ನಾವುಂದ ಕರಾವಳಿ ತೀರದಲ್ಲಿ ಅಳವಡಿಸಲಾಗಿರುವ ವಿದ್ಯುತ್ ಕಂಬಗಳು.
ವಿಜಯವಾಣಿ ಸುದ್ದಿಜಾಲ ಕುಂದಾಪುರ
ನಾವುಂದ ಕರಾವಳಿ ಮೀನುಗಾರಿಕೆ ರಸ್ತೆಯಿಂದ ಮರವಂತೆ ಮೀನುಗಾರಿಕೆ ಬಂದರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ನಾವುಂದ ಕರಾವಳಿ ತೀರದಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದ್ದರೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಪರಿಣಾಮ ಬೀದಿ ದೀಪಗಳಿಲ್ಲದೆ ಮೀನುಗಾರರು ಕತ್ತಲಲ್ಲೇ ಸಂಚರಿಸುವಂತಾಗಿದೆ.
ಮೀನುಗಾರಿಕೆ ಮತ್ತು ಮೀನು ವ್ಯಾಪಾರವನ್ನೇ ಅವಲಂಬಿಸಿರುವ ನೂರಾರು ಕುಟುಂಬಗಳಿಗೆ ಈ ರಸ್ತೆಯೇ ಜೀವನಾಡಿಯಾಗಿದೆ. ಬೆಳಗ್ಗಿನ ಜಾವ 3- 4 ಗಂಟೆ ಸುಮಾರಿಗೆ 350ಕ್ಕೂ ಹೆಚ್ಚು ಮೀನುಗಾರರು ಪ್ರತಿದಿನ ದ್ವಿಚಕ್ರ ವಾಹನಗಳಲ್ಲಿ ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ರಾತ್ರಿ ಸಮಯದಲ್ಲೂ ಈ ರಸ್ತೆಯಲ್ಲಿ ಜನರ ಸಂಚಾರವಿರುತ್ತದೆ. ಆದರೆ ರಸ್ತೆಯುದ್ದಕ್ಕೂ ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ ರಾತ್ರಿ ವೇಳೆ ಅಪಾಯದ ಆತಂಕದಲ್ಲೇ ಓಡಾಡಬೇಕಾದ ಪರಿಸ್ಥಿತಿಯಿದೆ.
ಮೀನುಗಾರರ ಆಗ್ರಹ
ಕರಾವಳಿ ಮೀನುಗಾರಿಕೆ ರಸ್ತೆಯಿಂದ ಮರವಂತೆ ಮೀನುಗಾರಿಕೆ ಬಂದರಿಗೆ ಸಂಪರ್ಕಿಸುವ ಈ ರಸ್ತೆಯಲ್ಲಿ ಮೆಸ್ಕಾಂ ಇಲಾಖೆ ಐದು ವರ್ಷಗಳ ಹಿಂದೆ ನಾಲ್ಕು ವಿದ್ಯುತ್ ಕಂಬಗಳನ್ನು ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿತ್ತು. ಅನಂತರ 1 ವರ್ಷ ಬೆಳಕಿನ ವ್ಯವಸ್ಥೆ ಮಾಡಲಾಗಿತ್ತು. ಆದರೆ ದೀಪಗಳು ತುಕ್ಕು ಹಿಡಿದು ಹಾಳಾದ ನಂತರ ಮೂರೂವರೆ ವರ್ಷಗಳಾದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಬೀದಿ ದೀಪಗಳು ಕಾರ್ಯನಿರ್ವಹಿಸದೆ ಕಂಬಗಳು ಕೇವಲ ಹೆಸರಿಗೆ ಮಾತ್ರ ಉಳಿದಿವೆ. ಸ್ಥಳೀಯಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆ ನಿರ್ಲಕ್ಷೃದಿಂದ ಈ ಸಮಸ್ಯೆ ವರ್ಷಗಳಿಂದ ಮುಂದುವರಿದಿದ್ದು, ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸಿ ಬೀದಿ ದೀಪ ಅಳವಡಿಸಬೇಕೆಂದು ಮೀನುಗಾರರು ಆಗ್ರಹಿಸಿದ್ದಾರೆ.
ರಸ್ತೆಯಲ್ಲಿ ವಿದ್ಯುತ್ ಕಂಬಗಳಿದ್ದೂ ಸಂಪರ್ಕ ಹಾಗೂ ಬೆಳಕಿನ ವ್ಯವಸ್ಥೆಯಿಲ್ಲದಿರುವುದು ಈಗಾಗಲೇ ಗಮನಕ್ಕೆ ಬಂದಿದೆ. ಮುಂದಿನ ಕ್ರಿಯಾ ಯೋಜನೆಯಲ್ಲಿ ಅನುದಾನ ಕಾಯ್ದಿರಿಸಿ, ಬೆಳಕಿನ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುವುದು.
— ಹರೀಶ್ ಮೊಗವೀರ ಪಿಡಿಒ, ನಾವುಂದ ಗ್ರಾಮ ಪಂಚಾಯಿತಿ