ಉಡುಪಿ ನಗರದ ರಸ್ತೆಗಳಲ್ಲಿ ಆಕರ್ಷಿಸುತ್ತಿರುವ ತಾಳೆಹಣ್ಣುಗಳು. 
ಉಡುಪಿ

ತಾಳೆಹಣ್ಣು ತಿಂದವರು ಬಾಳಿಯಾರು...

ಪ್ರಶಾಂತ ಜಿ. ಭಾಗ್ವತ

ಆರೋಗ್ಯಕರ ಹಣ್ಣು ಸೇವನೆಯತ್ತ ಜನರು

ಪ್ರಶಾಂತ ಭಾಗ್ವತ ಉಡುಪಿ
ಜೀವನದಲ್ಲಿ ಎದುರಾಗುವ ಕಷ್ಟ-ನಷ್ಟ ಸಹಿಸಿಕೊಳ್ಳಲು ಹಿರಿಯರು ತಾಳಿದವನು ಬಾಳಿಯಾನು ಎಂದು ಅರುಹಿದ್ದಾರೆ. ಅದೇರೀತಿ ಸುಲಭವಾಗಿ ಅನೇಕ ಕಾಯಿಲೆ ಶಮನಗೊಳಿಸಲು ತಾಳೆ ತಿಂದವರು ಬಾಳಿಯಾರು ಎನ್ನುತ್ತಿದೆ ತಾಳೆಹಣ್ಣುಗಳು.
ಅಕ್ಟೋಬರ್​ನಿಂದ ಮಾರ್ಚ್​ವರೆಗೆ ವರ್ಷದಲ್ಲಿ ಆರು ತಿಂಗಳು ತಾಳೆಹಣ್ಣು ಲಭ್ಯವಿರಲಿದ್ದು, ಬೇಸಿಗೆಯ ದಾಹ ತಣಿಸಲು ನಿಸರ್ಗದತ್ತ ಕೊಡುಗೆಯಾಗಿದೆ. ಸ್ಥಳೀಯವಾಗಿ ತಾಟಿ ಹಣ್ಣು, ಐಸ್​ ಆ್ಯಪಲ್​, ಈರೋಳ್​, ಕಾರಿ ಬೊಂಡ ಅಥವಾ ತಾಳೆ ಬೊಂಡ ಎಂದೂ ಕರೆಯುವ ಆರೋಗ್ಯವರ್ಧಕ ತಾಳೆ ಜನರನ್ನು ಆಕರ್ಷಿಸುತ್ತಿದೆ.

ಹಣ್ಣಿಗೆ ಭಾರಿ ಬೇಡಿಕೆ

ಇದೀಗ ವಿಪರೀತ ಸೆಕೆಯೂ ಆರಂಭಗೊಂಡಿದ್ದು, ಜನರು ತಂಪು ಪಾನೀಯದ ಮೊರೆ ಹೋಗುತ್ತಿದ್ದಾರೆ. ಎಳನೀರು ಅಭಾವದಿಂದಾಗಿ ದರವೂ ಸಹ ಒಂದಕ್ಕೆ 60-65ರೂ.ಗೆ ಏರಿದೆ. ಇದೀಗ ಉಡುಪಿಯ ಮಾರುಕಟ್ಟೆ ಹಾಗೂ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ತಾಳೆಹಣ್ಣುಗಳ ಮಾರಾಟ ಭರಾಟೆ ಆರಂಭಗೊಂಡಿದೆ. ಒಂದಕ್ಕೆ 30-35ರೂ. ಇರುವುದರಿಂದ ಭಾರಿ ಬೇಡಿಕೆಯೂ ಇದೆ. ಬಿಸಿಲ ತಾಪದಿಂದ ಹೈರಾಣಾಗುವ ಜನರು ತಾಳೆಹಣ್ಣು ತಿಂದು ಹೊಟ್ಟೆ ತಂಪಾಗಿಸಿಕೊಳ್ಳುತ್ತಿದ್ದಾರೆ.

ಮೂರು ಪ್ರಕಾರದ ಹಣ್ಣು

ತೆಂಗಿನಕಾಯಿಯಂತೆಯೇ ಇದ್ದರೂ ಹೊರಭಾಗದಲ್ಲಿ ಕಪ್ಪು ಬಣ್ಣ ಹೊಂದಿದ್ದು, ಮರದಲ್ಲಿ ಗುಂಪು ಗುಂಪಾಗಿ ಬೆಳೆಯುತ್ತದೆ. ಎಳನೀರಿನಂತೆ ಇದನ್ನೂ ಸಹ ಕತ್ತಿಯಿಂದ ಕೆತ್ತಿ ತೆಗೆಯಬೇಕಿದೆ. ತಾಳೆಯಲ್ಲಿ ಮೂರು ಪ್ರಕಾರವಿದ್ದು ಒಂದು, ಮೂರು ಹಾಗೂ ನಾಲ್ಕು ಕವಾಟ ಇರುವ ಹಣ್ಣೂ ಇದೆ. ಮೂರು ಕಣ್ಣಿನ ತಾಳೆ ಹಣ್ಣು ಹೆಚ್ಚು ಲಭಿಸುತ್ತದೆ. ಆರೋಗ್ಯವರ್ಧಕವಾಗಿರುವ ಈ ಹಣ್ಣಿನ ಸೇವನೆಯಿಂದ ದೇಹಕ್ಕೆ ಹಲವು ಲಾಭವಿದೆ.

ಹಣ್ಣಿನಲ್ಲಿದೆ ಅಪಾರ ಪೌಷ್ಟಿಕಾಂಶ

ದೇಹಕ್ಕೆ ಬೇಕಿರುವ ಪೌಷ್ಟಿಕಾಂಶಗಳಲ್ಲಿ ಪ್ರಮುಖವಾದ ಸೋಡಿಯಂ, ಪೊಟಾಶಿಯಂ, ವಿಟಮಿನ್​ ಬಿ-12, ಗಂಧಕ ಅಂಶ ಹೇರಳವಾಗಿದೆ. ಬೇಸಿಗೆಯಲ್ಲಿ ದೇಹದ ತಾಪಮಾನ, ಅತಿಸಾರ ನಿಯಂತ್ರಿಸುವಲ್ಲಿ ಪರಿಣಾಮಕಾರಿ. ಬಿಸಿಲಿನಿಂದ ರಕ್ತದೊತ್ತಡ ಏರುಪೇರಾಗಿ ಆರೋಗ್ಯದಲ್ಲಿ ಸುಸ್ತು, ಆಯಾಸ, ಹೃದಯಕ್ಕೂ ಆಗುವ ತೊಂದರೆ ಹಾಗೂ ಕಾಡುವ ನಿರ್ಜಲೀಕರಣ ಸಮಸ್ಯೆಗೂ ಪರಿಹಾರವಾಗಿದೆ. ಜೀರ್ಣಕ್ರಿಯೆ ಸರಿಪಡಿಸುತ್ತದಲ್ಲದೆ, ಚರ್ಮದ ಆರೋಗ್ಯವನ್ನೂ ಕಾಪಾಡುತ್ತದೆ. ಹೊಟ್ಟೆಯುರಿ, ಗ್ಯಾಸ್​, ಹುಳಿತೇಗು ಶಮನಕಾರಿಯಾಗಿದೆ. ಜೀವಸತ್ವ ಮತ್ತು ಖನಿಜಾಂಶ ಇರುವುದರಿಂದ ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ಪೌಷ್ಟಿಕಾಂಶದ ಮೂಲವಾಗಿದೆ. ಹಣ್ಣಿನ ತಿರುಳಿನಲ್ಲಿ ಮಧುಮೇಹ ವಿರೋಧಿ ಗುಣಲಕ್ಷಣವೂ ಇದೆ.

ಹಲವರ ಜೀವನಕ್ಕೆ ಆಧಾರ

ವಿವಿಧೆಡೆ ತಾಳೆ ಉತ್ಪಾದನೆಯಾದರೂ ಸಹ ಹಲವರಿಗೆ ಜೀವನಾಧಾರವಾಗಿದೆ. ಆದಿಉಡುಪಿಯ ನಿವಾಸಿ ಸರಸ್ವತಿ ಪೂಜಾರ್ತಿ ಎಂಬಾಕೆ ಎಪಿಎಂಸಿ ಮುಂಭಾಗದ ರಸ್ತೆ ಪಕ್ಕದಲ್ಲಿ ಸುಮಾರು 30 ವರ್ಷದಿಂದ ತಾಳೆಹಣ್ಣು ಮಾರಾಟದಿಂದಲೇ ಜೀವನ ನಿರ್ವಹಿಸುತ್ತಿದ್ದಾರೆ. ತಾಳೆಹಣ್ಣು ತಿಂದರೆ ಆಗುವ ಉಪಯೋಗದ ಕುರಿತಾಗಿಯೂ ಗ್ರಾಹಕರಿಗೆ ಪ್ರೀತಿಯಿಂದಲೇ ಮಾಹಿತಿ ನೀಡುತ್ತಾರೆ. ಪರಿಸರದಲ್ಲಿ ಎಲ್ಲಿಯೂ ತಾಳೆಯ ಚಿಪ್ಪು ಎಸೆಯದೆ, ಮನೆಗೊಯ್ದು ಒಣಗಿಸಿ ಉರುವಲಾಗಿಯೂ ಬಳಸುತ್ತಾರೆ.

ಭಾರತದಲ್ಲಿ ಹೇರಳ ಉತ್ಪಾದನೆ

ವಿಶ್ವದಲ್ಲಿ ಇಂಡೋನೇಶಿಯಾದಲ್ಲಿ ಬೃಹತ್​ ವಾಣಿಜ್ಯ ಬೆಳೆಯಾಗಿ ಉತ್ಪಾದಿಸಲಾಗುತ್ತದೆ. ನಂತರದಲ್ಲಿ ಭಾರತವೂ ಸಹ ವಿಶ್ವದಲ್ಲಿ ತಾಳೆ ಬೆಳೆಯುವ ಪ್ರಮುಖ ದೇಶವಾಗಿದೆ. ಆಂಧ್ರಪ್ರದೇಶ, ತೆಲಂಗಾಣ, ಕೇರಳ ರಾಜ್ಯವು ತಾಳೆಎಣ್ಣೆ ಉತ್ಪಾದನೆಯಲ್ಲಿ ಶೇ.98ರಷ್ಟು ಒದಗಿಸುತ್ತವೆ. ಕರ್ನಾಟಕ, ಒಡಿಶಾ, ತಮಿಳುನಾಡು, ಗುಜರಾತ್​ ಮತ್ತು ಮಿಜೋರಾಂಗಳಲ್ಲಿ ಹೆಚ್ಚು ಬೆಳೆಯುತ್ತಾರೆ. ಇತ್ತೀಚೆಗೆ ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ ಮತ್ತು ನಾಗಾಲ್ಯಾಂಡ್​ಗಳಲ್ಲೂ ಬೆಳೆಯಲಾಗುತ್ತಿದೆ. ಕರ್ನಾಟಕದಲ್ಲಿ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಹಾಗೂ ಉಡುಪಿ ಜಿಲ್ಲೆಯ ವಿವಿಧೆಡೆ ಯಶಸ್ವಿಯಾಗಿ ತಾಳೆ ಕೃಷಿ ಮಾಡಲಾಗುತ್ತಿದೆ.
"

ತಾಳೆಹಣ್ಣಿನಲ್ಲಿಯೂ ಆಯುರ್ವೇದೀಯ ಔಷಧ ಗುಣವಿದೆ. ಶೀತವೀರ್ಯ, ಮಧುರ ರಸ ಹೊಂದಿದ್ದು, ಪಿತ್ತಶಾಮಕವಾಗಿದೆ. ಆದರೆ, ಇದು ಕಫ ವೃದ್ಧಿಗೆ ಕಾರಣವಾಗುವುದರಿಂದ ಬೆಳಗಿನ ಸಮಯದಲ್ಲಿ ಸೇವಿಸಬಾರದು. ತಾಳೆಯಿಂದ ತಯಾರಿಸುವ ಬೆಲ್ಲದ ಉತ್ಪನ್ನ ಬಾಣಂತಿಗೆ ವಿಶೇಷ. ತಮಿಳುನಾಡಿನಲ್ಲಿ ದೈಹಿಕ ಬಲಕ್ಕಾಗಿ ತಾಳೆ ಬೀಜದ ಮೊಳಕೆ ಬೇಯಿಸಿ ಸೇವಿಸುತ್ತಾರೆ. ತಾಳೆಬೇರನ್ನು ಅರೆದು ಕಿಬ್ಬೊಟ್ಟಿಗೆ ಹಚ್ಚಿದರೆ ಅಥವಾ ಗಂಡುಮರದ ಹೂವು ಸುಟ್ಟು ಕ್ಷಾರ ಮಾಡಿ ಸೇವಿಸದರೆ ಮೂತ್ರಕ್ಕೆ ಸಂಬಂಧಿತ ಸಮಸ್ಯೆಗೆ ಉತ್ತಮ ಚಿಕಿತ್ಸೆ. ತಾಳೆಯ ನೀರಾ ಆರೋಗ್ಯಕರ ಪಾನೀಯ.