ತೊಕ್ಕೊಟ್ಟು ಫ್ಲೈಓವರ್ ಅಡಿ ಉಳ್ಳಾಲದತ್ತ ವಾಹನ ಸಂಚರಿಸದಂತೆ ನಿಬಂರ್ಂಧಿಸಲಾಗಿದೆ. 
ಉಡುಪಿ

ಟ್ರಾಫಿಕ್ ಜಾಮ್‌ನಿಂದ ತೊಕ್ಕೊಟ್ಟು ಜಂಕ್ಷನ್ ಮುಕ್ತ

ಅನ್ಸಾರ್ ಇನೋಳಿ ಉಳ್ಳಾಲ
ತೊಕ್ಕೊಟ್ಟು ಸರ್ವೀಸ್ ರಸ್ತೆಯಲ್ಲಿ ಬೇಕಾಬಿಟ್ಟಿ ಬರುತ್ತಿದ್ದ ವಾಹನಗಳಿಗೆ ಏಕಮುಖ ಸಂಚಾರದ ಮೂಲಕ ಕಡಿವಾಣ ಹಾಕಿದ ಬಳಿಕ ಜಂಕ್ಷನ್‌ನಲ್ಲಿ ಟ್ರಾಫಿಕ್ ಜಾಮ್‌ಗೆ ತಾತ್ಕಾಲಿಕ ಬ್ರೇಕ್ ಸಿಕ್ಕಿದೆ. ಆದರೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ತಿರುವು ಪಡೆಯುವುದರಿಂದ ಈಗ ಹೊಸ ಸಮಸ್ಯೆಯೊಂದು ಸೃಷ್ಟಿಯಾಗಿದೆ.
ಈ ಸಂಚಾರ ವ್ಯವಸ್ಥೆ ಸುಧಾರಣೆಗೆ ಕಾರಣವಾಗಿದ್ದು, ರೋಗಿಯೊಬ್ಬರ ಸಂಬಂಧಿಯ ವಾಟ್ಸ್ಯಾಪ್ ಸಂದೇಶ. ಮೇ 31ರಂದು ರೋಗಿಯೊಬ್ಬರು ತೊಕ್ಕೊಟ್ಟಿನ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಅನುಭವಿಸಿದ ಕಷ್ಟದ ಬಗ್ಗೆ ಅವರ ಸಂಬಂಧಿ ವಾಟ್ಸ್ಯಾಪ್‌ನಲ್ಲಿ ಸಂದೇಶ ಹರಿಯಬಿಟ್ಟಿದ್ದರು. ಇದನ್ನು ಗಮನಿಸಿದ ಯು.ಟಿ.ಖಾದರ್, ಸಂಚಾರಿ ಪೊಲೀಸರು, ಲೋಕೋಪಯೋಗಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಅವರು ನೀಡಿದ ಸಲಹೆಯ ಮೇರೆಗೆ ಈ ಏಕಮುಖ ಸಂಚಾರ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ಈಗ ಹೇಗಿದೆ ಹೊಸ ಸಂಚಾರ ವ್ಯವಸ್ಥೆ?

ಹಿಂದೆ ಉಳ್ಳಾಲಕ್ಕೆ ಹೋಗುವ ಲಘು ಮತ್ತು ಭಾರಿ ವಾಹನಗಳು ತೊಕ್ಕೊಟ್ಟು ಫ್ಲೈಓವರ್ ಅಡಿಯಿಂದ ಬಲಭಾಗಕ್ಕೆ ತಿರುಗಿ ಸರ್ವೀಸ್ ರಸ್ತೆ ಮೂಲಕ ಹೋಗುತ್ತಿದ್ದವು. ಈ ರಸ್ತೆ ಅತ್ಯಂತ ಕಿರಿದಾಗಿದ್ದರಿಂದ ಹಾಗೂ ಸೇತುವೆ ಅಡಿಯಲ್ಲಿ ವ್ಯಾಪಾರ ನಡೆಯುತ್ತಿದ್ದರಿಂದ ಭಾರಿ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಪ್ರಸ್ತುತ ತೊಕ್ಕೊಟ್ಟಿನ ಎರಡು ಬದಿಯ ಸರ್ವೀಸ್ ರಸ್ತೆಗಳಲ್ಲಿ ಏಕಮುಖ ಸಂಚಾರ ಕಡ್ಡಾಯಗೊಳಿಸಲಾಗಿದೆ. ಉಳ್ಳಾಲಕ್ಕೆ ಹೋಗುವ ಎಲ್ಲ ವಾಹನಗಳು 200 ಮೀಟರ್ ದೂರದ ಕಾಪಿಕಾಡುವರೆಗೆ ಸಾಗಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಯೂ-ಟರ್ನ್ ಹೊಡೆದು ತೆರಳಬೇಕಿದೆ.
*ಬಸ್‌ಗಳ ನಿಲುಗಡೆ ನಿಷೇಧ: ತಲಪಾಡಿ ಹಾಗೂ ಕೊಣಾಜೆ ಭಾಗದಿಂದ ಮಂಗಳೂರಿನತ್ತ ಸಂಚರಿಸುವ ಬಸ್‌ಗಳಿಗೆ ಜಂಕ್ಷನ್‌ನಲ್ಲಿ ನಿಲುಗಡೆ ನಿಷೇಧಿಸಲಾಗಿದೆ. ತಲಪಾಡಿ ಕಡೆಗೆ ತೆರಳುವ ಬಸ್‌ಗಳು 100 ಮೀಟರ್ ದೂರದಲ್ಲಿ ಸರ್ವೀಸ್ ರಸ್ತೆ ಬದಿಯಲ್ಲಿ ನಿಲ್ಲಿಸುವಂತೆ ಸೂಚಿಸಲಾಗಿದೆ. ಉಳ್ಳಾಲ, ತಲಪಾಡಿಯಿಂದ ಮಂಗಳೂರಿನತ್ತ ತೆರಳುವ ಬಸ್ಸುಗಳಿಗೆ ಫ್ಲೈಓವರ್ ಬಳಿ ನಿಲುಗಡೆ ನಿಷೇಧಿಸಿ ಟ್ರಾಫಿಕ್ ಪೊಲೀಸರು ಫ್ಲೆಕ್ಸ್ ಅಳವಡಿಸಿದ್ದಾರೆ.

ನೋ ಎಂಟ್ರಿ ಮತ್ತು ಬ್ಯಾರಿಕೇಡ್

ಫ್ಲೈಓವರ್ ಕೆಳಗಡೆಯಿಂದ ಉಳ್ಳಾಲ ಭಾಗಕ್ಕೆ ಯಾವುದೇ ವಾಹನ ತೆರಳದಂತೆ ‘ನೋ ಎಂಟ್ರಿ’ ಫ್ಲೆಕ್ಸ್ ಹಾಕಲಾಗಿದೆ. ಉಳ್ಳಾಲಕ್ಕೆ ತೆರಳುವ ವಾಹನಗಳಿಗೆ ತಿರುವಿನಿಂದ ಬೈಲ್‌ವರೆಗೆ ರಸ್ತೆಮಧ್ಯೆ ಬ್ಯಾರಿಕೇಡ್ ಇಟ್ಟು ಏಕಮುಖಗೊಳಿಸಲಾಗಿದೆ. ಇದರಿಂದಾಗಿ ತೊಕ್ಕೊಟ್ಟು ಒಳಪೇಟೆಗೆ ತೆರಳುವವರು ಬೈಲ್‌ನಲ್ಲಿ ಯೂ-ಟರ್ನ್ ಹೊಡೆಯಬೇಕಿದೆ.

ಹೊಸ ತಲೆನೋವು!

ತೊಕ್ಕೊಟ್ಟು ಜಂಕ್ಷನ್‌ನಲ್ಲಿ ವಾಹನಗಳ ದಟ್ಟಣೆ ಕಡಿಮೆಯಾಗಿದೆಯಾದರೂ, ಕೇರಳ ಮತ್ತು ತಮಿಳುನಾಡಿನಿಂದ ಮಂಗಳೂರಿನತ್ತ ಸಾಗುವ ವಾಹನಗಳಿಗೆ ಈಗ ಕಾಪಿಕಾಡ್‌ನಲ್ಲಿ ಹೊಸ ಸಮಸ್ಯೆ ಎದುರಾಗಿದೆ. ಉಳ್ಳಾಲಕ್ಕೆ ಹೋಗುವ ವಾಹನಗಳು ಕಾಪಿಕಾಡ್‌ನಲ್ಲಿ ಯೂ-ಟರ್ನ್ ತಗೆದುಕೊಳ್ಳುವುದರಿಂದ ಹೆದ್ದಾರಿಯಲ್ಲಿ ವಾಹನಗಳ ವೇಗಕ್ಕೆ ಬ್ರೇಕ್ ಬೀಳುತ್ತಿದೆ.

ವಾಹನ ಸವಾರರು ಹತ್ತಿರದ ರಸ್ತೆಯೆಂದು ವಿರುದ್ಧ ದಿಕ್ಕಿನಲ್ಲಿ ವಾಹನಗಳನ್ನು ಚಲಾಯಿಸುತ್ತಿದ್ದರು. ಅದಕ್ಕೀಗ ಕಡಿವಾಣ ಹಾಕಿರುವುದರಿಂದ ಒಂದಷ್ಟು ದೂರ ಸಂಚರಿಸಬೇಕಿದ್ದರೂ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ಆದರೆ, ಕಾಪಿಕಾಡ್‌ವರೆಗೆ ಫ್ಲೈಓವರ್ ಮುಂದುವರಿಸಿದ್ದರೆ ಪ್ರಸ್ತುತ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಹೊಸ ಸಮಸ್ಯೆ ಬರುತ್ತಿರಲಿಲ್ಲ.

ಏಕಮುಖ ಸಂಚಾರ ವ್ಯವಸ್ಥೆಯಿಂದ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ವಾಹನಗಳ ಸಂಚಾರ ಸುಗಮವಾಗಿದೆ. ತಿರುವು ಪಡೆಯಲು ಒಂದಷ್ಟು ದೂರ ಹೋಗಬೇಕಾದರೂ, ಇದು ಸಂಚಾರ ನಿಯಮ ಪಾಲನೆಯ ಜತೆಗೆ ಸಾರ್ವಜನಿಕರಲ್ಲಿ ಜಾಗೃತಿಯೂ ಮೂಡಿಸಿದಂತಾಗಿದೆ. ಈಗ ಜಾರಿಗೆ ತಂದಿರುವ ವ್ಯವಸ್ಥೆ ತಾತ್ಕಾಲಿಕವಾಗದಿರಲಿ, ಕಾಯಂ ಆಗಿ ಮುಂದುವರಿಯಲಿ.