ಉದುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ.
* ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ
* ಯೋಜನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ
ಉಡುಪಿ: ಕೇರಳದ ಪಾಲಕ್ಕಾಡ್ ವಿಭಾಗದಲ್ಲಿದ್ದ ಮಂಗಳೂರು ರೈಲ್ವೆ ವ್ಯವಸ್ಥೆಯನ್ನು ನಮ್ಮ ರಾಜ್ಯದ ಮೈಸೂರು ವಿಭಾಗಕ್ಕೆ ಸೇರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಚಿವ ಅಶ್ವಿನಿ ವೈಷ್ಣವ್ ಹಾಗೂ ಮೈಸೂರು ವಿಭಾಗಕ್ಕೆ ತರುವಲ್ಲಿ ರಾಜ್ಯ ಸಚಿವ ವಿ.ಸೋಮಣ್ಣ ಶ್ರಮವಹಿಸಿದ್ದಾರೆ. ಕೇರಳ ಸರ್ಕಾರದ ಬೆದರಿಕೆಗೆ ಮಣಿಯುವುದಿಲ್ಲ. ಈ ಯೋಜನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಕರ್ನಾಟಕದ ಕರಾವಳಿ ಭಾಗದ ಹಾಲಿ ಸಂಸದರು ಹಾಗೂ ಹಿಂದಿನ ಸಂಸದರ ಯೋಚನೆಯ ಯೋಜನೆಯೂ ಇದಾಗಿದೆ. ಕೇಂದ್ರ ಸರ್ಕಾರ ಅಧಿಕೃತವಾಗಿ ಆದೇಶವನ್ನೂ ನೀಡಿದೆ. ಆದರೆ, ಕೇರಳ ಸರ್ಕಾರ ಇದನ್ನು ವಿರೋಧಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದಿದ್ದಾರೆ.
ಈ ವಿಚಾರದಲ್ಲಿ ಕರ್ನಾಟಕದ ಸರ್ಕಾರದ ಯಾವುದೇ ಪಾತ್ರದ ಇಲ್ಲ. ಆದರೂ ಮೋದಿ ಸರ್ಕಾರ ರೈಲ್ವೇ ವಿಚಾರದಲ್ಲಿ ರಾಜ್ಯಕ್ಕೆ ನ್ಯಾಯದ ಅವಕಾಶ ಮಾಡಿಕೊಟ್ಟಿದೆ. ಕೇರಳ ಸರ್ಕಾರದ ಪ್ರತಿಭಟನೆಗೆ ಇಲಾಖೆ ಮಣಿಯದು. ನಮ್ಮ ರಾಜ್ಯದವರು ಯಾವುದೇ ಆತಂಕಪಡಬೇಕಿಲ್ಲ ಎಂದು ಸಚಿವ ಸೋಮಣ್ಣ ಸ್ಪಷ್ಟಪಡಿಸಿದ್ದಾರೆ. ಕೇರಳದ ಸಂಸದರು ಎಷ್ಟೇ ವಿರೋಧಿಸಿದರೂ ನಮ್ಮ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಕೋಟ ತಿಳಿಸಿದ್ದಾರೆ.
ರಾಜ್ಯದ ಬೊಕ್ಕಸಕ್ಕೆ ಆದಾಯ
ಇದು ಕೇವಲ ಕರಾವಳಿ ಭಾಗದ ಪ್ರಶ್ನೆಯಲ್ಲ. ಅದರಿಂದಾಗಿ ರಾಜ್ಯದ ಬೊಕ್ಕಸಕ್ಕೆ ಸಾಕಷ್ಟು ಆದಾಯ ಬರುತ್ತದೆ. ನಮ್ಮ ಭಾಗದ ರೈಲ್ವೆ ಅಭಿವೃದ್ಧಿಗೂ ಸಹ ಬಹದೊಡ್ಡ ಕೊಡುಗೆ ಆಗಲಿದೆ. ಮುಂದಿನ ದಿನಗಳಲ್ಲಿ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆ ಜೊತೆಗೆ ವಿಲೀನ, ರೈಲ್ವೆ ಹಳಿ ಡಬಲಿಂಗ್, ಹೊಸ ರೈಲು ಯೋಜನೆ ಸೇರಿದಂತೆ ಅನೇಕ ಯೋಜನೆಗಳ ಕುರಿತು ನಮ್ಮ ಪ್ರಯತ್ನ ಮುಂದುವರಿಸುತ್ತೇವೆ ಎಂದು ಸಂಸದ ಕೋಟ ಪೂಜಾರಿ ತಿಳಿಸಿದ್ದಾರೆ.