ಬಾಯ್ತೆರೆದುಕೊಂಡಿರುವ ವಾರಾಹಿ ಪೈಪ್‌ಲೈನ್.
ಗ್ರಾಮಗಳಲ್ಲಿ ಕುಡಿಯುವ ನೀರಿನ ಬರ ನೀಗಿಸಲು ಕೇಂದ್ರ ಸರ್ಕಾರ ಜಲಜೀವನ್ ಯೋಜನೆ ಅನುಷ್ಠಾನಗೊಳಿಸಿದೆ. ಆದರೆ ಆಮೆಗತಿಯಲ್ಲಿ ಸಾಗುತ್ತಿರುವ ಪೈಪ್‌ಲೈನ್ ಕಾಮಗಾರಿ ಅರೆಬರೆಯಾಗಿದ್ದು, ಸಾರ್ವಜನಿಕರಿಗೆ ಸಂಕಷ್ಟ ಎದುರಾಗಿದೆ.
ಕೋಟ ಶ್ರೀನಿವಾಸ ಪೂಜಾರಿ ಅವರ ಪರಿಕಲ್ಪನೆಯಂತೆ ವಾರಾಹಿ ಯೋಜನೆ ಮೂಲಕ ಗ್ರಾಮೀಣ ಕರಾವಳಿ ಭಾಗದ ಜನ ಕುಡಿಯುವ ಅಥವಾ ಬಳಕೆಯ ನೀರಿಗೆ ಬರ ಇನ್ನಿಲ್ಲದಂತೆ ಮಾಡಲು ಯೋಜನೆ ರೂಪಿಸಿ, ವಿವಿಧ ಸಂಬಂಧಿತ ಇಲಾಖಾಧಿಕಾರಿಗಳ ಜತೆ ಚರ್ಚಿಸಿ ರೂಪುರೇಷೆ ಸಿದ್ಧಪಡಿಸಿತು. ಅದಾದ ನಂತರ ಪೈಪ್‌ಲೈನ್‌ಗೆ ಬೇಕಾದ ಸ್ಥಳ ಮಹಜರ್ ನಡೆಸಿ ಕಾಮಗಾರಿ ಕೈಗೆತ್ತಿಕೊಂಡಿತು. ಈ ಯೋಜನೆಯ ಕಾಮಗಾರಿ ಪ್ರಾರಂಭಗೊಂಡು ನಾಲ್ಕೈದು ವರ್ಷ ಕಳೆದರೂ ಪೈಪ್‌ಲೈನ್ ಕಾಮಗಾರಿ ಮಾತ್ರ ಅರೆಬರೆಯಾಗಿ ನಿಂತು ಬಿಟ್ಟಿದೆ.
ಒಂದೆಡೆ ಕಾಮಗಾರಿ ಪೂರ್ಣಗೊಂಡಿಲ್ಲ, ಇನ್ನೊಂದಡೆ ಜನಸಾವಾನ್ಯರಿಗೆ ನೀರಿನ ಬರ ನೀಗಿಲ್ಲ. ಹೀಗಿರುವಾಗ ಯೋಜನೆ ಹಳ್ಳ ಹಿಡಿದಿರುವ ಆತಂಕ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ರಸ್ತೆ ಅಗೆದು ಸಮಸ್ಯೆ ಸೃಷ್ಟಿಸಿದರು
ಕುಡಿಯುವ ನೀರಿನ ಪೈಪ್ ಅಳವಡಿಕೆಗೆ ರಸ್ತೆಗಳನ್ನು ಅಗೆದು ವಾರಗಟ್ಟಲೆ ಪೈಪ್ ಅಳವಡಿಸದೆ ಸಂಚಾರಕ್ಕೆ ಸಂಕಷ್ಟ ತಂದೊಡ್ಡಿದರು. ಜನರು ಪ್ರಶ್ನಿಸಿದರೆ ಸ್ಥಳೀಯಾಡಳಿತವನ್ನು ಬೊಟ್ಟು ವಾಡಿ ತೋರಿಸುವ ಯೋಜನೆ ಗುತ್ತಿಗೆದಾರರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಟನೆಗಳು ಇತ್ತೀಚೆಗೆ ಕೋಟ ಪಂಚಾಯಿತಿ ವ್ಯಾಪ್ತಿಯ ಮೂಡುಗಿಳಿಯಾರು ಭಾಗದಲ್ಲಿ ನಡೆದಿದೆ.
ಪೈಪ್ ಜೋಡಿಸಲು ಮೀನಮೇಷ
ಪೈಪ್‌ಲೈನ್ ಅಳವಡಿಕೆ ಹೆಚ್ಚಿನ ಭಾಗದಲ್ಲಿ ವೇಗ ಪಡೆದಿತ್ತಾದರೂ ಕೆಲವು ಪಂಚಾಯಿತಿ ವ್ಯಾಪ್ತಿಯಲ್ಲಿ ಮಂದಗತಿ ಸಾಗಿತ್ತು. ಇನ್ನು ಕೆಲವು ಭಾಗಗಳಲ್ಲಿ ಅಳವಡಿಸಿದ ಪೈಪ್ ಜೋಡಿಸದೆ ಬಾಯ್ತೆರೆದುಕೊಂಡಿದೆ. ಈ ಪೈಪ್ ಒಳಗಡೆ ಇಲಿ, ಹಾವು ಸೇರಿದಂತೆ ಬೇರೆ ಬೇರೆ ಪ್ರಾಣಿಗಳು ಸೇರಿಕೊಂಡಿರುವ ಆತಂಕವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.
ಈ ಪೈಪ್ ಕಳೆದೊಂದು ವರ್ಷದಿಂದ ಬಾಯ್ತೆರೆದು ಪಂಚಾಯಿತಿ ಎದುರು ಹಾಗೇ ಉಳಿದುಕೊಂಡಿದೆ. ಇದರಲ್ಲಿ ನಮ್ಮ ಕಣ್ಣೆದುರೆ ಸಾಕಷ್ಟು ಸಣ್ಣ ಪುಟ್ಟ ಪ್ರಾಣಿಗಳು ಹೋಗಿರುವುದು ಗಮನಕ್ಕೆ ಬಂದಿದೆ. ಹೀಗಿರುವಾಗ ಆ ಪೈಪ್ ಜೋಡಿಸಿದ ನಂತರ ಆ ಪ್ರಾಣಿಗಳ ಸಾವು ಕಟ್ಟಿಟ್ಟ ಬುತ್ತಿ. ಈ ಬಗ್ಗೆ ಸಾಕಷ್ಟು ಬಾರಿ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಲಾಗಿದೆ. ಈವರೆಗೂ ಜೋಡಿಸುವ ಕಾರ್ಯ ನಡೆದಿಲ್ಲ. ಇನ್ನಾದರೂ ಕ್ರಮಕೈಗೊಳ್ಳಲಿ.
— ಶೇಖರ್ ಪೂಜಾರಿ ಪಂಚಾಯಿತಿ ಮಾಜಿ ಪ್ರತಿನಿಧಿ
ಎಲ್ಲ ಭಾಗದಲ್ಲಿ ಪೈಪ್ ಜೋಡಿಸುವ ಕಾರ್ಯ ನಡೆದಿದೆ. ಐರೋಡಿ ಪಂಚಾಯಿತಿ ಎದುರು ಜೋಡಿಸದ ಬಗ್ಗೆ ಮಾಹಿತಿ ಪಡೆದು ಈ ಬಗ್ಗೆ ಪರಿಶೀಲಿಸಿ, ಪೈಪ್ ಬಗ್ಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಿದ್ದೇವೆ.
— ಆಕಾಶ್, ಅಭಿಯಂತ, ಗ್ರಾಮೀಣ ನೀರು ಸರಬರಾಜು ಇಲಾಖೆ