ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ವೃತ್ತಕ್ಕೆ ಇನೋವಾ ಕಾರು ಶನಿವಾರ ಮುಂಜಾನೆ ಡಿಕ್ಕಿಯಾಗಿ ಮೂವರು ಪ್ರಯಾಣಿಕರು ದಾರುಣವಾಗಿ ಮೃತಪಟ್ಟಿದ್ದಾರೆ
ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಚಾಲಕನ ನಿಯಂತ್ರಣ ತಪ್ಪಿ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ವೃತ್ತಕ್ಕೆ ಇನೋವಾ ಕಾರು ಶನಿವಾರ ಮುಂಜಾನೆ ಡಿಕ್ಕಿಯಾಗಿ ಮೂವರು ಪ್ರಯಾಣಿಕರು ದಾರುಣವಾಗಿ ಮೃತಪಟ್ಟಿದ್ದಾರೆ.
ಕಾರು ಬೆಂಗಳೂರಿನಿಂದ ಉಡುಪಿಯತ್ತ ತೆರಳುವಾಗ ಈ ದುರ್ಟನೆ ನಡೆದಿದೆ. ಕಾರಿನಲ್ಲಿ ಒಟ್ಟು 9 ಮಂದಿ ಪ್ರಯಾಣಿಸುತ್ತಿದ್ದು, ಈ ಪೈಕಿ ಬೆಂಗಳೂರು ನಿವಾಸಿಗಳಾದ ರವಿ(64), ನಂಜಮ್ಮ (75), ರವ್ಯಾ(23) ಎಂಬುವರು ಮೃತಪಟ್ಟಿದ್ದಾರೆ. ಗಾಯಾಳುಗಳಾದ ಸುಶೀಲಾ, ಕೀರ್ತಿ ಕುವಾರ್, ಕಿರಣ್, ಬಿಂದು, ಪ್ರಶಾಂತ್ ಹಾಗೂ ಚಾಲಕ ಸುಬ್ರಹ್ಮಣ್ಯ ಸೇರಿದಂತೆ 6 ಮಂದಿ ಗಂಭೀರ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಬಳಿಕ ಕ್ರೇನ್ ಮೂಲಕ ಕಾರನ್ನು ಅಪಘಾತ ಸ್ಥಳದಿಂದ ತೆರವುಗೊಳಿಸಲಾಯಿತು. ಬಂಟ್ವಾಳ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿದ್ದಾರೆ. ಮುಂಜಾನೆ ವೇಳೆ ಮಂಜು ಕವಿದ ವಾತಾವರಣದಿಂದಾಗಿ ವೃತ್ತ ಕಾಣಿಸದೆ ನೇರ ರಸ್ತೆಯೆಂದು ತಿಳಿದು ಸಂಚರಿಸಿದ ಪರಿಣಾಮ ಈ ಅವಡ ಸಂಭವಿಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯುತ್ ಬೆಳಕಿನ ಕೊರತೆ
ಚತುಷ್ಫಥ ಹೆದ್ದಾರಿ ಕೆಲಸ ಇನ್ನೂ ಪೂರ್ತಿಯಾಗದ ಕಾರಣ ಹೆದ್ದಾರಿಯಲ್ಲಿ ವಿದ್ಯುತ್ ಬೆಳಕಿನ ಕೊರತೆಯೂ ಇದೆ. ಇಲ್ಲಿ ವಿಶಾಲವಾದ ವೃತ್ತ ನಿರ್ಮಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಅತೀ ವೇಗದಲ್ಲಿ ಬರುವ ವಾಹನಗಳಿಗೆ ಏಕಾಏಕಿ ವೃತ್ತ ಕಾಣಿಸಿಕೊಂಡಾಗ ನಿಯಂತ್ರಣ ಕಳೆದು ಕೊಳ್ಳುವುದು ಸಾವಾನ್ಯವಾಗಿದೆ. ಇದು ಎರಡು ಹೆದ್ದಾರಿಗಳು ಸಂಧಿಸುವ ವೃತ್ತವಾಗಿದ್ದು ಬಂಟ್ವಾಳ ಬೈಪಾಸ್ ರಸ್ತೆ, ಬಂಟ್ವಾಳ ಪೇಟೆ ರಸ್ತೆ, ಚತುಷ್ಫಥ ಹೆದ್ದಾರಿ, ಗೂಡಿನ ಬಳಿ ಸಂಪರ್ಕ ರಸ್ತೆ, ಬಿ.ಸಿ.ರೋಡು ನಗರ ಸಂಪರ್ಕ ರಸ್ತೆ, ಹೀಗೆ 7 ರಸ್ತೆಗಳು ಸಂಧಿಸುವ ಜಾಗವಾಗಿದ್ದು ಇಲ್ಲಿ ವಾಹನಗಳು ಪರಸ್ಪರ ಮುಖಾಮುಖಿಯಾಗುತ್ತಿದ್ದು ಎಚ್ಚರಿಕೆಯಿಂದ ಸಂಚರಿಸಬೇಕಾಗಿದೆ.
ವೃತ್ತಕ್ಕೆ ನೇರಾನೇರ ರಸ್ತೆ!
ಅಪಾಯಕಾರಿ ವೃತ್ತದಲ್ಲಿ ಭವಿಷ್ಯದಲ್ಲೂ ಇಂತಹ ಅವಡಗಳು ಮರುಕಳಿಸುವ ಸಾಧ್ಯತೆ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ರಸ್ತೆಯನ್ನು ಕಿರಿದುಗೊಳಿಸಿ ದೊಡ್ಡ ವೃತ್ತ ನಿರ್ಮಿಸಿರುವುದು ಅವೈಜ್ಞಾನಿಕ, ಬೆಂಗಳೂರಿನಿಂದ ಮಂಗಳೂರಿಗೆ ಬರುವ ಒಂದು ರಸ್ತೆ, ವೃತ್ತಕ್ಕೆ ನೇರವಾಗಿದ್ದು, ಡಿಕ್ಕಿ ಹೊಡೆಯುವ ಸಾಧ್ಯತೆಗಳು ಹೆಚ್ಚು. ರಾತ್ರಿ ಹೊತ್ತು ವಾಹನ ಚಲಾಯಿಸುವವರಿಗೆ, ಹೊಸದಾಗಿ ಈ ಭಾಗಕ್ಕೆ ಬರುವ ಚಾಲಕರಿಗೆ ಈ ವೃತ್ತ ಅಪಾಯಕಾರಿಯಾಗಿದೆ ಎನ್ನುವ ವಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.