ಕಾಸರಗೋಡು ಡಿಸಿ ಕಚೇರಿ ಸಭಾಂಗಣದಲ್ಲಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಸನ್ನಿ ಜೋಸೆಫ್ ಮಾತನಾಡಿದರು. ಶಾಸಕರಾದ ಎ.ಕೆ.ಎಂ.ಅಶ್ರಫ್, ಕಲ್ಲಟ್ರ ಮಾಹಿನ್, ಕೆ.ನೀಲಕಂಠನ್, ಗೋವಿಂದನ್ ಪಳ್ಳಿಕ್ಕಾಪ್ಪಿಲ್ ಮೊದಲಾದವರು ಉಪಸ್ಥಿತರಿದ್ದರು. 
ಉಡುಪಿ

ಚೀಮೇನಿಯಲ್ಲಿ ಅಣು ವಿದ್ಯುತ್ ಸ್ಥಾವರ ಪ್ರಸ್ತಾವನೆ ಇಲ್ಲ

ಕಾಸರಗೋಡು: ಚೀಮೇನಿಯಲ್ಲಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪಿಸುವ ಯಾವುದೇ ತೀರ್ಮಾನವನ್ನು ಸರ್ಕಾರ ಕೈಗೊಂಡಿಲ್ಲ ಮತ್ತು ಅಂಥ ಯಾವುದೇ ಪ್ರಸ್ತಾವನೆ ಮುಂದುವರಿಸುವುದಿಲ್ಲ ಎಂದು ರಾಜ್ಯ ವಿದ್ಯುತ್, ಪರಿಸರ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಸನ್ನಿ ಜೋಸೆಫ್ ತಿಳಿಸಿದ್ದಾರೆ.
ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚೀಮೇನಿಯಲ್ಲಿ ಪರಮಾಣು ವಿದ್ಯುತ್ ಸ್ಥಾವರ ಯೋಜನೆ ಮುಂದುವರಿಸದಂತೆ ಸಂಸದರು, ಜಿಪಂ ಅಧ್ಯಕ್ಷ, ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಈಗಾಗಲೇ ಸಲಹೆ ನೀಡಿದ್ದಾರೆ. ಸದರಿ ಸ್ಥಳದಲ್ಲಿ ಯೋಜನೆ ಕೈಗೆತ್ತಿಕೊಳ್ಳುವ ಯಾವುದೇ ತೀರ್ಮಾನ ಸರ್ಕಾರಕ್ಕಿಲ್ಲ. ಉಡುಪಿ-ಕರಿಂದಲ ವಿದ್ಯುತ್ ಲೈನ್ ಯೋಜನೆಗೆ ಭೂಮಿ ಕಳೆದುಕೊಂಡ ಎಲ್ಲರಿಗೂ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಮೈಲಾಟ್ಟಿ ಬ್ಯಾಟರಿ ಸಂಗ್ರಹಣಾ ವ್ಯವಸ್ಥೆ ಮತ್ತು ಮುಳ್ಳೇರಿಯಾ ಸಬ್‌ಸ್ಟೇಷನ್ ಕಾಮಗಾರಿ ಬಗ್ಗೆ ಸಚಿವರು ಮಾಹಿತಿ ಪಡೆದುಕೊಂಡರು. ಚೀಮೇನಿ ಸೋಲಾರ್ ಪಾರ್ಕ್‌ನ ಪ್ರಸಕ್ತ ಸ್ಥಿತಿಗತಿ ಬಗ್ಗೆ ಚರ್ಚಿಸಲಾಯಿತು.
ಶಾಸಕರಾದ ಎ.ಕೆ.ಎಂ.ಅಶ್ರಫ್, ಕಲ್ಲಟ್ರ ಮಾಹಿನ್, ಕೆ.ನೀಲಕಂಠನ್, ಗೋವಿಂದನ್ ಪಳ್ಳಿಕ್ಕಾಪ್ಪಿಲ್, ಸಂದೀಪ್ ವಾರಿಯರ್, ಜಿಪಂ ಅಧ್ಯಕ್ಷ ಸಾಬು ಅಬ್ರಹಾಂ, ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್, ಪ್ರಸರಣ ಇಂಜಿನಿಯರ್ ಶಾಜಿ ಸುಧಾಕರನ್, ಟ್ರಾನ್ಸ್‌ಗ್ರಿಡ್ ಮುಖ್ಯ ಇಂಜಿನಿಯರ್ ವಿ.ಸುರೇಶ್ ಉಪಸ್ಥಿತರಿದ್ದರು.
ಕಾರ್ಯನಿರ್ವಾಹಕ ಇಂಜಿನಿಯರ್ ಶಿವದಾಸನ್ ವಿಷಯ ಮಂಡಿಸಿದರು. ಕೇರಳ ರಾಜ್ಯ ವಿದ್ಯುತ್ ಮಂಡಳಿ ನಿರ್ದೇಶಕ ಎಂ.ಪಿ.ರಾಜನ್ ಸ್ವಾಗತಿಸಿದರು. ಉತ್ತರ ಮಲಬಾರ್ ವಿತರಣಾ ವಿಭಾಗದ ಮುಖ್ಯ ಇಂಜಿನಿಯರ್ ಟಿ.ಎಸ್.ಜಯಶ್ರೀ ವಂದಿಸಿದರು.

ಇಲಾಖೆಯಲ್ಲಿ ಸಿಬ್ಬಂದಿ ಯಾವುದೇ ದೂರಿಗೆ ಆಸ್ಪದ ನೀಡದಂತೆ ಸಾರ್ವಜನಿಕರಿಗೆ ಸೇವೆ ಒದಗಿಸುವುದರ ಜತೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲಾಮಟ್ಟದಲ್ಲಿ ಸಭೆ ನಡೆಸಬೇಕು

— ಸನ್ನಿ ಜೋಸೆಫ್, ಸಚಿವ