ಬಂಧಿತರಿಂದ ವಶಪಡಿಸಿಕೊಂಡಿರುವ ನಗದು, ಚಿನ್ನಾಭರಣಗಳು. ಪೊಲೀಸರು ವಶಕ್ಕೆ ಪಡೆದಿರುವ ಆರೋಪಿಗಳು.
* ಉಡುಪಿ ನಗರ ಪೊಲೀಸರ ಕಾರ್ಯಾಚರಣೆ
* 23 ಲಕ್ಷ ರೂ. ಮೌಲ್ಯದ ಸೊತ್ತು ವಶ
ಉಡುಪಿ: ಬಹುದಿನಗಳಿಂದ ಬಾಗಿಲಿಗೆ ಬೀಗ ಹಾಕಿರುವ ಮನೆಗಳನ್ನೇ ಗುರಿಯಾಗಿಸಿ ಆ ಮನೆಯೊಳಗೆ ನುಗ್ಗಿ ನಗದು, ಆಭರಣ ಹಾಗೂ ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದ ಇಬ್ಬರು ಕಳ್ಳರನ್ನು ಉಡುಪಿ ನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉಡುಪಿ ಶಿವಳ್ಳಿ ಗ್ರಾಮದ ಪೆರಂಪಳ್ಳಿ-ಕುಂಜಿಬೆಟ್ಟು ಚರ್ಚ್ ರಸ್ತೆ ಮಾರ್ಗದ ನಿವಾಸಿ ಅರುಣ್ ಎಸ್. ಆಚಾರಿ (43), ತೆಂಕನಿಡಿಯೂರು ಗ್ರಾಮದ ಗರಡಿ ಮಜಲುವಿನ ನಿವಾಸಿ ಕೌಶಿಕ್ ಪಿ. ಆಚಾರ್ಯ (19) ಬಂಧಿತರು.
ಆರೋಪಿಗಳಿಬ್ಬರೂ 5 ಪ್ರಕರಣದಲ್ಲಿ ಭಾಗಿಯಾಗಿದ್ದು ಅವರಿಂದ 23,56,230 ರೂ. ಮೌಲ್ಯದ ಚಿನ್ನಾಭರಣ, ಮೊಬೈಲ್, ಬೈಕ್ ಹಾಗೂ ಆಟೋವನ್ನು ವಶಕ್ಕೆ ಪಡೆಯಲಾಗಿದೆ.
ಉಡುಪಿ ತಾಲೂಕಿನ ಪುತ್ತೂರು ಗ್ರಾಮದ ವಾಸುಕೀ ನಗರದ ಭಗವತಿ ಲೇಔಟ್ನ ಮನೆಯಲ್ಲಿ ಕಳ್ಳತನ ನಡೆದಿತ್ತು. ಈ ಮನೆಯ ಮಾಲೀಕರಾದ ಯಾಸೀನ್ ಎಂಬವರು ಪತ್ನಿ ಸನಂ ಹಾಗೂ ಮಗುವಿನೊಂದಿಗೆ ದುಬೈಯಲ್ಲಿ ನೆಲೆಸಿದ್ದಾರೆ. ಆಗಸ್ಟ್ ತಿಂಗಳಲ್ಲಿ ಅವರು ಊರಿಗೆ ಬಂದಿದ್ದು, ಪತಿ ವಿದೇಶಕ್ಕೆ ತೆರಳಿದ ಬಳಿಕ ಪತ್ನಿ ಆ.8ರಂದು ಸಂಬಂಧಿಕರ ಮನೆಗೆ ಹೋಗಿದ್ದರು. ಆ.11ರಂದು ಮರಳಿ ಮನೆಗೆ ಬಂದಾಗ ಮನೆಯ ಟೆರೆಸ್ನ ಬಾಗಿಲನ್ನು ಕಳ್ಳರು ಆಯುಧದಿಂದ ಒಡೆದು ತೆಗೆದು ಒಳನುಗ್ಗಿದ್ದರು.
ಕಪಾಟಿನಲ್ಲಿದ್ದ 10 ಸಾವಿರ ಎಇಡಿ ಧಿರಾಮ್ ವಿದೇಶಿ ನೋಟುಗಳು, 14 ಸಾವಿರ ರೂ. ನಗದು ಸೇರಿ ಒಟ್ಟು 2.14 ಲಕ್ಷ ರೂ. ಕಳುವಾಗಿರುವ ಬಗ್ಗೆ ಸನಂ ದೂರು ನೀಡಿದ್ದರು. ಉಡುಪಿ ನಗರ ಠಾಣೆಯ ಪಿಎಸ್ಐ ಮಹೇಶ ಪ್ರಸಾದ್ ಮಾರ್ಗದರ್ಶನದಲ್ಲಿ ಠಾಣೆಯ ಎಸ್ಐ (ತನಿಖೆ) ಪ್ರಕಾಶ್ ನೇತೃತ್ಚವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಈ ತಂಡದಲ್ಲಿದ್ದ ಪ್ರಸನ್ನ ಸಿ., ಜೀವನ್ ಕುಮಾರ್, ಆನಂದ್ಹಾಗೂ ಮಣಿಪಾಲ ಠಾಣೆಯ ಸಿಬ್ಬಂದಿ ಮಲ್ಲಯ್ಯ ಹಿರೇಮಠ್, ಹೇಮಂತ್ ಕುಮಾರ್ ಅವರು ಖಚಿತ ಮಾಹಿತಿಯ ಮೇರೆಗೆ ಆ.23ರಂದು ಪೆರಂಪಳ್ಳಿಯ ಸಂತೋಷ ನಗರದಲ್ಲಿ ಬಂದಿಸಿದರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಬಂಧಿತ ಕಳ್ಳರಿಬ್ಬರೂ ಒಟ್ಟಿಗೆ ಸೇರಿ ಕಳ್ಳತನ ಮಾಡುತ್ತಿದ್ದರು. ಅವರಿಬ್ಬರಿಂದ 2 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ಮತ್ತು ನೋಟು, 2.86 ಲಕ್ಷ ರೂ. ಮೌಲ್ಯದ 1.360 ಗ್ರಾಂ ಬೆಳ್ಳಿಯ ಆಭರಣ, 22,500 ರೂ. ಮೌಲ್ಯದ 1.45 ಗ್ರಾಂ ಚಿನ್ನದ ನಾಣ್ಯ, 4 ಲಕ್ಷ ರೂ. ಮೌಲ್ಯದ ಸಿಎಜಿ ಆಟೋರಿಕ್ಷಾ, ನಗದು 33 ಸಾವಿರ ರೂ., 2 ಮೊಬೈಲ್ ಪೋನ್, ಕೃತ್ಯಕ್ಕೆ ಬಳಸಲು ಕಳ್ಳತನ ಮಾಡಿದ್ದ ಪಲ್ಸರ್ ಬೈಕ್, 30 ಸಾವಿರ ರೂ. ಬೆಲೆಯ 1 ವಿದೇಶಿ ಕೈಗಡಿಯಾರ, 13.26 ಲಕ್ಷ ರೂ. ಬೆಲೆಯ 88.400 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಬ್ಬರೂ 5 ಪ್ರಕರಣದಲ್ಲಿ ಭಾಗಿಯಾಗಿದ್ದು ಉಡುಪಿ ವ್ಯಾಪ್ತಿಯ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದರು. ಬಂಧಿತ ಅರುಣ್ ಆಚಾರಿಯು ಮಣಿಪಾಲ ಠಾಣೆಯಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣದಲ್ಲಿ 9 ವರ್ಷ ಜೈಲುಶಿಕ್ಷೆಯಾಗಿತ್ತು. ಶಿಕ್ಷೆ ಅನುಭವಿಸಿ 2025ರ ಜುಲೈ ತಿಂಗಳಲ್ಲಿ ಪರಪ್ಪನ ಅಗ್ರಹಾರ ಜೈಲ್ನಿಂದ ಬಿಡುಗಡೆಯಾಗಿ ಬಂದಿದ್ದನು ಎಂದು ಎಸ್ಪಿ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದಾರೆ.