ಕುಂದಾಪುರ ಸಹಾಯಕ ಅಂಚೆ ಅಧೀಕ್ಷಕ ಮಹೇಶ ಒಡಿಯೂರು ಅವರನ್ನು ಗೌರವಿಸಲಾಯಿತು.  
ಉಡುಪಿ

ಗಂಗೊಳ್ಳಿ ಸೌಹಾರ್ದ ಸಹಕಾರಿಯ ಕಾರ್ಯ ಸ್ತುತ್ಯರ್ಹ

ವಿಜಯವಾಣಿ ಸುದ್ದಿಜಾಲ ಕುಂದಾಪುರ
ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ಕೇವಲ ಆರ್ಥಿಕ ಚಟುವಟಿಕೆಗೆ ಸೀಮಿತವಾಗಿರದೆ, ಆ ಪ್ರದೇಶದ ಜನರ ಅಗತ್ಯತೆಗೆ ಸ್ಪಂದಿಸುವ ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಸ್ತುತ್ಯರ್ಹ. ಸೇವೆಗೆ ಹೆಸರುವಾಸಿಯಾದ ಈ ಸಂಸ್ಥೆ ಸಾಮಾಜಿಕ ಕಾರ್ಯಕ್ರಮ ನಡೆಸುತ್ತಿರುವುದರಿಂದ ಸಹಕಾರಿಯ ಹೆಸರು ಉಳಿಯುವಂತಾಗಿದೆ ಎಂದು ವ್ಯಂಗ್ಯಚಿತ್ರಗಾರ, ಚುಟುಕು ಸಾಹಿತಿ ಜಿ.ಭಾಸ್ಕರ ಕಲೈಕಾರ್ ಹೇಳಿದರು.
ಗಂಗೊಳ್ಳಿ ಟೌನ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ, ಗಂಗೊಳ್ಳಿ ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್, ಭಾರತೀಯ ಅಂಚೆ ಇಲಾಖೆ ಉಡುಪಿ ವಿಭಾಗದ ಆಶ್ರಯದಲ್ಲಿ ಸೊಸೈಟಿಯ ಬೈಲೂರು ಮಂಜುನಾಥ ಶೆಣೈ ಸಭಾಭವನದಲ್ಲಿ ಜರುಗಿದ ಆಧಾರ್ ನೋಂದಣಿ, ತಿದ್ದುಪಡಿ ಶಿಬಿರ ಹಾಗೂ ಅಂಚೆ ಜನಸಂಪರ್ಕ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಗಂಗೊಳ್ಳಿ ಟೌನ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಿ.ವೆಂಕಟೇಶ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಗ್ರಾಪಂ ಅಧ್ಯಕ್ಷೆ ಜಯಂತಿ ಖಾರ್ವಿ, ಕುಂದಾಪುರದ ಸಹಾಯಕ ಅಂಚೆ ಅಧೀಕ್ಷಕ ಮಹೇಶ ಒಡಿಯೂರು, ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್‌ನ ಮಾರ್ಕೋಸ್ ಪಿಂಟೊ, ಸದಸ್ಯರು, ಸಹಕಾರಿಯ ಉಪಾಧ್ಯಕ್ಷ ಜಿ.ವಿಶ್ವನಾಥ ಆಚಾರ್ಯ, ನಿರ್ದೇಶಕರು, ಸಿಬ್ಬಂದಿ, ಅಂಚೆ ಇಲಾಖೆ ಸಿಬ್ಬಂದಿ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪುರದ ಸಹಾಯಕ ಅಂಚೆ ಅಧೀಕ್ಷಕ ಮಹೇಶ ಒಡಿಯೂರು ಅವರನ್ನು ಗೌರವಿಸಲಾಯಿತು. ಸಹಕಾರಿಯ ಮುಖ್ಯ ಕಾರ್ಯನಿರ್ವಾಹಕ ಗಣೇಶ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. 193 ಫಲಾನುಭವಿಗಳು ಶಿಬಿರದ ಪ್ರಯೋಜನ ಪಡೆದುಕೊಂಡರು.