ಇರ್ವತ್ತೂರಿನ ಕೃಷಿಕ ಶ್ರೀನಿವಾಸ್ ಭಟ್ ಮನೆಯಲ್ಲಿರುವ ಗೋಬರ್ ಗ್ಯಾಸ್ ಘಟಕ. 
ಉಡುಪಿ

ಇವರಿಗಿಲ್ಲ ಗ್ಯಾಸ್ ಟೆನ್ಶನ್

ವಿಜಯವಾಣಿ ಸುದ್ದಿಜಾಲ ಕಾರ್ಕಳ
ಯುದ್ಧದ ಹಿನ್ನೆಲೆಯಲ್ಲಿ ದೇಶಾದ್ಯಂತ ಅಡುಗೆ ಅನಿಲದ ಕೊರತೆಯಿಂದ ಸಾಕಷ್ಟು ಹೋಟೆಲ್‌ಗಳನ್ನು ಮುಚ್ಚಲಾಗಿದ್ದು, ಒಂದಷ್ಟು ಮನೆಯಲ್ಲಿ ಗ್ಯಾಸ್‌ನ ಸಮಸ್ಯೆಯಾಗಿ ಸೌದೆ ಒಲೆಯತ್ತ ಜನ ತಿರುಗುವ ಈ ಕಾಲಟ್ಟದಲ್ಲಿ ಅಡುಗೆ ಅನಿಲದ ಯಾವುದೇ ಚಿಂತೆಯಿಲ್ಲದೆ ತಮ್ಮ ಮನೆಗೆ ಬೇಕಾಗಿರುವ ಅಡುಗೆ ಅನಿಲವನ್ನು ತಾವೇ ಉತ್ಪಾದಿಸಿಕೊಳ್ಳುವ ಅಪರೂಪದ ವ್ಯಕ್ತಿ ಕಾರ್ಕಳದ ಇರ್ವತ್ತೂರಿನಲ್ಲಿದ್ದಾರೆ.
ಇರ್ವತ್ತೂರಿನ ಕೃಷಿಕ ಶ್ರೀನಿವಾಸ್ ಭಟ್ ಕುಟುಂಬ 45 ವರ್ಷಗಳಿಂದ ಮನೆಯ ಅಡುಗೆಗೆ ಗೋಬರ್ ಗ್ಯಾಸ್ ಬಳಸುತ್ತಿದೆ. ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ, ಕೊರತೆ ಮತ್ತು ಅಲಭ್ಯತೆ ಬಗ್ಗೆ ಎಲ್ಲರೂ ತಲೆಕೆಡಿಸಕೊಂಡಿದ್ದರೂ ಈ ಕುಟುಂಬ ಯಾವುದೇ ಚಿಂತೆಯಿಲ್ಲದೆ ಅಡುಗೆ ಮಾಡುತ್ತಿದೆ.
ಶ್ರೀನಿವಾಸ್ ಭಟ್ ಕುಟುಂಬ ಪಶುಗಳಿಂದ ದೊರೆಯುವ ಗೋಮಯವನ್ನು ಬಳಸಿ ಗೋಬರ್ ಗ್ಯಾಸ್ ಘಟಕ ಸ್ಥಾಪಿಸಿದೆ. ಪ್ರತಿದಿನ ಸಂಗ್ರಹವಾಗುವ ಗೋಮಯವನ್ನು ವಿಶೇಷ ಟ್ಯಾಂಕ್‌ನಲ್ಲಿ ಸಂಗ್ರಹಿಸಿ ಅದರ ಮೂಲಕ ಉತ್ಪತ್ತಿಯಾಗುವ ಅನಿಲವನ್ನು ಅಡುಗೆಗೆ ಬಳಸಲಾಗುತ್ತಿದೆ. ಅನಿಲ ಉತ್ಪಾದನೆ ನಂತರ ಉಳಿಯುವ ಅವಶೇಷವನ್ನು ಸಾವಯವ ಕೃಷಿಗೆ ಸಾವಯವ ಗೊಬ್ಬರವಾಗಿ ಬಳಸಲಾಗುತ್ತಿದೆ. ಗ್ಯಾಸ್ ಬೆಲೆ ಏರಿಕೆ, ಗ್ಯಾಸ್ ಸಿಲಿಂಡರ್ ಕೊರತೆ ಎಫೆಕ್ಟ್‌ನ ಟೆನ್ಷನ್ ಇಲ್ಲದೆ ಸ್ವಾವಲಂಬಿಯಾಗಿ ಅಡುಗೆ ಅನಿಲ ಪಡೆದುಕೊಳ್ಳುತ್ತಿರುವ ಶ್ರೀನಿವಾಸ್ ಭಟ್ ಎಲ್ಲರಿಗೂ ಮಾದರಿಯಾಗಿದ್ದಾರೆ.

ಸ್ವಾಭಿಮಾನದಿಂದ ಬದುಕಲು ಬೇಕಾದುದನ್ನು ಕೃಷಿಯಲ್ಲಿ ಅಳವಡಿಸಿಕೊಂಡರೆ ಖರ್ಚು, ಶ್ರಮ ಕಡಿಮೆ. ಯುವ ಜನಾಂಗ ಈ ದಿಕ್ಕಿಗೆ ಆಲೋಚನೆ ಮಾಡಬೇಕು. ಪ್ರಕೃತಿಯ ಒಟ್ಟಿಗೆ ಬಾಳ್ವೆ ವಾಡುವಂತಹ ಒಂದು ವಿಧಾನವನ್ನು ಅಳವಡಿಕೆ ಮಾಡಿದ್ದಲ್ಲಿ ಖಂಡಿತವಾಗಿಯೂ ವಿದೇಶಿ ಅವಲಂಬನೆಯನ್ನು ಕಡಿಮೆ ಮಾಡಬಹುದು. ಪ್ರಾಮಾಣಿಕವಾಗಿ ದುಡಿಮೆ ಮಾಡಿದಲ್ಲಿ ಲಾಭ ಇದೆ.