ದ.ಕ.ಜಿಲ್ಲೆಯ ಗುಂಡ್ಯ ಸಮೀಪದ ಬರ್ಚಿನಹಳ್ಳ ಬಳಿ ಶುಕ್ರವಾರ ಮಧ್ಯಾಹ್ನ ರಾಜಹಂಸ ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನೆಲ್ಯಾಡಿ: ದ.ಕ.ಜಿಲ್ಲೆಯ ಗುಂಡ್ಯ ಸಮೀಪದ ಬರ್ಚಿನಹಳ್ಳ ಬಳಿ ಶುಕ್ರವಾರ ಮಧ್ಯಾಹ್ನ ರಾಜಹಂಸ ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೊಕ್ಕಡ ಎಸ್.ಆರ.ಕೊಬ್ಬರಿ ಮಿಲ್ ಮಾಲೀಕ ಹಾಗೂ ಶಿಶಿಲ ಧರ್ಮದಕಳ ನಿವಾಸಿ ಚಂದ್ರಶೇಖರ ಗೌಡ(56), ಕಾರು ಚಲಾಯಿಸುತ್ತಿದ್ದ ಉಜಿರೆ ಗ್ರಾಮದ ಮರಕಡ ನಿವಾಸಿ ಹಾಗೂ ಕಕ್ಕಿಂಜೆ ಮಲ್ನಾಡ್ ಫೈನಾನ್ಸ್ ಸಂಸ್ಥೆ ಮಾಲೀಕ ಶ್ರೀಧರ(61) ಮತ್ತು ಉಜಿರೆ ಗ್ರಾಮದ ಗುರಿಪಳ್ಳ ನಿವಾಸಿ ಉಮೇಶ್ (54) ಮೃತರು. ಉಜಿರೆ ಗ್ರಾಮದ ಕೂಡಿಗೆ ನಿವಾಸಿ ಸುರೇಶ್(60) ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಾಸನದಲ್ಲಿ ನಡೆದ ಮದುವೆ ಕಾರ್ಯಕ್ರಮ ಮುಗಿಸಿ ಉಜಿರೆ ಕಡೆಗೆ ನಾಲ್ವರು ಪ್ರಯಾಣಿಸುತ್ತಿದ್ದ ಕಾರು ಹಾಗೂ ಧರ್ಮಸ್ಥಳದಿಂದ ಬೆಂಗಳೂರಿನ ಮೂಲಕ ತಿರುಪತಿಗೆ ಹೊರಟಿದ್ದ ರಾಜಹಂಸ ಬಸ್ ನಡುವೆ ಅಪಘಾತ ನಡೆದಿದೆ. ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದ ನಾಲ್ವರಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.