ಉಡುಪಿಯ ಪತ್ರಿಕಾ ಭವನದಲ್ಲಿ 'ಸನ್ಮತಿ' ಸಂಚಿಕೆಯನ್ನು ಡಾ. ಮಹೇಶ್ವರಿ ಸಿಂಗ್​ ಬಿಡುಗಡೆ ಮಾಡಿದರು. ಸುದರ್ಶನ್​ ದೊಡಮನಿ, ಡಾ.ಅಮೃತಾ, ಮಂಜುನಾಥ್​, ಸುಬ್ರಹ್ಮಣ್ಯ ಭಟ್​, ನಝೀರ್​ ಪೊಲ್ಯ ಇದ್ದರು. 
ಉಡುಪಿ

ರಾಸಾಯನಿಕ ಬಣ್ಣಗಳಿಂದ ಕಾಡಬಹುದು ಕ್ಯಾನ್ಸರ್​

ಪ್ರಶಾಂತ ಜಿ. ಭಾಗ್ವತ

* ಡಾ. ಮಹೇಶ್ವರಿ ಸಿಂಗ್​ ಎಚ್ಚರಿಕೆ 

* 'ತಿಂಗಳ ಅಂಗಳ ಸಂವಾದ' ಕಾರ್ಯಕ್ರಮ

ಉಡುಪಿ: ಹೈಕೋರ್ಟ್​ ಹಾಗೂ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶದಂತೆ ಪ್ಲಾಸ್ಟರ್​ ಆಫ್​ ಪ್ಯಾರಿಸ್​ (ಪಿಒಪಿ)ನ ಗಣಪತಿ ವಿಗ್ರಹ ತಯಾರಿ, ಮಾರಾಟ ನಿಷೇಧಿಸಲಾಗಿದೆ. ಲೋಹ ಮಿಶ್ರಿತ, ರಾಸಾಯನಿಕ ಬಣ್ಣ ಬಳಸಿದ ವಿಗ್ರಹಗಳನ್ನು ಜಲಮೂಲಗಳಲ್ಲಿ ವಿಸರ್ಜಿಸಿದರೆ ಜೀವಿಗಳಿಗೆ ಅಪಾಯದ ಜತೆಗೆ ಮಾನವರಿಗೂ ಕ್ಯಾನ್ಸರ್​ನಂತಹ ಮಾರಕ ರೋಗಗಳು ಕಾಡಬಹುದು ಎಂದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಉಡುಪಿ ಪ್ರಾದೇಶಿಕ ವಿಭಾಗದ ಅಧಿಕಾರಿ ಡಾ. ಮಹೇಶ್ವರಿ ಸಿಂಗ್​ ತಿಳಿಸಿದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ಭವನ ಸಮಿತಿಯ ಸಹಕಾರದಲ್ಲಿ ಶುಕ್ರವಾರ (ಸೆ.11) ಆಯೋಜಿಸಿದ್ದ 'ತಿಂಗಳ ಅಂಗಳ ಸಂವಾದ' ಕಾರ್ಯಕ್ರಮದಲ್ಲಿ 'ಸನ್ಮತಿ' ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ಜವಾಬ್ದಾರಿ ಇರಲಿ

ಪಿಒಪಿ ಗಣಪತಿ ವಿಗ್ರಹಗಳ ಪ್ರತಿಷ್ಠಾಪನೆಗೆ ನಗರ, ಗ್ರಾಮೀಣ, ಸ್ಥಳೀಯ ಸಂಸ್ಥೆಗಳು, ಪೊಲೀಸ್​ ಇಲಾಖೆ ಸಹಿತ ವಿವಿಧ ಇಲಾಖೆಗಳು ಪರವಾನಗಿ ನೀಡಬಾರದು. ಆವೆ ಮಣ್ಣಿನಲ್ಲಿ ಗಣಪತಿ ವಿಗ್ರಹ ತಯಾರಿಕೆಗೆ ಉತ್ತೇಜನ ನೀಡಬೇಕು. ಹಬ್ಬದಂದು ಬಳಸಿದ ಹೂ, ಅಲಂಕಾರಿಕ ಸಾಮಗ್ರಿಯನ್ನು ತೆಗೆದು ಸೂಕ್ತ ವಿಲೇವಾರಿ ಮಾಡಬೇಕು. ಸುಪ್ರೀಂ ಕೋರ್ಟ್​ ಆದೇಶದಂತೆ ರಾತ್ರಿ 10ರಿಂದ ಬೆಳಗ್ಗೆ 6ರ ತನಕ ಮೈಕ್​ ಬಳಸುವಂತಿಲ್ಲ. ಸಾರ್ವಜನಿಕ ಗಣೇಶೋತ್ಸವ ಸಮಿತಿಗಳೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಜಲಮೂಲಗಳ ಮೇಲೆ ಮಂಡಳಿ ನಿಗಾ ಇಡಲಿದೆ ಎಂದರು.
ಉಪ ಪರಿಸರ ಅಧಿಕಾರಿ ಡಾ.ಅಮೃತಾ, ಉಡುಪಿ ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್​, ಉಡುಪಿ ಪತ್ರಿಕಾ ಭವನ ಸಮಿತಿ ಸಂಚಾಲಕ ಅಂಕಿತ್​ ಶೆಟ್ಟಿ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್​ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್​ ಪೊಲ್ಯ ಸ್ವಾಗತಿಸಿದರು. ಯಶೋದಾ ಕೇಶವ್​ ಕಾರ್ಯಕ್ರಮ ನಿರೂಪಿಸಿದರು.

409 ಗಣಪತಿ ವಿಗ್ರಹಗಳ ಪ್ರತಿಷ್ಠಾಪನೆ

ಜಿಲ್ಲೆಯಲ್ಲಿ ಈ ಬಾರಿ 409 ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆಗೆ ಪರವಾನಗಿ ನೀಡಲಾಗಿದೆ. ಭದ್ರತೆಗಾಗಿ ಕುಂದಾಪುರ, ಕಾರ್ಕಳ ಹಾಗೂ ಉಡುಪಿ ಉಪವಿಭಾಗದಲ್ಲಿ ಸುಮಾರು 804 ಪೊಲೀಸ್​ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು 163 ಹೋಮ್​ ಗಾರ್ಡ್ಸ್​ ನಿಯೋಜಿಸಲಾಗಿದೆ. ಸಾರ್ವಜನಿಕ ಗಣೇಶೋತ್ಸವದ ಪ್ರತಿಷ್ಠೆ, ವಿಸರ್ಜನಾ ಮೆರವಣಿಗೆಗೆ ಸ್ಥಳಿಯಾಡಳಿತದಿಂದ, ಸೌಂಡ್ಸ್​ ಸಿಸ್ಟಮ್ಸ್​ಗೆ ಪೊಲೀಸ್​ ಇಲಾಖೆಯಿಂದ ಅನುಮತಿ ಪಡೆಯಬೇಕು. ಡಿಜೆ ಬಳಸಲು ಅನುಮತಿ ಇಲ್ಲ. ರಾತ್ರಿ ವೇಳೆ ಅಥವಾ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಬಳಸಿದರೆ ಕ್ರಮ ಕೈಗೊಳ್ಳಲಾಗುವುದು. ಜನರಿಗೆ ತೊಂದರೆಯಾದರೆ 112 ಸಂಖ್ಯೆಗೆ ಕರೆ ಮಾಡಬಹುದು ಎಂದು ಉಡುಪಿ ಸೆನ್​ ಅಪರಾಧ ಪೊಲೀಸ್​ ಠಾಣೆಯ ಉಪ ನಿರೀಕ್ಷಕ ಸುದರ್ಶನ್​ ದೊಡಮನಿ ತಿಳಿಸಿದರು.