ಸ್ತ್ರೀ ವೇಷದಲ್ಲಿ ಶಶಿಕಾಂತ್ ಶೆಟ್ಟಿ
ಯಕ್ಷಗಾನ ಕಲಾವಿದರೊಬ್ಬರು ಸಾವನ್ನೇ ಗೆದ್ದು ಬಂದು ರಂಗ ಪ್ರವೇಶಿಸಿ ಅಚ್ಚರಿ ಮೂಡಿಸಿದ್ದಾರೆ. ಅವರೇ ತೆಂಕು-ಬಡಗುತಿಟ್ಟಿನ ಪ್ರಶಸ್ತಿ ವಿಜೇತ ಪುರುಷ, ಸೀವೇಷಧಾರಿ ಶಶಿಕಾಂತ ಶೆಟ್ಟಿ ಕಾರ್ಕಳ (46). ವೃತ್ತಿಯಲ್ಲಿ ಮೂಲತಃ ಟೈಲರ್ ಆಗಿರುವ ಅವರು ನಾಟಕ ಕಲಾವಿದರೂ ಆಗಿದ್ದರು.
ಕೆಲವು ತಿಂಗಳುಗಳ ಹಿಂದೆ ಶಶಿಕಾಂತ ಶೆಟ್ಟರಿಗೆ ಹಠಾತ್ತನೆ ಜ್ವರ ಬಂದಿತ್ತು. ಪರೀಕ್ಷಿಸಿದಾಗ ಅವರಿಗೆ ನ್ಯುಮೋನಿಯಾ ಜ್ವರವಿರುವುದು ಪತ್ತೆಯಾಗಿತ್ತು. ತಿಂಗಳುಗಳ ಕಾಲ ಮಣಿಪಾಲ ಆಸ್ಪತ್ರೆಯ ತುರ್ತು ನಿಗಾ ಘಟಕ(ಐಸಿಯು)ದಲ್ಲಿ 48 ದಿನ ಚಿಕಿತ್ಸೆಯಲ್ಲಿದ್ದರು. ಅನಂತರ ಪವಾಡ ಎವೆನ್ನುವಂತೆ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡರು.
ಅವರು ಪ್ರಸ್ತುತ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರ ಪಾವಂಜೆ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಸಾಲಿಗ್ರಾಮ ಮೇಳದಲ್ಲಿ 22, ಮಂದಾರ್ತಿ ಮೇಳದಲ್ಲಿ 4 ವರ್ಷ ಬಣ್ಣ ಹಚ್ಚಿದ್ದರು. ಹವ್ಯಾಸಿ ಕಲಾವಿದರಾಗಿ ಬೇರೆ ಮೇಳಗಳಲ್ಲೂ ಪಾತ್ರ ಮಾಡುತ್ತಾರೆ.
ಯಕ್ಷಗಾನ ಪ್ರಿಯ ನನ್ನ ಅಭಿಮಾನಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮೊದಲಾದ ಸಮುದಾಯದವರು ದೇಗುಲ, ದೈವಸ್ಥಾನ, ಮಸೀದಿ, ಚರ್ಚ್‌ಗಳಲ್ಲಿ ಪ್ರಾರ್ಥನೆ ಮಾಡಿದರು. ಇದು ಲ ನೀಡಿದೆ ಎನ್ನುತ್ತಾರೆ ಈ ಕಲಾವಿದ.
ಬ್ಯಾಕ್ಟೀರಿಯಾದಿಂದ ಬರುವ ನ್ಯುಮೋನಿಯಾ ಜ್ವರ ಮಾರಣಾಂತಿಕ. ಸಕಾಲಿಕ ಚಿಕಿತ್ಸೆ ಲಭಿಸದಿದ್ದರೆ ಜೀವವೇ ಹೋಗುತ್ತದೆ. ಇದೊಂದು ಶ್ವಾಸಕೋಶದ ಸೋಂಕಾಗಿದ್ದು, ಜ್ವರ ಮತ್ತು ಉಸಿರಾಟಕ್ಕೆ ತೊಂದರೆ ಮಾಡುತ್ತದೆ ಎನ್ನುತ್ತಾರೆ ವೈದ್ಯರು.
ಎಲ್ಲಿಗೆಲ್ಲ ಹರಕೆ?
ಮಂದಾರ್ತಿ ಮೇಳದ ಧರ್ಮದರ್ಶಿಗಳು ಮತ್ತು ಕಲಾವಿದರು ದೇವರ ಮುಂದೆ ಪ್ರಾರ್ಥನೆ ಮಾಡಿದ್ದಾರೆ. ಕಲಾವಿದರು ಇಲ್ಲಿನ ಮೇಳ ಆಡಿಸುವ ಹರಕೆ ಕೊಟ್ಟಿದ್ದಾರೆ. ಕಲಾವಿದ ಮಿತ್ರರು ಹಾಲಾಡಿ ಮೇಳದ ಆಟ ಆಡಿಸುವ ಹರಕೆಯಿತ್ತಿದ್ದಾರೆ. ಅದು ಕೂಡ ಶಶಿಕಾಂತರು ಹೇಳಿದಲ್ಲಿ ಆಡಿಸುವ ಹರಕೆಯಿದು. ಹಾಸ್ಯಗಾರ ಕಲಾವಿದ ಮಿತ್ರರು ಶಶಿಕಾಂತರು ಆಸ್ಪತ್ರೆಯಿಂದ ಬಿಡುಗಡೆಗೊಂಡರೆ ನೀಲಾವರ ಮೇಳದ ಆಟ ಆಡಿಸುವ ಹರಕೆ ಹೊತ್ತಿದ್ದಾರೆ. ಅನ್ಯ ಧರ್ಮೀಯ ಅಭಿಮಾನಿಗಳು ಪ್ರಾರ್ಥನೆಗೈದು ಹರಕೆ ಹೊತ್ತಿದ್ದರು. ಅವರಿಗೆ ಪರಿಚಯವೇ ಇಲ್ಲದವರು ರಂಗಪೂಜೆ, ಯಕ್ಷಗಾನ, ಹೂವಿನ ಪೂಜೆ, ತುಲಾಭಾರ, ಇರುಮುಡಿ ಮೊದಲಾದ ಸೇವೆ ನೀಡುವುದಾಗಿ ಪ್ರಾರ್ಥಿಸಿದ್ದಾರೆ.
ಶ್ರದ್ಧಾಂಜಲಿಗೂ ನಡೆದಿತ್ತು ತಯಾರಿ!
ಕಾಯಿಲೆ ಉಲ್ಬಣಿಸಿದ್ದುದು ಎಲ್ಲೆಡೆ ಹಬ್ಬಿಯಾಗಿತ್ತು. ಶಶಿಕಾಂತ ಶೆಟ್ಟರು ನಿಧನರಾದರೆಂದು ಕೆಲವರು ಶ್ರದ್ಧಾಂಜಲಿ ನಡೆಸಲೂ ತಯಾರಿಗೆ ಮುಂದಾಗಿದ್ದರು. ಈ ಬಗ್ಗೆ ಶಶಿಕಾಂತ ಶೆಟ್ಟರನ್ನು ಪ್ರಶ್ನಿಸಿದಾಗ, ನಿಜ. ಯಾರು ಈ ಸುದ್ದಿ ಮಾಡಿದ್ದಾರೆಂದು ನಿಖರವಾಗಿ ಹೇಳಲಾರೆ. ಸಾಯುವ ಸ್ಥಿತಿಯಲ್ಲಿ ನಾನಿದ್ದದ್ದು ಸತ್ಯ. ಹಾಗಂತ ಸಾಯುವ ಮೊದಲೇ ಈ ರೀತಿ ಮಾಡಿದ್ದಾರಲ್ಲ ಅಂತ ಬೇಸರವೂ ಆಯಿತು. ಮತ್ತೇನು ಮಾಡುವುದು? ನಾನು ಬದುಕಿದ್ದೇ ಹೆಚ್ಚು. ಹಾಗಾಗಿ ಯಾರ ಮೇಲೂ ದ್ವೇಷವಿಲ್ಲ ಎಂದಿದ್ದಾರೆ.
ಯಕ್ಷಗಾನ ರಂಗದ ಅಭಿಮಾನಿಗಳೇ ನನ್ನ ದೇವರು. ನನ್ನ ಮಿತ್ರರು, ಮೇಳದವರು, ಕುಟುಂಬಿಕರ ಪ್ರಾರ್ಥನೆ ಲದಿಂದಾಗಿ ನಾನಿಂದು ಮತ್ತೆ ಗೆಜ್ಜೆ ಕಟ್ಟುವಂತಾಯಿತು. ಯುಗಾದಿ ವೇಳೆಗೆ ಗೆಜ್ಜೆ ಕಟ್ಟುವಂತೆ ಆಂತಾಗಬೇಕೆಂದು ದೇವರಲ್ಲಿ ಪ್ರಾರ್ಥಿಸಿದ್ದೆ. ಇದೀಗ ಕಲಾಸೇವೆಗೆ ಸಿದ್ಧನಾಗಿ ಪಾವಂಜೆ ಮೇಳದಲ್ಲಿ ಬಣ್ಣ ಹಚ್ಚಿರುವೆ. ನಾನು ಬದುಕಿ ಬಂದದ್ದೇ ಪವಾಡ.