ಉಡುಪಿಯ ಕೋಟದಲ್ಲಿ ಕೊಲೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಂಧಿಸಿರುವ ಆರೋಪಿಗಳು.
* ಅಕ್ಕಿಚೀಲ ಮನೆಯ ಅಂಗಳದಲ್ಲಿ ಇಟ್ಟಿದ್ದಕ್ಕೆ ಬೈಗುಳ ಪ್ರಕರಣ
ಉಡುಪಿ: ಸರ್ಕಾರದ ಅಕ್ಕಿಚೀಲಗಳನ್ನು ಮನೆಯ ಅಂಗಳದಲ್ಲಿ ಇಟ್ಟಿರುವುದಕ್ಕೆ ಅವಾಚ್ಯ ಶಬ್ದಗಳಿಂದ ಬೈದು, ಸುಲಿಗೆಗಾಗಿ ಕೊಲೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮದ ಗೊಬ್ಬರಬೆಟ್ಟುವಿನ ನಾಗೇಂದ್ರ ಪುತ್ರನ್ (37), ಪಾರಂಪಳ್ಳಿ ಗ್ರಾಮದ ಪಡುಕೆರೆಯ ಪಿ. ಸುಮಂತ್ ಕುಂದರ್ (40), ಸಾಸ್ತಾನದ ಮೂಡುಹಡು ಗ್ರಾಮದ ಸಚಿನ್ ಶ್ರೀಯಾನ್ (32) ಬಂಧಿತ ಆರೋಪಿಗಳು.
ಆ.31ರಂದು ಸರ್ಕಾರಿ ಅಕ್ಕಿ ಚೀಲದ ವಿಚಾರವಾಗಿ ಪ್ರಸ್ತುತ ಬಂಧಿತರು ಕೊಲೆ ಬೆದರಿಕೆ ಹಾಕಿರುವ ಕುರಿತಾಗಿ ಕೋಟ ಪೊಲೀಸ್ ಠಾಣೆಯಲ್ಲಿ ಗುಜರಿ ವ್ಯಾಪಾರಿ ಸಾಸ್ತಾನದ ಗುಂಡ್ಮಿ ನಿವಾಸಿ ಪಿ.ಮಹಮ್ಮದ್ ಎಂಬವರು ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಪತ್ತೆಗೆ ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು. ಹಾಗೂ ಬ್ರಹ್ಮಾವರ ಸಿಪಿಐ ಗೋಪಿಕೃಷ್ಣ ಮಾರ್ಗದರ್ಶನದಲ್ಲಿ ಕೋಟ ಠಾಣೆಯ ಪಿಎಸ್ಐಗಳಾದ ಪ್ರವೀಣಕುಮಾರ್ ಆರ್., ಮಹಾಂತೇಶ ಜಾಬಗೌಡ, ಸಿಬ್ಬಂದಿ ವಿಜಯೇಂದ್ರ, ಶರತ್ ಹಾಗೂ ಶಿವರಾಜ್ ಅವರ ತಂಡ ರಚಿಸಲಾಗಿತ್ತು.
ಆರೋಪಗಳಾದ ನಾಗೇಂದ್ರ ಪುತ್ರನ್ ಹಾಗೂ ಪಿ. ಸುಮಂತ್ ಕುಂದರ್ ಅವರನ್ನು ಮೈಸೂರು ಜಿಲ್ಲೆಯ ಮೈಸೂರು ಪ್ಯಾಲೇಸ್ ಎದುರಿನ ವಸ್ತು ಪ್ರದರ್ಶನ ಗ್ರೌಂಡ್ನಲ್ಲಿ ಆ.2ರಂದು ಹಾಗೂ ಇನ್ನೋರ್ವ ಆರೋಪಿ ಸಚಿನ್ ಶ್ರೀಯಾನ್ನನ್ನು ಆ.1ರಂದು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಹರಿರಾಮ್ ಶಂಕರ್ ತಿಳಿಸಿದ್ದಾರೆ.