ಸಮಸ್ಯೆ ಇರುವಲ್ಲಿ ನಗರಸಭೆಯ ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡಲಾಗುತ್ತಿರುವುದು.
ಜುಲೈ ತಿಂಗಳು ಮುಗಿಯುತ್ತಾ ಬಂದರೂ ಮಳೆಯ ಅಬ್ಬರ ಇಲ್ಲದಿರುವುದು ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಮುಂದುವರಿದಿದೆ. ಸಮಸ್ಯೆ ಇರುವ ಪ್ರದೇಶಗಳಿಗೆ ನಗರಸಭೆಯ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
ಹಲವು ವರ್ಷಗಳಿಂದ ನಗರಸಭಾ ವ್ಯಾಪ್ತಿಯಲ್ಲಿ ಸಮಸ್ಯೆ ಸಾಮಾನ್ಯವಾಗಿದ್ದು ಉಳ್ಳಾಲ ದರ್ಗಾದ ಬಾವಿಯ ನೀರು ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುತ್ತಿತ್ತು. ಆದರೆ ಹಿಂದೆ ಮಳೆಗಾಲದಲ್ಲಿ ಸಮಸ್ಯೆ ಇರುತ್ತಿಲಿಲ್ಲ. ಆದರೆ ಈ ಬಾರಿ ವಿವಿಧ ಮೂಲಗಳಿಂದ ನೀರು ಪೂರೈಕೆಯಾಗಿದ್ದರೂ ಮಳೆ ಕ್ಷೀಣವಾಗಿರುವುದರಿಂದ ಕೆಲವೆಡೆ ಸಮಸ್ಯೆ ಮುಂದುವರಿದಿದ್ದು ದರ್ಗಾ ಬಾವಿಯ ಎಂಟರಿಂದ ಹತ್ತು ಸಾವಿರ ಲೀಟರ್ ನೀರು ಪೂರೈಸಲಾಗುತ್ತಿದೆ.
ಉಳ್ಳಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ದಶಕಗಳ ಹಳೆಯದು. 2003-04ರಲ್ಲಿ ಎಡಿಬಿ ಯೋಜನೆಯಡಿ ತುಂಬೆಯಿಂದ ನೇರ ನೀರು ಪೂರೈಸುವ ಯೋಜನೆ ವಿಫಲವಾದ ಬಳಿಕ, ಮಂಗಳೂರು ಮಹಾನಗರ ಪಾಲಿಕೆ ಮೂಲಕ ನೀರು ಪಡೆಯುವ ವ್ಯವಸ್ಥೆ ಮಾಡಲಾಗಿತ್ತು. ಆದರೆ, ನೇತ್ರಾವತಿ ನದಿಯಲ್ಲಿನ ಸೋರಿಕೆ ಮತ್ತು ಪಾಲಿಕೆಯೊಂದಿಗಿನ ಒಪ್ಪಂದದ ವೈಫಲ್ಯದಿಂದ ಉಳ್ಳಾಲಕ್ಕೆ ಸಮರ್ಪಕ ನೀರು ದೊರೆಯುತ್ತಿರಲಿಲ್ಲ.
ಮಾಜಿ ಸಚಿವ ಯು.ಟಿ.ಖಾದರ್ ಅವರ ಅವಧಿಯಲ್ಲಿ ರೂಪಿಸಲಾದ ಬಹುಗ್ರಾಮ ಕುಡಿಯುವ ನೀರು ಯೋಜನೆ (ಸಜಿಪ ಆಲಾಡಿಯಿಂದ ನೀರು) ಇದೀಗ ಉಳ್ಳಾಲಕ್ಕೆ ಆಸರೆಯಾಗಿದೆ. 2024ರಲ್ಲಿ ಚೆಂಬುಗುಡ್ಡೆಯಲ್ಲಿನ ಟ್ಯಾಂಕ್‌ಗಳಿಗೆ ನೀರು ತಲುಪುವ ಮೂಲಕ ಯೋಜನೆಯ ಮೊದಲ ಹಂತ ಪೂರ್ಣಗೊಂಡಿದೆ. ಪ್ರಸ್ತುತ, ಪೈಪ್‌ಲೈನ್ ಅಳವಡಿಕೆಯ ಕೆಲಸ ಶೇ.60ರಷ್ಟು ಮುಗಿದಿದ್ದು, ಶೀಘ್ರವೇ ಪೂರ್ಣಗೊಳಿಸಿ ನೀರಿನ ಸಮಸ್ಯೆ ಪರಿಹರಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.
ಪೌರಾಯುಕ್ತರ ಚಾಣಾಕ್ಷ ಕ್ರಮ
ಪ್ರತಿವರ್ಷ ಬೇಸಿಗೆಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲು ನಗರಸಭೆ ಸುಮಾರು 50 ಲಕ್ಷ ರೂಪಾಯಿ ವ್ಯಯಿಸುತ್ತಿತ್ತು. ಕಳೆದ ಎರಡು ವರ್ಷಗಳ ಬಾಕಿ ಹಣವೇ ಇನ್ನೂ ಪಾವತಿಯಾಗಬೇಕಿದೆ. ಆದರೆ, ಈ ಬಾರಿ ನೂತನ ಪೌರಾಯುಕ್ತ ಸಂತೋಷ್ ಎಸ್.ಡಿ. ಅವರು ಪೈಪ್‌ಲೈನ್ ಸೋರಿಕೆಗಳನ್ನು ತಡೆಗಟ್ಟಿ, ಜಲಸಿರಿ ಪೈಪ್‌ಲೈನ್‌ಗೆ ಬಹುಗ್ರಾಮದ ಸಂಪರ್ಕವನ್ನು ಜೋಡಿಸುವ ಮೂಲಕ ನೀರಿನ ವ್ಯವಸ್ಥೆಯನ್ನು ಸುಗಮಗೊಳಿದ್ದಾರೆ. ಹೊರಗುತ್ತಿಗೆಯ ಬದಲಾಗಿ ನಗರಸಭೆಯ ಸ್ವಂತ ಟ್ಯಾಂಕರ್ ಬಳಸುವ ಮೂಲಕ ದೊಡ್ಡ ಮೊತ್ತದ ಹಣವನ್ನು ಉಳಿತಾಯ ಮಾಡಿದ್ದಾರೆ. ಹಿಂದೆ ಬೇಸಿಗೆಯಲ್ಲಿ ದರ್ಗಾ ಬಾವಿಯಿಂದ ಪ್ರತಿದಿನ ಒಂದೂವರೆ ಲಕ್ಷ ನೀಟರ್ ನೀರು ಪೂರೈಕೆಯಾಗುತ್ತಿದ್ದರೆ, ಈ ಬಾರಿ ಪ್ರತಿದಿನ 30 ಸಾವಿರ ಲೀಟರ್ ಮಾತ್ರ ಪೂರೈಸಲಾಗಿದೆ.
ಬೇಸಿಗೆಯಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿದ ಎರಡು ವರ್ಷದ ಒಂದು ಕೋಟಿ ರೂ. ಪಾವತಿ ಬಾಕಿಯಿದೆ. ಈ ಬಾರಿ ಟೆಂಡರ್ ಕರೆದರೂ ನಗರಸಭೆಯ ಸ್ವಂತ ಟ್ಯಾಂಕರ್ ಮಾತ್ರ ಬಳಸಲಾಗಿದೆ. ಸದ್ಯ ಎಲ್ಲ ವಾರ್ಡುಗಳಿಗೆ ನೀರು ತಲುಪಿಸುವ ನಿಟ್ಟಿನಲ್ಲಿ ಕೆಲಸ ಚುರುಕಾಗಿ ಸಾಗಿದೆ.
ಪ್ರತಿವರ್ಷ ಟ್ಯಾಂಕರ್ ನೀರಿಗಾಗಿ 45ರಿಂದ 50 ಲಕ್ಷ ರೂ. ವ್ಯಯಿಸುತ್ತಿದ್ದೆವು. ಈ ಬಾರಿ ಬಹುಗ್ರಾಮ ಯೋಜನೆ ಮತ್ತು ನಗರಸಭೆಯ ಟ್ಯಾಂಕರ್ ಬಳಕೆಯಿಂದ ಆ ಹಣ ಉಳಿತಾಯವಾಗಿದೆ. ಸಮಸ್ಯೆ ಇರುವ ಕಡೆಗಳಿಗೆ ಸಕಾಲದಲ್ಲಿ ನೀರು ಪೂರೈಕೆಯಾಗುತ್ತಿರುವುದು ಪೌರಾಯುಕ್ತರ ಕಾರ್ಯದಕ್ಷತೆಗೆ ಸಾಕ್ಷಿ.