ಉಡುಪಿಯ ಡಾ. ಜಿ.ಶಂಕರ ಕಾಲೇಜ್​ನಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಜಯಕರ ಶೆಟ್ಟಿ ಉದ್ಘಾಟಿಸಿದರು. ಪ್ರೊ. ಡಾ.ನಿಕೇತನಾ, ಡಾ. ಗಣನಾಥ ಶೆಟ್ಟಿ ಎಕ್ಕಾರು, ಡಾ. ರಾಮಚಂದ್ರ ಪಾಟ್ಕರ್​, ಜೀವನದಾಸ ಶೆಟ್ಟಿ, ಶಿವರಾಮ ಶೆಟ್ಟಿ, ಕವಿತಾ, ಅಶ್ವಿಜಾ, ಡಾ. ರವೀಶ ಬಿ., ರಾಕೇಶ, ಪುನೀತ ತೆಂಡುಲ್ಕರ್​ ಇದ್ದರು. 
ಉಡುಪಿ

ರಕ್ತದಾನದಿಂದ ಜೀವ ಉಳಿಸಿದ ಪುಣ್ಯ ಪ್ರಾಪ್ತಿ

* ರೆಡ್​ ಕ್ರಾಸ್​ ಕುಂದಾಪುರ ಘಟಕದ ಅಧ್ಯಕ್ಷ ಜಯಕರ ಶೆಟ್ಟಿ ಅನಿಸಿಕೆ

* ಉಡುಪಿಯ ಡಾ. ಜಿ.ಶಂಕರ ಕಾಲೇಜ್​ನಲ್ಲಿ ಶಿಬಿರ ಉದ್ಘಾಟನೆ

ಉಡುಪಿ: ಉತ್ತಮ ಆಹಾರ ಪದ್ಧತಿಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ದೇಹ ಆರೋಗ್ಯವಾಗಿದ್ದರೆ ಮನಸ್ಸು ಸಹ ಆರೋಗ್ಯವಾಗಿರುತ್ತದೆ. ರಕ್ತದಾನದಿಂದ ದೈಹಿಕ ಆರೋಗ್ಯ ವೃದ್ಧಿಯಾಗುವುದಲ್ಲದೆ, ಇನ್ನೊಬ್ಬರ ಜೀವ ಉಳಿಸಿದ ಪುಣ್ಯ ಲಭಿಸುತ್ತದೆ. ಜನರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಭಾರತೀಯ ರೆಡ್​ ಕ್ರಾಸ್​ ಸಂಸ್ಥೆಯ ಕುಂದಾಪುರ ಘಟಕದ ಅಧ್ಯಕ್ಷ ಜಯಕರ ಶೆಟ್ಟಿ ತಿಳಿಸಿದರು.

ಉಡುಪಿ ಅಜ್ಜರಕಾಡಿನಲ್ಲಿರುವ ಡಾ. ಜಿ.ಶಂಕರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್​ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕಾಲೇಜ್​ನ ಯುವ ರೆಡ್​ ಕ್ರಾಸ್​, ರಾಷ್ಟ್ರೀಯ ಸೇವಾ ಯೋಜನೆ, ರೇಂಜರ್ಸ್​ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶದ ವತಿಯಿಂದ ಹಾಗೂ ಉಡುಪಿ ಜಿಲ್ಲಾ ರೆಡ್​ಕ್ರಾಸ್​ ಸಂಸ್ಥೆ, ಕುಂದಾಪುರ ಲಯನ್ಸ್​ ಕ್ಲಬ್​ ಮತ್ತು ಲಯನ್ಸ್​ ಮಿಡ್​ಟೌನ್​ ಉಡುಪಿ ಸಹಕಾರದೊಂದಿಗೆ ಶುಕ್ರವಾರ (ಅ.23) ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಉಡುಪಿಯ ಡಾ. ಜಿ.ಶಂಕರ ಕಾಲೇಜ್​ನಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಜಯಕರ ಶೆಟ್ಟಿ ಉದ್ಘಾಟಿಸಿದರು.

ತಪ್ಪು ಕಲ್ಪನೆ ಬೇಡ

ಉಡುಪಿ ಜಿಲ್ಲಾ ರೆಡ್​ಕ್ರಾಸ್​ ಸಂಸ್ಥೆಯ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ, ರಕ್ತದಾನವು ಅತ್ಯಂತ ಮಹತ್ವದ ದಾನವಾಗಿದೆ. ಇದರ ಬಗ್ಗೆ ಜನರಲ್ಲಿರುವ ಭಯ ಮತ್ತು ತಪ್ಪು ಕಲ್ಪನೆ ದೂರ ಮಾಡಬೇಕಿದೆ. ನಮಗೆ ಅಥವಾ ನಮ್ಮ ಆಪ್ತರಿಗೆ ರಕ್ತದ ಅವಶ್ಯಕತೆ ಎದುರಾದಾಗ ರಕ್ತದಾನದ ಮಹತ್ವ ಅರಿವಾಗುತ್ತದೆ ಎಂದರು.

ಕಾಲೇಜ್​ನ ಪ್ರಾಂಶುಪಾಲೆ ಪ್ರೊ. ಡಾ.ನಿಕೇತನಾ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್​ ಮಿಡ್​ಟೌನ್​ ಉಡುಪಿಯ ಅಧ್ಯಕ್ಷ ಲಯನ್​ ಡಾ. ರಾಮಚಂದ್ರ ಪಾಟ್ಕರ್​, ಲಯನ್ಸ್​ ಉಡುಪಿ ಮಿಡ್​ಟೌನ್​ ಕಾರ್ಯದರ್ಶಿ ಜೀವನದಾಸ ಶೆಟ್ಟಿ, ಭಾರತೀಯ ರೆಡ್​ಕ್ರಾಸ್​ ಸೊಸೈಟಿ ಕುಂದಾಪುರ ಘಟಕದ ಕೋಶಾಧಿಕಾರಿ ಶಿವರಾಮ ಶೆಟ್ಟಿ, ಯುವ ರೆಡ್​ ಕ್ರಾಸ್​ ಕಾರ್ಯಕ್ರಮಾಧಿಕಾರಿ ಕವಿತಾ, ರೇಂರ್ಜಸ್​ ನಾಯಕಿ ಅಶ್ವಿಜಾ, ಸಹಾಯಕ ಪ್ರಾಧ್ಯಾಪಕ ಡಾ. ರವೀಶ ಬಿ., ಪುನೀತ ತೆಂಡುಲ್ಕರ್​ ಉಪಸ್ಥಿತರಿದ್ದರು.

ಅಶ್ವಿನಿ ತಂತ್ರಿ, ಅನೂಷಾ ಮತ್ತು ಸಿಂಚನಾ ಪ್ರಾರ್ಥಿಸಿದರು. ಎನ್​ಎಸ್​ಎಸ್​ ಕಾರ್ಯಕ್ರಮಾಧಿಕಾರಿ ರಾಕೇಶ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ರಾಜೇಂದ್ರ ಕೆ. ವಂದಿಸಿದರು. ವಿದ್ಯಾರ್ಥಿನಿ ಭಾರ್ಗವಿ ಕಾರ್ಯಕ್ರಮ ನಿರೂಪಿಸಿದರು.

ರಕ್ತದಾನ ಮಾಡಿದ ಪ್ರಾಧ್ಯಾಪಕರು.

ಗಮನ ಸೆಳೆದ ದಾನಿಗಳು

ಕಾಲೇಜ್​ನ ಗ್ರಂಥಪಾಲಕ (ಆಯ್ಕೆ ಶ್ರೇಣಿ) ವೆಂಕಟೇಶ 39ನೇ ಬಾರಿ ರಕ್ತದಾನ ಮಾಡಿದರು. ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಶರತಕುಮಾರ್​ 33ನೇ ಬಾರಿ, ಉಪನ್ಯಾಸಕಿ ಸ್ಮಿತಾ 22ನೇ ಬಾರಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಯತೀಶಕುಮಾರ್​ 20ನೇ ಬಾರಿ ಹಾಗೂ ಪ್ರಾಂಶುಪಾಲೆ ಪ್ರೊ. ಡಾ.ನಿಕೇತನಾ 6ನೇ ಬಾರಿ ರಕ್ತದಾನ ಮಾಡಿದರು. ಬೋಧಕೇತರ ಸಿಬ್ಬಂದಿ ತುಳಸಿ ರಕ್ತದಾನದಲ್ಲಿ ಪಾಲ್ಗೊಂಡರು. ಶಿಬಿರದಲ್ಲಿ 34 ಯೂನಿಟ್​ ರಕ್ತ ಸಂಗ್ರಹಿಸಲಾಯಿತು. ರೆಡ್​ಕ್ರಾಸ್​ ಸೊಸೈಟಿ ಕುಂದಾಪುರದ ರಕ್ತನಿಧಿ ಸಿಬ್ಬಂದಿ ಸಹಕರಿಸಿದರು.

ಪ್ರೊ. ಡಾ.ನಿಕೇತನಾ ಮಾತನಾಡಿದರು.
ಬಾಲ್ಯದಲ್ಲಿ ಸೂಜಿಯನ್ನು ಕಂಡರೆ ಭಯಪಡುತ್ತಿದ್ದೆವು. ಶಾಲೆಯಲ್ಲಿ ಬಿಸಿಜಿ ಲಸಿಕೆ ಹಾಕಿಸುವಾಗಲೂ ಭಯದಿಂದ ಅಳುತ್ತಿದ್ದೆವು. ಆದರೆ, ಈಗ 6ನೇ ಬಾರಿ ರಕ್ತದಾನ ಮಾಡುವಾಗ ನನಗೆ ಸಂತೋಷವಾಗುತ್ತಿದೆ. ರಕ್ತದಾನವು ಮಹತ್ವದ ಸಮಾಜಮುಖಿ ಕಾರ್ಯವಾಗಿದೆ. ರಕ್ತದಾನದಿಂದ ಇನ್ನೊಬ್ಬರ ಜೀವ ಉಳಿಸಲು ಸಾಧ್ಯ. ಜನರು ಭಯ ಬದಿಗಿಟ್ಟು ರಕ್ತದಾನಕ್ಕೆ ಮುಂದಾಗಬೇಕು.
ಪ್ರೊ. ಡಾ.ನಿಕೇತನಾ. ಕಾಲೇಜ್​ನ ಪ್ರಾಂಶುಪಾಲೆ.