ಮೂಲ್ಕಿ: ಕಿಲ್ಪಾಡಿ ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ಲಕ್ಷಾಂತರ ಮೌಲ್ಯದ ಸೊತ್ತು ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂಲ್ಕಿ ಪೊಲೀಸರು ಮೂವರನ್ನು ದಾವಣಗೆರೆಯಲ್ಲಿ ವಶಕ್ಕೆ ಪಡೆದಿದ್ದು ಕಳ್ಳತನದಲ್ಲಿ ಭಾಗಿಯಾಗಿದ್ದ ಇನ್ನಿಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆೆ.
ಆರೋಪಿಗಳನ್ನು ಕಾರ್ನಾಡ್, ಹೆಜಮಾಡಿ ಹಾಗೂ ಪಡುಬಿದ್ರೆ ಸಮೀಪದ ಕಂಚಿನಡ್ಕ ಬಳಿಯ ನಿವಾಸಿಗಳು ಎಂದು ತಿಳಿದುಬಂದಿದೆ. ಈ ನಡುವೆ ಮೂಲ್ಕಿ ಪೊಲೀಸರು ಕಳ್ಳರನ್ನು ಕೋರ್ದಬ್ಬು ದೈವಸ್ಥಾನಕ್ಕೆ ಮಹಜರು ನಡೆಸಲು ಕರೆದುಕೊಂಡು ಬರುವ ಮಾಹಿತಿ ತಿಳಿದ ಗ್ರಾಮಸ್ಥರು ದೈವಸ್ಥಾನದಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ್ದು ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಗಿ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಯಿತು.
ಮಟ್ಕಾ ಜುಗಾರಿ ಆಡುತ್ತಿದ್ದವರ ಬಂಧನ
ಗಂಗೊಳ್ಳಿ: ಗಂಗೊಳ್ಳಿ ರಥಬೀದಿ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ಉದಯ ದೇವಾಡಿಗ ಎಂಬುವರನ್ನು ಬಂಧಿಸಿ ಆಟಕ್ಕೆ ಬಳಸಿದ 750 ರೂ. ನಗದು, ಮಟ್ಕಾ ಚೀಟಿ ಹಾಗೂ ಇನ್ನಿತರ ವಸ್ತುಗಳನ್ನು ಗಂಗೊಳ್ಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ಬೀಟ್ ಸಿಬ್ಬಂದಿ ನೀಡಿದ ಮಾಹಿತಿ ಮೇರೆಗೆ ಗಂಗೊಳ್ಳಿ ಪೊಲೀಸ್ ಠಾಣೆ ಪಿಎಸ್‌ಐ ಸುದರ್ಶನ ಅವರು ಸಿಬ್ಬಂದಿ ಹಾಗೂ ಪಂಚರ ಸಮಕ್ಷಮ ದಾಳಿ ನಡೆಸಿದ್ದರು. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.