ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿಗೆ ಆಯ್ಕೆಯಾದ ಹಿರಿಯ ಕಲಾವಿದರಾದ ಡಾ. ಜಿ.ಕೆ. ಹೆಗಡೆ ಹೊನ್ನಾವರ, ಕೋಟೆ ರಾಮ ಭಟ್​ ಕಾರ್ಕಳ ಮತ್ತು ವೆಂಕಟರಾಮ ಭಟ್ಟ ಸುಳ್ಯ. 
ಉಡುಪಿ

ಮೂವರು ಹಿರಿಯ ಕಲಾವಿದರು 'ಯಕ್ಷಗಾನ ಕಲಾರಂಗ' ಪ್ರಶಸ್ತಿಗೆ ಆಯ್ಕೆ

* ಜು.11ರಂದು ಐವೈಸಿ ಸಭಾಂಗಣದಲ್ಲಿ ಪ್ರದಾನ

* 'ಶ್ರೀರಂಗ ತುಲಾಭಾರ' ತಾಳಮದ್ದಲೆ ಪ್ರಸ್ತುತಿ

ಉಡುಪಿ: ಉಡುಪಿ ಯಕ್ಷಗಾನ ಕಲಾರಂಗದ ಪ್ರಶಸ್ತಿಗೆ ಮೂವರು ಕಲಾವಿದರು ಆಯ್ಕೆಯಾಗಿದ್ದಾರೆ. ಡಾ. ಜಿ.ಕೆ. ಹೆಗಡೆ ಹೊನ್ನಾವರ, ಕೋಟೆ ರಾಮ ಭಟ್​ ಕಾರ್ಕಳ ಮತ್ತು ವೆಂಕಟರಾಮ ಭಟ್ಟ ಸುಳ್ಯ ಆಯ್ಕೆಯಾಗಿದ್ದು, ಜು.11ರಂದು ಸಂಜೆ 4 ಗಂಟೆಗೆ ಸಂಸ್ಥೆಯ ಐವೈಸಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಕಲಾ ಪೋಕರಾದ ಮಟ್ಟಿ ಮುರಳೀಧರ್​ ರಾವ್​, ಅರ್ಥಧಾರಿ, ಪಂಡಿತ ಪೆರ್ಲ ಕೃಷ್ಣ ಭಟ್​ ಮತ್ತು ಈ ವರ್ಷದಿಂದ ಹೊರನಾಡು ಭೀಮೇಶ್ವರ್​ ಜೋಶಿ ಅವರು ತನ್ನ ಅಜ್ಜ ಡಿ.ಬಿ. ವೆಂಕಟಸುಬ್ಬ ಜೋಯಿಸ್​ ಸ್ಮರಣಾರ್ಥ ಸ್ಥಾಪಿಸಿದ 'ಯಕ್ಷಗಾನ ಕಲಾರಂಗ ಪ್ರಶಸ್ತಿ' ಇದಾಗಿದೆ. ಪ್ರತಿ ಪ್ರಶಸ್ತಿಯೂ 20 ಸಾವಿರ ರೂ. ನಗದು ಪುರಸ್ಕಾರ ಮತ್ತು ಪ್ರಶಸ್ತಿ, ಫಲಕ ಒಳಗೊಂಡಿದೆ.
ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಮೊದಲು ಮಧ್ಯಾಹ್ನ 1ರಿಂದ ಸಂಜೆ 4ರ ವರೆಗೆ ಪ್ರಸಿದ್ಧ ಕಲಾವಿದರ ಸಹಯೋಗದೊಂದಿಗೆ 'ಶ್ರೀರಂಗ ತುಲಾಭಾರ' ತಾಳಮದ್ದಲೆ ಪ್ರಸ್ತುತಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ್​ ರಾವ್​, ಕಾರ್ಯದರ್ಶಿ ಮುರಳಿ ಕಡೆಕಾರ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.