ಉಳ್ಳೂರು-74 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟೆ ಬೆಳ್ಳಾರ ಜಡ್ಡು ಪರಿಶಿಷ್ಟ ಜಾತಿ ಕಾಲನಿಯಲ್ಲಿರುವ ನೀರು ಸರಬರಾಜು ಟ್ಯಾಂಕ್. 
ಉಡುಪಿ

ನೀರು ಪೂರೈಕೆ ಟ್ಯಾಂಕ್ ಶಿಥಿಲ

ವಿಜಯವಾಣಿ ಸುದ್ದಿಜಾಲ ಕುಂದಾಪುರ
ಕುಂದಾಪುರ ತಾಲೂಕಿನ ಉಳ್ಳೂರು-74 ಗ್ರಾಪಂ ವ್ಯಾಪ್ತಿಯ ಕೋಟೆ ಬೆಳ್ಳಾರ ಜಡ್ಡು ಪರಿಶಿಷ್ಟ ಜಾತಿ ಕಾಲನಿ ಹತ್ತಿರ 20 ವರ್ಷದ ಹಿಂದೆ ಶೇ.25ರ ಅನುದಾನದಲ್ಲಿ ನಿರ್ಮಿಸಿರುವ ಕುಡಿಯುವ ನೀರು ಸರಬರಾಜು ಟ್ಯಾಂಕ್ ಸೂಕ್ತ ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆಗೆ ತಲುಪಿದ್ದು, ಈಗಲೋ ಆಗಲೋ ಬೀಳುವಂತಿದೆ.
ಟ್ಯಾಂಕ್ ಸ್ವಚ್ಛ ಮಾಡದೆ ಹತ್ತು ವರ್ಷಗಳೇ ಕಳೆದಿದೆ. ಟ್ಯಾಂಕಿಯ ನೀರು ನೋಡಿದರೆ ಗ್ರಾಪಂ ಸೊಳ್ಳೆಗಳ ತೊಟ್ಟಿ ನಿರ್ಮಿಸಿದಂತಿದೆ. ಗ್ರಾಮಸ್ಥರೂ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸೊಳ್ಳೆ ಮತ್ತು ಮಾರಣಾಂತಿಕ ಕಾಯಿಲೆ ಉತ್ಪತ್ತಿಯಾಗುವ ಭೀತಿ ಎದುರಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕ ಗ್ರಾಮಕ್ಕೆ ಮೂಲ ಸೌಕರ್ಯವನ್ನೂ ಒದಗಿಸಲು ಆಗದ ಈ ಗ್ರಾಮ ಪಂಚಾಯಿತಿ ಯಾಕೆಂದು ಜನರು ಪ್ರಶ್ನಿಸುತ್ತಿದ್ದಾರೆ.
ಗ್ರಾಮ ಸಭೆಯಲ್ಲಿ ಪರಿಶಿಷ್ಟ ಜಾತಿಗೆ ಸಿಗುವ ಸೌಲಭ್ಯಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆಯೇ ಹೊರತು ಅವು ಕಾರ್ಯರೂಪಕ್ಕೆ ಬರುತ್ತಿಲ್ಲ. ಗ್ರಾಪಂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಅಧಿಕಾರಿಗಳಿಗೂ ಪರಿಶಿಷ್ಟ ಜಾತಿ ಪಂಗಡಗಳಿಗೆ ಸರ್ಕಾರಿ ಸವಲತ್ತುಗಳನ್ನು ಪಡೆಯಲು ಅಸಾಧ್ಯವಾಗಿದೆ. ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗೆ ಯಾವುದೇ ಯೋಜನೆಗಳು ಪಂಚಾಯಿತಿಯಲ್ಲಿ ಕಾರ್ಯಗತವಾಗಿಲ್ಲ. ಮನೆಗಳಿಗೆ ಸರಿಯಾದ ರಸ್ತೆ ಸಂಪರ್ಕ ಕೂಡ ಇಲ್ಲದೆ ಇಂದಿಗೂ ಮಣ್ಣು ರಸ್ತೆಯಲ್ಲೇ ಸಂಚರಿಸುವಂತಾಗಿದೆ. ಕಾಲನಿಯಲ್ಲಿ ಬೀದಿ ದೀಪ ಮತ್ತು ಒಳ ಚರಂಡಿ ನಿರ್ಮಾಣ, ಶುದ್ಧ ಕುಡಿಯುವ ನೀರು, ರಸ್ತೆ ಅಭಿವೃದ್ಧಿ ಸಹಿತ ಹಲವಾರು ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಹಲವಾರು ವರ್ಷಗಳಿಂದ ಪಂಚಾಯಿತಿಗೆ ಮನವಿ ಮಾಡುತ್ತಲೇ ಬಂದಿದೆ. ಆದರೆ ಈವರೆಗೂ ಯಾವುದೂ ಈಡೇರಿಲ್ಲ.

ದಲಿತರ ಬೇಡಿಕೆಗಳನ್ನು ಈಡೇರಿಸಲು ಯಾವುದೇ ಕ್ರಮವಹಿಸದ ಸ್ಥಳೀಯಾಡಳಿತ ಕೂಡಲೇ ಎಚ್ಚೆತ್ತುಕೊಂಡು ನ್ಯಾಯಪರ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು.