ಉಡುಪಿಯ ಐವೈಸಿಗೆ ಭೇಟಿ ನೀಡಿದ್ದ ಕೆ.ಅಣ್ಣಾಮಲೈ ಅವರನ್ನು ಯಕ್ಷಗಾನ ಕಲಾರಂಗದ ವತಿಯಿಂದ ಸನ್ಮಾನಿಸಲಾಯಿತು. ಎಂ. ಗಂಗಾಧರ್​ ರಾವ್​, ಮುರಳಿ ಕಡೆಕಾರ್​, ನಾರಾಯಣ ಹೆಗಡೆ, ಸದಾಶಿವ ರಾವ್​ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಇದ್ದರು. 
ಉಡುಪಿ

ಯಕ್ಷಗಾನ ಕಲಾರಂಗದ ಸೇವೆ ಅನನ್ಯ

* ತಮಿಳುನಾಡಿನ ಕೆ. ಅಣ್ಣಾಮಲೈ ಶ್ಲಾಘನೆ

* ಉಡುಪಿಯ ಐವೈಸಿ ಸಭಾಂಗಣಕ್ಕೆ ಭೇಟಿ

ಉಡುಪಿ: ಯಕ್ಷಗಾನ ಕಲಾರಂಗ ಸಂಸ್ಥೆಯ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಅಗಾಧತೆ ಹೊಂದಿದೆ. ಕೇವಲ ಕಲೆಗೆ ಸೀಮಿತವಾಗಿರದೆ ಸಾಮಾಜಿಕ ಕಳಕಳಿ ಹೊಂದಿರುವುದು ವಿಶೇಷ. ಈಗಾಗಲೇ 100ಕ್ಕೂ ಅಧಿಕ ಮನೆಗಳನ್ನು ಕಟ್ಟಿಸಿಕೊಟ್ಟಿರುವ ಸಂಸ್ಥೆಯ ಕಾರ್ಯ ಅನನ್ಯ ಎಂದು ಉಡುಪಿ ಜಿಲ್ಲಾ ಮಾಜಿ ಪೊಲೀಸ್​ ವರಿಷ್ಠ ಹಾಗೂ ಪ್ರಸ್ತುತ ತಮಿಳುನಾಡಿನ ರಾಜಕಾರಣಿ ಕೆ. ಅಣ್ಣಾಮಲೈ ಶ್ಲಾಘಿಸಿದರು.

ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಕಟ್ಟಡಕ್ಕೆ ಭೇಟಿ ನೀಡಿದ್ದ ಅವರು ಕಟ್ಟಡ ಮತ್ತು ವಿದ್ಯಾಪೋಷಕ್​ ವಿದ್ಯಾರ್ಥಿಗಳಿಗೆ ಮನೆ ಹಸ್ತಾಂತರದ ವಿಡಿಯೋ ವೀಕ್ಷಿಸಿ ಮಾತನಾಡಿದರು.

ಸದಾ ಪ್ರೋತ್ಸಾಹ

ಸಂಸ್ಥೆಯ ಕಾರ್ಯದರ್ಶಿ ಮುರಳಿ ಕಡೆಕಾರ್​ ಮಾತನಾಡಿ, ಪೊಲೀಸ್​ ಇಲಾಖೆಯಲ್ಲಿದ್ದಾಗ ಕರ್ತವ್ಯ ದಕ್ಷತೆಯಿಂದಲೇ ಉಡುಪಿ ಜಿಲ್ಲೆಯ ನಾಗರಿಕರ ಹೃದಯದಲ್ಲಿ ಸ್ಥಾಯಿಯಾಗಿದ್ದರು. ಉಡುಪಿಯನ್ನು ಬಿಟ್ಟ ಮೇಲೂ ಸಹ ನಮ್ಮ ಸಂಸ್ಥೆಯನ್ನು ನಿರಂತರ ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ. ಕೆಲ ವರ್ಷದ ಹಿಂದೆ ಹತ್ಯೇಗಿಡಾದ ಬೈಂದೂರಿನ ಅಕ್ಷತಾ ದೇವಾಡಿಗಳ ಹೆಸರಿನಲ್ಲಿ ಬೈಂದೂರು ಸರ್ಕಾರಿ ಪ್ರೌಢಶಾಲೆಯ ಎಸ್​ಎಸ್​ಎಲ್​ಸಿಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸುವ ವಿದ್ಯಾರ್ಥಿನಿಯರಿಗೆ ಪ್ರತಿವರ್ಷ 25 ಸಾವಿರ ರೂ. ಸಹಾಯಧನ ನೀಡುತ್ತಿರುವುದನ್ನು ಸ್ಮರಿಸಿದರು.

ಸಂಸ್ಥೆಯ ವತಿಯಿಂದ ಅಧ್ಯಕ್ಷ ಎಂ. ಗಂಗಾಧರ್​ ರಾವ್​ ಅಣ್ಣಾಮಲೈ ಅವರನ್ನು ಗೌರವಿಸಿದರು. ಸಹ ಕಾರ್ಯದರ್ಶಿ ನಾರಾಯಣ ಹೆಗಡೆ, ಕೋಶಾಧಿಕಾರಿ ಸದಾಶಿವ ರಾವ್​ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಇದ್ದರು.