ಉಡುಪಿಯಲ್ಲಿ ಆಯೋಜಿಸಿದ್ದ ಸುಮನಸಾ ಸಂಘಟನೆಯ ಕಾರ್ಯಕ್ರಮದಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪ್ರದೀಪಚಂದ್ರ ಕುತ್ಪಾಡಿ ಅವರನ್ನು ಸನ್ಮಾನಿಸಲಾಯಿತು. ಹರಿಪ್ರಸಾದ ರೈ, ಪೂರ್ಣಿಮಾ, ಪ್ರೊ. ಎಂ.ಎಲ್​. ಸಾಮಗ, ಸುಕನ್ಯಾ ಮಾರ್ಟಿಸ್​, ಪ್ರಕಾಶ ಜಿ. ಕೊಡವೂರು, ಪ್ರಜ್ಞಾಶ್ರೀ ಕೊಡವೂರು ಇದ್ದರು. 
ಉಡುಪಿ

ಜೀವನದ ಮೌಲ್ಯ ಕಲಿಸುವ ಶಾಲೆ ರಂಗಭೂಮಿ

* ಸುಮನಸಾ ರಜತ ಸಂಭ್ರಮ ಸಮಿತಿ ಅಧ್ಯಕ್ಷ ಹರಿಪ್ರಸಾದ ಅಭಿಪ್ರಾಯ

* ಕನ್ನಡ ನಾಟಕಗಳ 'ಯುವ ರಂಗ ಸಂಗಮ' ಪೋಸ್ಟರ್​ ಬಿಡುಗಡೆ

ಉಡುಪಿ: ನಾಟಕಗಳು ಮತ್ತು ರಂಗಭೂಮಿಯ ವಿಭಿನ್ನ ಪ್ರಯೋಗವನ್ನು ಪ್ರದರ್ಶನಕ್ಕಷ್ಟೇ ಸೀಮಿತ ಮಾಡಬಾರದು. ಅವುಗಳು ನೀಡುವ ಸಮಾಜಮುಖಿ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ರಂಗಭೂಮಿಯೆಂದರೆ ಕೇವಲ ಮನರಂಜನೆಯ ಮಾಧ್ಯಮವಲ್ಲ. ಅದು ಜೀವನದ ಮೌಲ್ಯ ಕಲಿಸುವ ಶಾಲೆ ಎಂದು ಸುಮನಸಾ ರಜತ ಸಂಭ್ರಮ ಸಮಿತಿಯ ಅಧ್ಯಕ್ಷ ಹರಿಪ್ರಸಾದ ರೈ ಅಭಿಪ್ರಾಯಪಟ್ಟರು.

ಉಡುಪಿ ಯಕ್ಷಗಾನ ಕಲಾರಂಗದ ಐವೈಸಿ ಆಡಿಟೋರಿಯಂನಲ್ಲಿ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ರಜತ ಸಂಭ್ರಮದ ಸರಣಿ ಕಾರ್ಯಕ್ರಮದ ನಿಮಿತ್ತ ಆಯೋಜಿಸಿದ್ದ ಮೈಸೂರಿನ 'ನಿರ್ದಿಗಂತ' ತಂಡ ಅಭಿನಯಿಸಿದ 'ಪ್ರಾಜೆಕ್ಟ್​ ಪಂಚತಂತ್ರ' ನಾಟಕ ಪ್ರದರ್ಶನ ಹಾಗೂ ಸಂಸ್ಥೆಯ 'ಯುವ ರಂಗ ಸಂಗಮ' ರಾಜ್ಯ ಮಟ್ಟದ ಕಾಲೇಜ್​ ವಿದ್ಯಾರ್ಥಿಗಳ ಕನ್ನಡ ನಾಟಕ ಮತ್ತು ಜಾಥಾ ಸ್ಪರ್ಧೆಯ ಪೋಸ್ಟರ್​ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸುಮನಸಾ ರಜತ ಸಂಭ್ರಮ ಸಮಿತಿಯ ಅಧ್ಯಕ್ಷ ಹರಿಪ್ರಸಾದ ರೈ ಮಾತನಾಡಿದರು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ರಂಗಭೂಮಿ ಉಡುಪಿಯ ಪ್ರಧಾನ ಕಾರ್ಯದರ್ಶಿ ಪ್ರದೀಪಚಂದ್ರ ಕುತ್ಪಾಡಿ ಕಾರ್ಯಕ್ರಮ ಉದ್ಘಾಟಿಸಿ, ಸುಮನಸಾ ಸಂಘಟನೆಯು ಕಲೆ ಮತ್ತು ಸಂಸ್ಕೃತಿಯನ್ನು ಪೋಷಿಸುತ್ತ, ಅನೇಕ ಜನಪರ ಹಾಗೂ ಜನೋಪಯೋಗಿ ಕಾರ್ಯ ಮಾಡುತ್ತಿದೆ ಎಂದರು.

ರಜತ ಸಂಭ್ರಮ ಸಮಿತಿ ಗೌರವಾಧ್ಯಕ್ಷ ಪ್ರೊ. ಎಂ.ಎಲ್​. ಸಾಮಗ,ಗೌರವ ಸಲಹೆಗಾರ್ತಿ ಸುಕನ್ಯಾ ಮಾರ್ಟಿಸ್​, ಯುವರಂಗ ಸಂಗಮ ಸಂಯೋಜಕರಾದ ಪ್ರಜ್ಞಾಶ್ರೀ ಕೊಡವೂರು, ಅಕ್ಷತ ಅಮೀನ್​ ಉಪಸ್ಥಿತರಿದ್ದರು.

ಸುಮನಸಾ ಸಂಸ್ಥೆಯ 'ಯುವ ರಂಗ ಸಂಗಮ' ರಾಜ್ಯ ಮಟ್ಟದ ಕಾಲೇಜ್​ ವಿದ್ಯಾರ್ಥಿಗಳ ಕನ್ನಡ ನಾಟಕ ಮತ್ತು ಜಾಥಾ ಸ್ಪರ್ಧೆಯ ಪೋಸ್ಟರ್​ಬಿಡುಗಡೆ ಮಾಡಲಾಯಿತು.

ಸೌಭಾಗ್ಯಾ ತಂತ್ರಿ ಪ್ರಾರ್ಥಿಸಿದರು. ಸುಮನಸಾ ಅಧ್ಯಕ್ಷ ಪ್ರಕಾಶ ಜಿ. ಕೊಡವೂರು ಸ್ವಾಗತಿಸಿದರು. ವಿದ್ದು ಉಚ್ಚಿಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಚಂದ್ರಕಾಂತ ಕುಂದರ್​ ವಂದಿಸಿದರು. ಯೋಗೀಶ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು.

ಮೈಸೂರಿನ 'ನಿರ್ದಿಗಂತ' ತಂಡದ 'ಪ್ರಾಜೆಕ್ಟ್​ ಪಂಚತಂತ್ರ' ನಾಟಕ ಪ್ರದರ್ಶನ.