕಟರಾಮ ಭಟ್ ಅವರಿಗೆ ಡಿ.ಬಿ. ವೆಂಕಟಸುಬ್ಬಾ ಜೋಯಿಸ್ ಪ್ರಶಸ್ತಿ, ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಡಾ. ಜಿ.ಕೆ. ಹೆಗಡೆ ಅವರಿಗೆ ಮಟ್ಟು ಮುರಳೀಧರ್ ರಾವ್ ಪ್ರಶಸ್ತಿ, ಕಾರ್ಕಳದ ಕೋಟೆ ರಾಮ ಭಟ್ ಅವರಿಗೆ ಪೆರ್ಲ ಕೃಷ್ಣ ಭಟ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಾನವ ಹಕ್ಕುಗಳ ಆಯೋಗದ ಸದಸ್ಯ ಡಾ. ಟಿ. ಶ್ಯಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರಿನ ಹಿರಿಯ ವಿದ್ವಾಂಸ ಡಾ. ತಾಳ್ತಜೆ ವಸಂತಕುಮಾರ್ ಸುಭಾಶಂಸನೆ ನೆರವೇರಿಸಿದರು. ಕುಂಭಾಶಿಯ ಹಿರಿಯ ಸಾಮಾಜಿಕ ಧುರೀಣ ಕೃಷ್ಣಪ್ರಸಾದ್ ಅಡ್ಯಂತಾಯ ಉಪಸ್ಥಿತರಿದ್ದರು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ್ ರಾವ್ ಸ್ವಾಗತಿಸಿದರು. ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರ್ವಹಿಸಿದರು. ಪ್ರಶಸ್ತಿ ಪುರಸ್ಕೃತರನ್ನು ಸಂಸ್ಥೆಯ ನಾರಾಯಣ ಎಂ. ಹೆಗಡೆ ಪರಿಚಯಿಸಿದರು.
'ಶ್ರೀರಂಗ ತುಲಾಭಾರ' ತಾಳಮದ್ದಳೆ
ಸಭಾ ಕಾರ್ಯಕ್ರಮಕ್ಕೂ ಮೊದಲು ಖ್ಯಾತ ಕಲಾವಿದರ ಒಗ್ಗೂಡುವಿಕೆಯಲ್ಲಿ 'ಶ್ರೀರಂಗ ತುಲಾಭಾರ' ತಾಳಮದ್ದಳೆ ಪ್ರದರ್ಶನಗೊಂಡಿತು. ಅರ್ಥಧಾರಿಗಳಾದ ವಾಸುದೇವ ರಂಗ ಭಟ್ (ಕೃಷ್ಣ), ರಾಧಾಕೃಷ್ಣ ಕಲ್ಚಾರ್ (ನಾರದ), ಪವನ್ ಕಿರಣ್ ಕೆರೆ (ಸತ್ಯಭಾಮಾ), ಡಾ. ಪ್ರದೀಪ್ ವಿ. ಸಾಮಗ (ರುಕ್ಮಿಣಿ) ಪಾಲ್ಗೊಂಡಿದ್ದರು. ಹಿಮ್ಮೇಳದಲ್ಲಿ ಭಾಗವತರಾಗಿ ಕಾವ್ಯಶ್ರೀ ಅಜೇರು, ಮದ್ದಳೆಯಲ್ಲಿ ಕೃಷ್ಣ ಪ್ರಕಾಶ್ ಉಳಿತ್ತಾಯ, ಚಂಡೆಯಲ್ಲಿ ಚಂದ್ರಶೇಖರ್ ಆಚಾರ್ಯ ಸಾಥ್ ನೀಡಿದರು.
ಅನೇಕ ಕಲಾ ಪ್ರಾಕಾರಗಳಿವೆ. ಆದರೆ, ಯಾವ ಕಲೆಯಲ್ಲೂ ಸಹ ಕಲಾವಿದರ ಯೋಗಕ್ಷೇಮಕ್ಕಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ಸಂಸ್ಥೆಯಿಲ್ಲ. ಆ ನಿಟ್ಟಿನಲ್ಲಿ ಉಡುಪಿಯ ಯಕ್ಷಗಾನ ಕಲಾರಂಗವು ವಿಶಿಷ್ಟವಾದ ಸಂಸ್ಥೆಯಾಗಿದೆ. ಇಂತಹ ಸಂಘಟನೆಯನ್ನು ಹೊಂದಿರುವ ಯಕ್ಷಗಾನ ಕಲಾವಿದರು ನಿಜಕ್ಕೂ ಅದೃಷ್ಟವಂತರು. ಈ ಸಂಸ್ಥೆ ವಿಶ್ವಕ್ಕೆ ಮಾದರಿಯಾಗಿದೆ.
— ಟಿ. ಶ್ಯಾಮ್ ಭಟ್. ಮಾನವ ಹಕ್ಕುಗಳ ಆಯೋಗದ ಸದಸ್ಯ.
ಹಿರಿಯ ಕಲಾವಿದರನ್ನು ಗುರುತಿಸುವಿಕೆಯ ಸಂಸ್ಕೃತಿ ಅಗತ್ಯ. ಇದು ಕಲಾವಿದರಿಗೂ ಸಂತಸ ತರುತ್ತದೆ. ಆ ನಿಟ್ಟಿನಲ್ಲಿ ಉಡುಪಿಯ ಯಕ್ಷಗಾನ ಕಲಾರಂಗವು ವಿವಿಧ ಹಿರಿಯ ಕಲಾವಿದರ ಸ್ಮರಣಾರ್ಥ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ. ಮಹನೀಯರ ಹೆಸರಿನ ಪ್ರಶಸ್ತಿ ಸ್ವೀಕರಿಸುವುದು ನಮ್ಮಂತಹ ಕಲಾವಿದರಿಗೂ ಖುಷಿಯ ಸಂಗತಿ.
— ವೆಂಕಟ ರಾಮ ಭಟ್ ಸುಳ್ಯ. ಪ್ರಶಸ್ತಿ ಪುರಸ್ಕೃತರು.