ಸುಗ್ಗಿ ಭತ್ತದ ಬೆಳೆ 
ಉಡುಪಿ

ಅನ್ನದಾತನ ಫಸಲಿಗೆ ‘ಕಳೆ’ಯೇ ಕುತ್ತು

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಈ ಬಾರಿ ಹವಾಮಾನ ವೈಪರಿತ್ಯದಿಂದ ಭತ್ತ ಬೆಳೆದ ರೈತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ನಡುವೆ ಇದೀಗ ಸುಗ್ಗಿ ಭತ್ತದ ಗದ್ದೆಗಳಲ್ಲಿ ಕಳೆಗಿಡಗಳ ಹಾವಳಿ ವಿಪರೀತವಾಗಿ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಗಿದೆ ಅನ್ನದಾತನ ಸ್ಥಿತಿ. ಭತ್ತವನ್ನೇ ಹೋಲುವ ಕಳೆಗಿಡಗಳು ಗದ್ದೆಗಳಲ್ಲಿ ಹೆಚ್ಚಾಗಿದ್ದು ಜಿಲ್ಲೆಯ ಹಲವೆಡೆ ಸಾಕಷ್ಟು ಫಸಲು ನಷ್ಟವಾಗಿದೆ.
ಕಳೆಗಿಡಗಳು ಗದ್ದೆಗೆ ಹಾಕಿದ ಗೊಬ್ಬರವನ್ನು ಹೀರಿಕೊಳ್ಳುವುದರಿಂದ ಭತ್ತದ ಇಳುವರಿಗೆ ಹೊಡೆತ ಬೀಳುತ್ತಿದೆ. ದೂರಕ್ಕೆ ಭತ್ತ ಸೊಂಪಾಗಿ ಬೆಳೆದಂತೆ ಕಂಡರೂ ಗದ್ದೆಯ ಬಹುತೇಕ ಭಾಗಗಳನ್ನು ಕಳೆಗಳೇ ಆವರಿಸಿವೆ. ಇದರಿಂದ ಜಿಲ್ಲೆಯ ರೈತರು ಚಿಂತಾಕ್ರಾಂತರಾಗಿದ್ದು, ಬೆಳೆ ನಾಶದಿಂದ ನಷ್ಟ ಭೀತಿಯೂ ಕಾಡುತ್ತಿದೆ. ಈ ಕಳೆಗಳು ರೈತನ ಮುಂದಿನ ಬೆಳೆಗೂ ಹಾನಿಯುಂಟು ಮಾಡುತ್ತವೆ. ಈ ವರ್ಷ ಕೊನಲೆ ಎಂಬ ಹೆಸರಿನ ಮತ್ತೊಂದು ಜಾತಿಯ ಕಳೆ ಭತ್ತದ ಗದ್ದೆಗಳಿಗೆ ಲಗ್ಗೆ ಇಟ್ಟಿದ್ದು, ಸುಗ್ಗಿ ಬೆಳೆ ಬಹುತೇಕ ಕುಂಠಿತವಾಗಿದೆ.

ಕಳೆಗಿಡ ತಡೆಯುವ ವಿಧಾನ

ಆರಂಭದಲ್ಲಿ ಕಳೆಯು ಸಾಮಾನ್ಯ ಭತ್ತದ ಸಸಿಯಂತೆ ಕಾಣುತ್ತದೆ. ಆದರೆ ಭತ್ತಕ್ಕಿಂತ ವೇಗವಾಗಿ ಹಾಗೂ ಎತ್ತರವಾಗಿ ಬೆಳೆಯುವ ಮೂಲಕ ನೈಜ ಭತ್ತ ಗಿಡವನ್ನು ಗುರುತಿಸುವುದೇ ಕಷ್ಟವಾಗುತ್ತದೆ. ಬೇಸಿಗೆಯಲ್ಲಿ ಆಳವಾಗಿ ಗದ್ದೆ ಒರೆಹಾಕುವುದರಿಂದ, ಬೆಳೆ ಪರಿವರ್ತನೆಯಿಂದ ಕಳೆ ಪ್ರಮಾಣ ಕಡಿಮೆಯಾಗುತ್ತದೆ. ಕೈಯಿಂದ ಕಳೆ ತೆಗೆಯುವುದು, ಬೀಜ ಉದುರುವ ಮೊದಲು ಕಳೆ ಸಸಿಗಳನ್ನು ನಿರ್ಮೂಲನೆ ಮಾಡುವುದು ಅತ್ಯಂತ ಪರಿಣಾಮಕಾರಿ ವಿಧಾನ. ಗದ್ದೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವಂತೆ ನೋಡಿಕೊಂಡಲ್ಲಿ ಕಳೆ ಕಡಿಮೆಯಾಗುತ್ತದೆ.

ಯಾಂತ್ರಿಕ ಉಳುಮೆ, ಮಿಶ್ರ ಬೆಳೆಯ ಮೂಲಕ ಕಟಾವು ಮಾಡುವ ಸಮಯದಲ್ಲಿ ಹೊರ ರಾಜ್ಯಗಳಿಂದ ಬರುವ ಬೃಹತ್ ಯಂತ್ರಗಳಲ್ಲಿರುವ ಕಳೆ ಬೀಜಗಳು ನಮ್ಮ ಮಣ್ಣಿಗೆ ಸೇರಿಕೊಳ್ಳುವುದೇ ಕಳೆ ಸಮಸ್ಯೆಗೆ ಕಾರಣ. ಗದ್ದೆಗೆ ಹಾಕುವ ಕೆಲ ಗೊಬ್ಬರ ಕೂಡ ಕಳೆ ಗಿಡ ಬೆಳೆಯಲು ಕಾರಣವಾಗುತ್ತಿದೆ.

ಎರಡು ಎಕರೆ ಪ್ರದೇಶದಲ್ಲಿ ಪ್ರತಿ ವರ್ಷದಂತೆ ಸುಗ್ಗಿ ಬಿತ್ತನೆ ಮಾಡಿದ್ದು, ಗದ್ದೆಗಳಲ್ಲಿ ಸಂಪೂರ್ಣ ಕಳೆಗಿಡಗಳೇ ತುಂಬಿ ಪೈರನ್ನು ನಾಶಪಡಿಸಿವೆ. ಈ ಕಾರಣದಿಂದ ನಿಗದಿತ ಸಮಯಕ್ಕೆ ಮೊದಲು ಗದ್ದೆ ಕಟಾವು ಮಾಡಲಾಗಿದೆ. ಸಾಮಾನ್ಯವಾಗಿ 30 ಕ್ವಿಂಟಾಲ್‌ಗಿಂತ ಅಧಿಕ ಭತ್ತ ಸಿಗುತ್ತಿತ್ತು. ಈ ಬಾರಿ ಯಾವುದೇ ಫಸಲು ಸಿಕ್ಕಿಲ್ಲ. ಬೆಳೆ ಬೈ ಹುಲ್ಲಿಗಷ್ಟೇ ಸೀಮಿತವಾಗಿದೆ.

ಗಂಡು ಭತ್ತವು ಭತ್ತದ ಪೈರನ್ನೇ ಹೋಲುವ ಅಪಾಯಕಾರಿ ಕಳೆಯಾಗಿದೆ. ತೆನೆ ಬರುವವರೆಗೂ ಇದು ಪತ್ತೆಯಾಗುವುದಿಲ್ಲ. ಈ ಕಳೆಯನ್ನು ಗುರುತಿಸಿ ಕೈಯಿಂದ ಕಿತ್ತು ಹಾಕುವುದು ಅತ್ಯುತ್ತಮ ನಿರ್ವಹಣಾ ವಿಧಾನ. ಕೆಲವೊಂದು ಕಳೆಗಳಿಗೆ ಪ್ರಾಥಮಿಕ ಹಂತದಲ್ಲಿ ಅಗತ್ಯ ಸಿಂಪಡಣೆಗಳನ್ನು ಕೈಗೊಳ್ಳಬಹುದು.