ಉಡುಪಿ: ವೃತ್ತೀಜಿವನದ ಯಶಸ್ಸು ಮಾತ್ರ ಶಿಕ್ಷಣದ ಉದ್ದೇಶವಲ್ಲ. ಯಶಸ್ಸನ್ನು ಮೀರಿದ ಹೊಣೆಗಾರಿಕೆ ಅದು ಹೊಂದಿದೆ. ಜಗತ್ತಿಗೆ ನಿಮ್ಮ ಪ್ರತಿಭೆಯ ಅಗತ್ಯವಿದೆ. ಅದಕ್ಕಿಂತ ಹೆಚ್ಚಾಗಿ ನಿಮ್ಮ ಕಾಳಜಿ, ನಾಯಕತ್ವದ ಅಗತ್ಯವಿದೆ. ಪದವೀಧರರು ಅವಕಾಶ, ಪ್ರಯತ್ನಗಳಿಗೆ ಮಿತಿ ಹಾಕದೆ ಹೊಸ ಅವಕಾಶಗಳನ್ನು ಸ್ವಾಗತಿಸಬೇಕು. ಕಲಿಕೆಗೆ ಸದಾ ಮುಕ್ತರಾಗಿರಬೇಕು ಎಂದು ಕೆನಡಾದ ನ್ಯೂ ಬ್ರನ್ಸ್ವಿಕ್ ವಿಶ್ವವಿದ್ಯಾಲಯದ (ಯುಎನ್ಬಿ) ಅಧ್ಯೆ ಹಾಗೂ ಕುಲಪತಿ ಡಾ. ಕ್ಯಾಥಿ ವಿಲ್ಸನ್ ಸಲಹೆ ನೀಡಿದರು.
ಉಡುಪಿ ಮಣಿಪಾಲದಲ್ಲಿ 4 ದಿನಗಳ ಕಾಲ ನಡೆದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ)ನ 34ನೇ ಘಟಿಕೋತ್ಸವದಲ್ಲಿ ಭಾನುವಾರ (ನ.22) ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಮಾಹೆ ಟ್ರಸ್ಟ್ನ ಟ್ರಸ್ಟಿ ವಸಂತಿ ಆರ್. ಪೈ, ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ, ಕುಲಪತಿ ಡಾ. ಶರತ್ ಕೆ. ರಾವ್ ಉಪಸ್ಥಿತರಿದ್ದರು.
ಒಟ್ಟು 45 ಮಂದಿ ಪಿಎಚ್.ಡಿ ಪದವೀಧರರೂ ಸೇರಿದಂತೆ 1,439 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಮಾಹೆ ಹಾಗೂ ಕೆನಡಾದ ನ್ಯೂ ಬ್ರನ್ಸ್ವಿಕ್ ವಿಶ್ವವಿದ್ಯಾಲಯಗಳು (ಯುಎನ್ ಬಿ) ಜೊತೆಗೂಡಿ ರೂಪಿಸಿರುವ ನರ್ಸಿಂಗ್ ದ್ವಿ ಪದವಿ (ಡ್ಯೂಯಲ್ ಡಿಗ್ರಿ) ಮೊದಲ ಬ್ಯಾಚ್ನ 25 ವಿದ್ಯಾರ್ಥಿಗಳಿಗೂ ಪದವಿ ಪ್ರಮಾಣಪತ್ರ ವಿತರಿಸಲಾಯಿತು. ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸೈನ್ಸಸ್ (ಎಂಎಸ್ಎಲ್ಎಸ್)ನ ವಿದ್ಯಾರ್ಥಿ ಕೆದಿಲಾಯ ಶ್ರೀಕೃಷ್ಣ ಎಚ್. ದಾಮೋದರ ಅವರಿಗೆ ಪ್ರತಿಷ್ಠಿತ 'ಡಾ. ಟಿಎಂಎ ಪೈ ಚಿನ್ನದ ಪದಕ' ನೀಡಲಾಯಿತು. 4 ದಿನದ ಘಟಿಕೋತ್ಸವದಲ್ಲಿ ವಿವಿಧ ಅಧ್ಯಯನ, ಸಂಶೋಧನಾ ಕ್ಷೇತ್ರ, ಜ್ಞಾನಶಿಸ್ತು ವಿಭಾಗದ ಒಟ್ಟು 7,694 ಪದವೀಧರರು ಪ್ರಮಾಣಪತ್ರ ಸ್ವೀಕರಿಸಿದರು. ನ.28, 29ರಂದು ಮಾಹೆ ಬೆಂಗಳೂರು ಕ್ಯಾಂಪಸ್ನಲ್ಲಿ 2,583 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ಜರುಗಲಿದೆ.
ಮಾಹೆಯ 34ನೇ ಘಟಿಕೋತ್ಸವದ ಸಮಾಪನದೊಂದಿಗೆ ನಾವು ನಮ್ಮ ಪದವೀಧರರ ಶೈಕ್ಷಣಿಕ ಸಾಧನೆಗಳ ಜತೆಗೆ ಅವರ ಮೂಲಕ ಸಮಾಜಕ್ಕೆ ದೊರೆಯಲಿರುವ ಸೇವೆಗೂ ಸಂಭ್ರಮಿಸುತ್ತಿದ್ದೇವೆ. ಮಾಹೆಯಲ್ಲಿ ಶೈಕ್ಷಣಿಕವಾಗಿ ವೃತ್ತಿಪರ ಸಾಮರ್ಥ್ಯದೊಂದಿಗೆ ಸಾಮಾಜಿಕ ಜವಾಬ್ದಾರಿಗೆ ಪ್ರಾಧಾನ್ಯ ನೀಡುತ್ತೇವೆ. ಪದವಿ ಗಳಿಸಿದ ಬಳಿಕ ಕಲಿಕೆಯ ಒಂದು ಮಜಲು ಕೊನೆಗೊಂಡು ಇನ್ನೊಂದು ಮಜಲು ತೆರೆದುಕೊಳ್ಳುತ್ತದೆ. ಕಲಿಕೆ ನಿರಂತರ.ಡಾ. ಶರತ್ ಕೆ. ರಾವ್. ಮಾಹೆಯ ಕುಲಪತಿ.