ಗುತ್ತಿಗಾರಿನ ಪಿಎಂಶ್ರೀ ಹಿರಿಯ ಪ್ರಾಥಮಿಕ ಶಾಲೆ.
ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ
ಗುತ್ತಿಗಾರಿನ ಪಿ.ಎಂ.ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಸರ್ವತೋಮುಖ ಶಿಕ್ಷಣ ಕಲ್ಪನೆಯಲ್ಲಿ ಶಿಕ್ಷಣ ನೀಡುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳ ಅಭ್ಯುದಯಕ್ಕೆ ಮೆಟ್ಟಿಲಾಗಿದೆ. ಈ ಶಾಲೆ 304 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದು, ಗುತ್ತಿಗಾರಿನ ಈ ಶಾಲೆ ಅಭಿವೃದ್ಧಿಯಲ್ಲಿ ಕೆ.ಪಿ.ಎಸ್. ಮಟ್ಟಕ್ಕೆ ಬೆಳೆದು ನಿಂತಿದೆ.
ಸುಳ್ಯ ತಾಲೂಕಿನಲ್ಲಿ ಕೆಪಿಎಸ್ ಶಾಲೆಗಳ ಹೊರತುಪಡಿಸಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗುತ್ತಿಗಾರಿನ ಪಿಎಂಶ್ರಿ ಶಾಲೆಯೇ ಅಗ್ರಸ್ಥಾನದಲ್ಲಿದ್ದು, ಅತಿ ಹೆಚ್ಚು ವಿದ್ಯಾರ್ಥಿಗಳಿರುವ ತಾಲೂಕಿನ ಮೂರನೇ ಶಾಲೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಎಂಟು ವರ್ಷಗಳ ಹಿಂದೆಯಷ್ಟೇ ಇಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ಆರಂಭಗೊಂಡಿದ್ದು, ಆರನೇ ತರಗತಿಯಿಂದಲೇ ಆಂಗ್ಲ ಮಾಧ್ಯಮವಾಗಿ ಕಾರ್ಯನಿರ್ವಹಿಸಲಾಗುತ್ತಿದೆ.
ಪಿಎಂಶ್ರೀ ಶಾಲೆಗೆ ಈಗಾಗಲೇ 60 ಲಕ್ಷ ರೂ. ಅನುದಾನ ಬಳಕೆ ಮಾಡಿದ್ದು, ವಿದ್ಯಾರ್ಥಿಗಳಿಗೆ ಅವಶ್ಯಕತೆಯುಳ್ಳ ಮೂಲಸೌಕರ್ಯಗಳ ಕಲ್ಪಿಸಲಾಗಿದೆ. ಶಾಲೆಯಲ್ಲಿ 16 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು, ಪಿ.ಎಂ.ಶ್ರೀ ಯೋಜನೆ ವತಿಯಿಂದಲೇ ಕಂಪ್ಯೂಟರ್, ಸಂಗೀತ, ದೈಹಿಕ ಶಿಕ್ಷಣ, ಇಂಗ್ಲಿಷ್ ಸ್ಪೀಕಿಂಗ್ ಮತ್ತಿತರ ಶಿಕ್ಷಣ ಕೊಡಲು ಆರು ಶಿಕ್ಷಕರಿದ್ದಾರೆ.
ಕಷಿ ತೋಟ
ಶಾಲೆಗೆ ಆರ್ಥಿಕ ಹೊರೆ ತಪ್ಪಿಸಲು 500 ಅಡಿಕೆ ಗಿಡಗಳಿರುವ ಕೃಷಿ ತೋಟ ನಿರ್ಮಿಸಲಾಗಿದೆ. ಅದು ಈಗಾಗಲೇ ಫಸಲು ಬರಲಾರಂಭಿಸಿದ್ದು, ಮುಂದಿನ ದಿನಗಳಲ್ಲಿ ಶಾಲೆಯ ಖರ್ಚುವೆಚ್ಚಕ್ಕೆ ಆಧಾರವಾಗಲಿದೆ.
ಪಠ್ಯದೊಂದಿಗೆ ಕೌಶಲ ತರಗತಿ
ವಿದ್ಯಾರ್ಥಿಗಳಿಗೆ ಪಠ್ಯಶಿಕ್ಷಣ ಜತೆಗೆ ಜೀವನ ಮೌಲ್ಯಗಳು, ಕೌಶಲಗಳನ್ನೂ ಕಲಿಸಲಾಗುತ್ತದೆ. ಉಚಿತ ಸಂಗೀತ ಶಿಕ್ಷಣ, ಸ್ಪೋಕನ್ ಇಂಗ್ಲಿಷ್, ಕೌಶಲ ಆಧಾರಿತ ಶಿಕ್ಷಣ, ಆರ್ಟ್ಸ್ ಮತ್ತು ಕ್ರಾಫ್ಟ್, ವಿಶೇಷ ಕ್ರೀಡಾ ತರಬೇತಿ, ಸ್ಮಾರ್ಟ್ ಕ್ಲಾಸ್, ಯೋಗ, ಕರಾಟೆ, ಕಂಪ್ಯೂಟರ್ ಶಿಕ್ಷಣ, ವಿದ್ಯಾರ್ಥಿಗಳೊಂದಿಗೆ ತಜ್ಞರ ಸವಾಲೋಚನೆ, ಉಚಿತ ಶೈಕ್ಷಣಿಕ ಪ್ರವಾಸ ಮತ್ತಿತರ ಶೈಕ್ಷಣಿಕ ವ್ಯವಸ್ಥೆಗಳು ಗುತ್ತಿಗಾರಿನ ಪಿಎಂಶ್ರೀ ಶಾಲೆಯಲ್ಲಿವೆ.
ಮಕ್ಕಳಿಗೆ ದತ್ತಿನಿಧಿ ಠೇವಣಿ
ಮಧ್ಯಾಹ್ನದ ಬಿಸಿ ಊಟದ ಯೋಜನೆ, ಬಾಳೆಹಣ್ಣು, ಮೊಟ್ಟೆ, ಉಚಿತ ಪಠ್ಯಪುಸ್ತಕ, ಉಚಿತ ಸಮವಸ, ಶೂ, ಸಾಕ್ಸ್, ವಿಶಾಲವಾದ ಆಟದ ಮೈದಾನ, ಉತ್ತಮ ಹಸಿರು ವಾತಾವರಣ, ಸಿ.ಸಿ ಕ್ಯಾಮರಾ ವ್ಯವಸ್ಥೆ, ಉಚಿತ ಆರೋಗ್ಯ ತಪಾಸಣೆ, ವಿದ್ಯಾರ್ಥಿ ವೇತನ ವ್ಯವಸ್ಥೆ ಜತೆಗೆ ಈ ವರ್ಷ ಒಂದನೇ ತರಗತಿಗೆ ದಾಖಲಾಗುವ ವಿಧ್ಯಾರ್ಥಿಗಳಿಗೆ ದತ್ತಿನಿಧಿ ಠೇವಣಿ ಲಭ್ಯವಿದೆ.
ಯಾವುದೇ ಕ್ಷೇತ್ರ ಅಥವಾ ಯಾವುದೇ ಸಂಸ್ಥೆಯಲ್ಲಿ ಕೆಲಸ ವಾಡಲು ಅವಕಾಶ ದೊರೆತಾಗ ಆ ಸಂಸ್ಥೆ ಅಭಿವೃದ್ಧಿಗೆ ಕೆಲಸ ವಾಡುವುದು ನನ್ನ ಸಂಕಲ್ಪ. ಜಿ.ಪಂ. ಸದಸ್ಯನಾಗಿದ್ದಾಗ ನಾನು ಕಲಿತ ಶಾಲೆಗೆ ಜಿಲ್ಲಾ ಪಂಚಾಯಿತಿಯಿಂದ 5 ಕೊಠಡಿ ಕೊಟ್ಟಿರುವುದು ಸಂತೋಷವಾಗಿದೆ. ಎಸ್‌ಡಿಎಂಸಿ ಅಧ್ಯಕ್ಷನಾಗಿ ಇಲ್ಲಿನ ಅವಶ್ಯಕತೆ ಮತ್ತು ವಿದ್ಯಾರ್ಥಿಗಳ ಜ್ಞಾನಾರ್ಜನೆ ಬೇಕಾದ ಕಾರ್ಯಗಳನ್ನು ವಾಡಲಾಗಿದೆ. ವಾಜಿ ಶಾಸಕ ಎಸ್.ಅಂಗಾರ, ಶಾಸಕಿ ಭಾಗೀರಥಿ ಮುರುಳ್ಯ ಶಾಲೆಯಲ್ಲಿ ಅಭಿವೃದ್ಧಿ ಕೆಲಸಗಳು ನಡೆಯಲು ಅನುದಾನ ನೀಡಿದ್ದಾರೆ. ಪಿ.ಎಂ.ಶ್ರೀ ಯೋಜನೆಯಲ್ಲಿ ಎಲ್‌ಕೆಜಿ, ಯುಕೆಜಿಗೆ ನೂತನ ಕೊಠಡಿ ರಚನೆ ಕೆಲಸ ಪ್ರಗತಿಯಲ್ಲಿದೆ.
— ವೆಂಕಟ್ ದಂಬೆಕೋಡಿ, ಎಸ್‌ಡಿಎಂಸಿ ಅಧ್ಯಕ್ಷ
ಸಿಗುವ ಅನುದಾನಗಳನ್ನು ಸಮರ್ಪಕವಾಗಿ ಉಪಯೋಗಿಸಿ ಎಸ್‌ಡಿಎಂಸಿ ಹಾಗೂ ಎಲ್ಲರೂ ಸೇರಿ ಕೆಲಸ ವಾಡುತ್ತಾರೆ. ತಾಲೂಕಿನ ಎಲ್ಲ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದರೂ ನಮ್ಮಲ್ಲಿ ಶಿಕ್ಷಕರ ಕೊರತೆಯಿಲ್ಲ. ಸರ್ಕಾರ ನೀಡಿದ ಶಿಕ್ಷಕರು ಸೇರಿದಂತೆ ನಮ್ಮಲ್ಲಿ 16 ಶಿಕ್ಷಕರಿದ್ದಾರೆ. ಶಾಲೆಯಲ್ಲಿ 1 ರಿಂದ 5 ನೇ ತರಗತಿ ತನಕ ಆಂಗ್ಲ ವಾಧ್ಯಮ ಶಿಕ್ಷಣ 8 ವರ್ಷಗಳ ಹಿಂದೆಯೇ ಆರಂಭವಾಗಿ ಜಾರಿಯಲ್ಲಿದೆ. ಉಮಾವತಿ, ಮುಖ್ಯಶಿಕ್ಷಕಿ
— ಉಮಾವತಿ, ಮುಖ್ಯಶಿಕ್ಷಕಿ