ಬೈಂದೂರು ಲಾವಣ್ಯದ 49ನೇ ವಾರ್ಷಿಕೋತ್ಸವ ಹಾಗೂ ರಂಗಶ್ರೀ ರಂಗ ಹಬ್ಬವನ್ನು ರಾಯಚೂರು ಉದ್ಯಮಿ ಉಪ್ಪುಂದ ರಾಮಚಂದ್ರ ಪ್ರಭು ಉದ್ಘಾಟಿಸಿದರು. ಲಾವಣ್ಯ ಅಧ್ಯಕ್ಷ ನರಸಿಂಹ ಬಿ.ನಾಯಕ್, ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಯು.ದಿನೇಶ ಪ್ರಭು, ಶಿರೂರು ಪ್ರಸಾದ ಪ್ರಭು, ಡಾ.ಪ್ರತಿಭಾ ರೈ ಇದ್ದರು. 
ಉಡುಪಿ

ಕಲೆ, ಸಾಹಿತ್ಯದಿಂದ ಜೀವನ ಮೌಲ್ಯ

ವಿಜಯವಾಣಿ ಸುದ್ದಿಜಾಲ ಬೈಂದೂರು
ಸಾಂಸ್ಕೃತಿಕ ಪ್ರೀತಿಯು ಮಾನವೀಯ ಮೌಲ್ಯ ವೃದ್ಧಿಸಿ ಸಮಾಜಮುಖಿ ಚಿಂತನೆಗಳನ್ನು ಕಲ್ಪಿಸುತ್ತದೆ. ಕಲೆ, ಸಾಹಿತ್ಯದಿಂದ ಮಾತ್ರ ಇಂತಹ ಅನುಭವ ಮತ್ತು ಜೀವನ ಮೌಲ್ಯಗಳು ದೊರೆಯುತ್ತವೆ. ಮಾನವನ ಹುಟ್ಟಿನೊಂದಿಗೆ ಬಂದಿರುವ ರಂಗಭೂಮಿ ಅವನಿರುವವರೆಗೂ ಜತೆಯಲ್ಲಿ ಸಾಗುತ್ತದೆ. ಅದು ರೂಪಾಂತರಗೊಳ್ಳಬಹುದೆ ಹೊರತು ಅದಕ್ಕೆ ಅಳಿವಿಲ್ಲ ಎಂದು ರಾಯಚೂರು ಉದ್ಯಮಿ ಉಪ್ಪುಂದ ರಾಮಚಂದ್ರ ಪ್ರಭು ಹೇಳಿದರು.
ಬೈಂದೂರು ಶಾರದಾ ವೇದಿಕೆಯಲ್ಲಿ ಬುಧವಾರ ಲಾವಣ್ಯದ 49ನೇ ವಾರ್ಷಿಕೋತ್ಸವ ಹಾಗೂ ಲಾವಣ್ಯದ ಸ್ಥಾಪಕಾಧ್ಯಕ್ಷ ದಿ.ಯು.ಉಪ್ಪುಂದ ಶ್ರೀನಿವಾಸ ಪ್ರಭು ಅವರ ಸ್ಮರಣಾರ್ಥ ಆಯೋಜಿಸಲಾದ ರಂಗಶ್ರೀ ರಂಗ ಹಬ್ಬ-2026 ಉದ್ಘಾಟಿಸಿ ಮಾತನಾಡಿದರು.
ಲಾವಣ್ಯ ಅಧ್ಯಕ್ಷ ನರಸಿಂಹ ಬಿ.ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ರಿದಂ ನೃತ್ಯ ಶಾಲೆ ಸ್ಥಾಪಕ, ನೃತ್ಯಗುರು ನಾಗೇಂದ್ರ ಕುಮಾರ್ ಬಂಕೇಶ್ವರ ಅವರನ್ನು ಲಾವಣ್ಯ ವತಿಯಿಂದ ಸನ್ಮಾನಿಸಲಾಯಿತು. ಭಾರತೀಯ ಜೀವ ವಿಮಾ ನಿಗಮದ ವಿಭಾಗೀಯ ಪ್ರಬಂಧಕ ಯು.ದಿನೇಶ ಪ್ರಭು, ಉದ್ಯಮಿ ಶಿರೂರು ಪ್ರಸಾದ ಪ್ರಭು, ಡಾ.ಪ್ರತಿಭಾ ರೈ ಬೈಂದೂರು, ಪ್ರವೀಣ್ ಎಸ್.ಪ್ರಭು ಉಪಸ್ಥಿತರಿದ್ದರು.
ಲಾವಣ್ಯ ಮಾಜಿ ಅಧ್ಯಕ್ಷ ಉದಯ ಆಚಾರ್ಯ ಸ್ವಾಗತಿಸಿದರು. ಗಣಪತಿ ಎಸ್.ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ವಿಶ್ವನಾಥ ಆಚಾರ್ಯ ವಾರ್ಷಿಕ ವರದಿ ವಾಚಿಸಿದರು. ಓಂಗಣೇಶ ಉಪ್ಪುಂದ ನಿರೂಪಿಸಿದರು. ಸುರೇಶ ಹುದಾರ್ ವಂದಿಸಿದರು.

ಲಾವಣ್ಯಕ್ಕೆ ಜನಾಶ್ರಯವೇ ಬೆನ್ನೆಲುಬು. ರಂಗಾಸಕ್ತ ಸಹೃದಯಿ ಕಲಾಭಿಮಾನಿಗಳು, ಕಲಾ ಪೋಷಕರು ಕೈಹಿಡಿದು ಮುನ್ನಡೆಸಿದ ಪರಿಣಾಮ ನಲವತ್ತೊಂಬತ್ತು ವಸಂತಗಳಲ್ಲಿ ಲವಲವಿಕೆಯಿಂದಲೇ ಬೆಳೆದು ಬಂದಿದೆ. ಲಾವಣ್ಯ, ಒಳ ಹೊರಗೆ ತನ್ನದೆ ಆದ ಉತ್ಸಾಹಿ ಸಮುದಾಯವನ್ನು ಕಟ್ಟಿಕೊಂಡಿದೆ. ಚಲನಶೀಲತೆಯನ್ನು ಅಳವಡಿಸಿಕೊಂಡಿದ್ದರಿಂದಲೇ ವರ್ಷದಿಂದ ವರ್ಷಕ್ಕೆ ನಿರಂತರವಾಗಿ ಬೆಳೆಯುತ್ತಿದೆ.

ರಂಗಭೂಮಿ ಕ್ಷೇತ್ರದಲ್ಲಿ ಲಾವಣ್ಯ ತನ್ನ ಪರಿಪೂರ್ಣ ಸಾಧನೆ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ. ದಿ.ಶ್ರೀನಿವಾಸ ಪ್ರಭುಗಳಿಂದ 1977ರಲ್ಲಿ ಸ್ಥಾಪಿಸಲ್ಪಟ್ಟ ಲಾವಣ್ಯ, ಪ್ರಸ್ತುತ ಬೈಂದೂರಿನ ಸಾಂಸ್ಕೃತಿಕ ಹಿರಿಮೆಯನ್ನು ಜಗದಗಲ ಪಸರಿಸಿದ ಸಾಧನೆ ಮಾಡಿದೆ. ಕಳೆದ 49 ವರ್ಷಗಳಿಂದ ಬೈಂದೂರಿನಂತಹ ಗ್ರಾಮೀಣ ಭಾಗದಲ್ಲಿ ರಂಗಭೂಮಿಯನ್ನು ಬೆಳೆಸಿದ ಕೀರ್ತಿ ಲಾವಣ್ಯಕ್ಕೆ ಸಲ್ಲುತ್ತದೆ.