ಧರ್ಮಸ್ಥಳದಲ್ಲಿ ರಾಷ್ಟ್ರಮಟ್ಟದ ಸಾಹಿತ್ಯ ಸೌರಭ ಸಮಾರಂಭವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು. ಹೇಮಾವತಿ ವೀ.ಹೆಗ್ಗಡೆ, ಜ್ಞಾನಗಂಗ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗದ ಅಧ್ಯಕ್ಷ ಮಣ್ಣೆ ಮೋಹನ್, ಡಾ.ಎಂ.ಪಿ.ಶ್ರೀನಾಥ್ ಮೊದಲಾದವರು ಉಪಸ್ಥಿತರಿದ್ದರು. 
ಉಡುಪಿ

ಭಾಷೆ ಉಳಿವಿನಿಂದ ಸಾಹಿತ್ಯ, ಸಂಸ್ಕೃತಿ ಬೆಳವಣಿಗೆ

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಎಲ್ಲರೂ ಕನ್ನಡ ಭಾಷೆ ಬಳಸಿ, ಉಳಿಸಿ, ಬೆಳೆಸಿದಾಗ ಸಾಹಿತ್ಯ ಮತ್ತು ಸಂಸ್ಕೃತಿ ಬೆಳವಣಿಗೆಯಾಗುತ್ತದೆ. ತುಳುನಾಡಿನಲ್ಲಿ ಕನ್ನಡ ಮಾತೃಭಾಷೆಯಾದರೂ ಆಡು ಭಾಷೆ ತುಳು ಆಗಿದೆ. ಕರಾವಳಿ ಕರ್ನಾಟಕದಲ್ಲಿ ಯಕ್ಷಗಾನ ಜನಪ್ರಿಯ ಜಾನಪದ ಕಲೆಯಾಗಿದ್ದು ತುಳು ಮತ್ತು ಕನ್ನಡದಲ್ಲಿ ಯಕ್ಷಗಾನ ತಾಳಮದ್ದಳೆ, ಬಯಲಾಟ ಪ್ರದರ್ಶನದ ಮೂಲಕ ಕಲೆ, ಧರ್ಮ, ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರಸಾರದೊಂದಿಗೆ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಿದೆ ಎಂದು ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಹೇಳಿದರು.
ಶನಿವಾರ ಧರ್ಮಸ್ಥಳ ಅಮೃತವರ್ಷಿಣಿ ಸಭಾಭವನದಲ್ಲಿ ಬೆಂಗಳೂರಿನ ಜ್ಞಾನಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗ, ಈರಮ್ಮ ನಾಗರಾಜಪ್ಪ ಪ್ರತಿಷ್ಠಾನ, ಮಣ್ಣೆ ಮೋಹನ್ ಪುಸ್ತಕಮಾಲೆ ಮತ್ತು ಪರಿಮಳ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ರಾಷ್ಟ್ರಮಟ್ಟದ ಸಾಹಿತ್ಯ ಸೌರಭ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಎಲೆಮರೆಯ ಕಾಯಿಯಂತೆ ಸಾಮಾನ್ಯ ಜನರು ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಅಸಾಮಾನ್ಯ ಸೇವೆ-ಸಾಧನೆ ಗುರುತಿಸಿ ಗೌರವಿಸುವ ಕಾರ್ಯ ಶ್ಲಾಘನೀಯ ಎಂದರು.
ಏಳು ಕವನ ಸಂಕಲನ ಮತ್ತು ಇಪ್ಪತ್ತು ಹೊಸ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಹೇಮಾವತಿ ವೀ.ಹೆಗ್ಗಡೆ, ಸಾಹಿತ್ಯ ಮನುಷ್ಯರನ್ನು ಮತ್ತು ಮನಸುಗಳನ್ನು ಸೌಹಾರ್ದಯುತವಾಗಿ ಬೆಸೆಯುವ ಕೊಂಡಿಯಾಗಿದೆ. ಸಾಹಿತ್ಯ ನಮ್ಮ ಭಾಷೆ, ಧರ್ಮ ಮತ್ತು ಸಂಸ್ಕೃತಿಯ ಬೇರುಗಳಿದ್ದಂತೆ. ಅದನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಆಂಗ್ಲಮಾಧ್ಯಮ ಶಾಲೆ ಮಕ್ಕಳು ಇಂದು ಕನ್ನಡ ಸಾಹಿತ್ಯ ಕೃತಿಗಳು, ಪತ್ರಿಕೆಗಳನ್ನು ಓದುವುದಿಲ್ಲ. ಮನೆಯಲ್ಲಿ ಹಿರಿಯರು ಕೂಡಾ ಕನ್ನಡವನ್ನೇ ಬಳಸಬೇಕು ಎಂದು ಸಲಹೆ ನೀಡಿದರು.
ಜ್ಞಾನಗಂಗ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗದ ಅಧ್ಯಕ್ಷ ಮಣ್ಣೆ ಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದ ಮೂವತ್ತೊಂದು ಜಿಲ್ಲೆಗಳಲ್ಲಿಯೂ ಸಾಹಿತ್ಯ ಸೌರಭ ಕಾರ್ಯಕ್ರಮ ಆಯೋಜಿಸಿ ಉದಯೋನ್ಮುಖ ಕಲಾವಿದರು ಮತ್ತು ಸಾಹಿತಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಬೆಂಗಳೂರಿನ ಪರಿಮಳ ಪ್ರಕಾಶನದ ಅಧ್ಯಕ್ಷೆ ಪರಿಮಳಾ ಸ್ವಾಗತಿಸಿದರು. ಪರಮಾನಂದ ಬಳ್ಳೊಳ್ಳಿ ವಂದಿಸಿದರು. ಬೆಂಗಳೂರಿನ ತೇಜಸ್ವಿನಿ, ಅನುಪಮಾ ಚಂದ್ರು, ಲಕ್ಕೂರು ನಾಗರಾಜು, ಗೀತಾ ವಿ.ಆರ್. ನಿರ್ವಹಿಸಿದರು.

ಸಾಧಕರಿಗೆ ಸನ್ಮಾನ

ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಉಜಿರೆಯ ಡಾ.ಎಂ.ಪಿ.ಶ್ರೀನಾಥ್, ಬೆಳ್ತಂಗಡಿಯ ಯದುಪತಿ ಗೌಡ, ಡಾ.ವೀರೇಂದ್ರ ಹೆಗ್ಗಡೆ ಅವರ ಆಪ್ತ ಕಾರ್ಯದರ್ಶಿ ಎ.ವಿ.ಶೆಟ್ಟಿ ಮತ್ತು ಸುಬ್ರಹ್ಮಣ್ಯ ಪ್ರಸಾದ, ಪುರಂದರ ಭಟ್, ಲಕ್ಷ್ಮೀ ಬೆಂಗಳೂರು, ಡಾ.ಸರಸ್ವತಿ ಚಂದ್ರಶೇಖರ್, ಚೆನ್ನಪ್ಪ ಗೌಡ, ಪ್ರವೀಣ್ ಅಮ್ಮೆಂಬಳ ಅವರನ್ನು ಗೌರವಿಸಲಾಯಿತು. ಕವಿಗೋಷ್ಠಿ, ಕವನವಾಚನ ಮತ್ತು ನೃತ್ಯ ಪ್ರದರ್ಶನ ನಡೆಯಿತು.

ಕೋಟದಲ್ಲಿಂದು ಸಾಹಿತ್ಯ ಸೌರಭ

ಕೋಟದಲ್ಲಿ ಭಾನುವಾರ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಶಿವರಾಮ ಕಾರಂತ ಪ್ರತಿಷ್ಠಾನದ ಸಹಯೋಗದೊಂದಿಗೆ ಸಾಹಿತ್ಯ ಸೌರಭ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಆಧುನಿಕ ಯುಗದಲ್ಲಿ ಸಾಹಿತ್ಯದ ಒಲವು ಕಡಿಮೆಯಾಗುತ್ತಿರುವುದು ವಿಷಾದನೀಯ. ಪ್ರತಿ ಮನೆಯಲ್ಲಿಯೂ ಸಣ್ಣ ಗ್ರಂಥಾಲಯ ಆರಂಭಿಸಿ ಎಲ್ಲರೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು.

— ಹೇಮಾವತಿ ವೀ.ಹೆಗ್ಗಡೆ