ಉಪ್ಪಿನಂಗಡಿ ಪೇಟೆ ಸಂಪರ್ಕಿಸುವ ಗಾಂಧಿ ಪಾರ್ಕ್ ಬಳಿಯ ಅಂಡರ್‌ಪಾಸ್ ಸಂಪೂರ್ಣ ಜಲಾವೃತಗೊಂಡಿರುವುದು.
ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರ ಅಗಲೀಕರಣ ಕಾಮಗಾರಿಯ ಸರ್ವೀಸ್ ರಸ್ತೆ ನಿರ್ಮಾಣದಲ್ಲಿ ಎದುರಾಗಿರುವ ಅಡೆತಡೆ ಸಕಾಲದಲ್ಲಿ ನಿವಾರಿಸದ ಪರಿಣಾಮ ಅಲ್ಲಲ್ಲಿ ಸಮಸ್ಯೆ ಮೂಡುತ್ತಿದ್ದು, ಉಪ್ಪಿನಂಗಡಿಯ ಹಿರೇಬಂಡಾಡಿ ಕ್ರಾಸ್ ಪಾದಾಚಾರಿಗಳ ಪಾಲಿಗೆ ಸಂಚಾರಕ್ಕೆ ಸವಾಲು ಎಂಬಂತಿದೆ.
ಗಾಂಧಿ ಪಾರ್ಕ್ ಬಳಿಯ ಅಂಡರ್‌ಪಾಸ್ ಜಲಕ್ರೀಡೆಗೆ ಸೂಕ್ತವೆನಿಸುವ ಮಟ್ಟಿಗೆ ಬಾಧಕವೆನಿಸಿದೆ. ಇಲ್ಲಿನ ಗಾಂಧಿ ಪಾರ್ಕ್‌ನಿಂದ ಹಿರೇಬಂಡಾಡಿ ಸಂಪರ್ಕ ರಸ್ತೆಯ ಪಾರ್ಶ್ವದಲ್ಲಿನ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಒಳಗೊಂಡ ಭೂಮಿಯಲ್ಲಿ ಕಾಮಗಾರಿ ನಡೆಸಲು ಮುಂದಾದರೆ ಮೇಲ್ಭಾಗದಲ್ಲಿನ ಉದ್ಯಮಕ್ಕೆ ಸಂಬಂಧಿಸಿ ಸಮಸ್ಯೆ ಎದುರಾಗಲಿದೆ ಎಂದು ಆಕ್ಷೇಪಗಳು ವ್ಯಕ್ತವಾಗಿತ್ತೆನ್ನಲಾಗಿದೆ.
ಇದರಿಂದಾಗಿ ಈ ಭಾಗದಲ್ಲಿ ಸಮರ್ಪಕವೆನಿಸಿದ ಸರ್ವೀಸ್ ರಸ್ತೆ ನಿರ್ಮಾಣವಾಗದೆ ಇದ್ದ ಕಾರಣ ಮಳೆಗಾಲದಲ್ಲಿ ಮಳೆ ನೀರು ನಿಂತು ಕೆಸರು ತುಂಬಿ ಜನರಿಗೆ ನಡೆದಾಡಲೂ ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗಿದೆ. ಉಪ್ಪಿನಂಗಡಿ ಪೇಟೆ ಸಂಪರ್ಕಿಸುವ ಗಾಂಧಿ ಪಾರ್ಕ್ ಬಳಿಯ ಅಂಡರ್‌ಪಾಸ್ ಸಂಪೂರ್ಣ ಜಲಾವೃತಗೊಂಡಿದ್ದು, ವಾಹನ ಸಂಚಾರಕ್ಕೂ ಸಮಸ್ಯೆಯಾಗುತ್ತಿದೆ. ಮಳೆಗಾಲದ ಮುನ್ನ ಕಾಮಗಾರಿ ನಿರತ ಗುತ್ತಿಗೆದಾರ ಸಂಸ್ಥೆ ಗಮನ ಹರಿಸುತ್ತಿದ್ದರೆ ಈ ಮಟ್ಟದ ಸಮಸ್ಯೆ ಎದುರಾಗುತ್ತಿರಲಿಲ್ಲ.
ಸಮಸ್ಯೆ ಎದುರಾದರೂ ಮೌನವೇಕೆ ?
ದಿನ ನಿತ್ಯ ನೂರಾರು ಜನರು ಸಂಚರಿಸುವ ರಸ್ತೆ ಈ ಮಟ್ಟದಲ್ಲಿ ಕುಲಗೆಟ್ಟು ಜನ ದಿನನಿತ್ಯ ಸಂಕಷ್ಟಕ್ಕೆ ತುತ್ತಾದರೂ ಬುದ್ಧಿವಂತರ ನಾಡಿನಲ್ಲಿ ಧ್ವನಿ ಎತ್ತದಿರುವ ನಿಗೂಢ ಏನು ಎನ್ನುವುದೇ ಅರ್ಥವಾಗುತ್ತಿಲ್ಲ ಎಂದು ಚಲನ ಚಿತ್ರ ನಟ ನಿರ್ದೇಶಕ ಎಂ.ಕೆ.ಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಗೂ ಸಿದ್ಧ
ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿದ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಅಧ್ಯಕ್ಷ ಪ್ರಶಾಂತ್ ಡಿಕೋಸ್ಟಾ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಕಾಮಗಾರಿ ವಹಿಸಿದ ಗುತ್ತಿಗೆದಾರರಿಗೆ ಸಹಕಾರ ನೀಡಿದ್ದರೂ ಮಳೆಗಾಲದಲ್ಲಿ ಈ ಪರಿಯ ಸಮಸ್ಯೆ ಉಂಟಾಗುವಂತೆ ಮಂದಗತಿ ಪ್ರದರ್ಶಿಸಿರುವುದು ಬೇಸರ ತಂದಿದೆ. ತ್ವರಿತ ಕಾಮಗಾರಿಗೆ ಪ್ರತಿಭಟನೆಯೇ ಅನಿವಾರ್ಯವೆಂದಾದರೆ ಅದಕ್ಕೂ ಸಿದ್ಧ ಎಂದು ತಿಳಿಸಿದ್ದಾರೆ.
ಕೆಲವೊಂದು ಅಡೆತಡೆಗಳನ್ನು ಸೌಮ್ಯವಾಗಿ ಬಗೆಹರಿಸಲು ಮುಂದಾದ ಕಾರಣಕ್ಕೆ ಸಕಾಲದಲ್ಲಿ ನಡೆಯಬೇಕಾದ ಕಾಮಗಾರಿ ಒಂದಷ್ಟು ವಿಳಂಬವಾಗಿ ಸಮಸ್ಯೆ ಎದುರಾಗಿರುವುದು ನಿಜ. ಅಡೆತಡೆ ನಿವಾರಿಸಲಾಗಿದೆ. ನೆಲ್ಯಾಡಿಯಲ್ಲಿ ಕಾಮಗಾರಿ ಮುಕ್ತಾಯದ ಹಂತ ತಲುಪಿದ್ದು, ಇಂದಿನಿಂದಲೇ ಉಪ್ಪಿನಂಗಡಿಯ ಬಾಕಿ ಉಳಿದಿರುವ ಕಾಮಗಾರಿಗೆ ವೇಗ ತರಲಾಗುವುದು. ಎಲ್ಲೆಡೆಯ ಸಮಸ್ಯೆಗಳನ್ನು ಆದ್ಯತೆಯಲ್ಲಿ ನಿವಾರಿಸಲಾಗುವುದು.
— ರಘುನಾಥ್ ರೆಡ್ಡಿ, ಹೆದ್ದಾರಿ ಕಾಮಗಾರಿ ನಿರತ ಇಂಜಿನಿಯರ್