ಗೋಕರ್ಣದ ಅಶೋಕೆಯ ಶ್ರೀರಾಮಚಂದ್ರಾಪುರ ಮಠದಲ್ಲಿ ಗುರುವಾರ ನಡೆದ ಧರ್ಮಸಭೆಯಲ್ಲಿ ಚತುರ್ಮಾಸ್ಯ (chaturmasya) ವ್ರತಬದ್ಧರಾದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಅವರನ್ನು ಮಾಜಿ ಸಚಿವ ಶಿವಾನಂದ ನಾಯ್ಕ ಭಟ್ಕಳ, ಪಶ್ಚಿಮ ಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ಶಿಕ್ಷಣ ತಜ್ಞ ಡಾ. ಜಿ.ಜಿ.ಹೆಗಡೆ ಮತ್ತು ಜಿ.ಎಸ್.ಹೆಗಡೆ ಭೇಟಿಯಾಗಿ ಆಶೀರ್ವಾದ ಮಂತ್ರಾಕ್ಷತೆ ಪಡೆದರು.  
ಉಡುಪಿ

ಶರೀರದ ಹಸಿವಿಗೆ ಮೂಲ ಅಗ್ನಿ Chaturmasya

ಪ್ರಮುಖ ಮುಖ್ಯಾಂಶಗಳು

  • ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರಿಂದ ವೈಶ್ವಾನರನ ಸ್ಮರಣೆ
  • ಗೋಕರ್ಣ ಅಶೋಕೆಯಲ್ಲಿ ಚಾತುರ್ಮಾಸ್ಯ
  • ಅನ್ನಂ-ಬ್ರಹ್ಮ ಪ್ರವಚನ ಮಾಲಿಕೆ
ಗೋಕರ್ಣ: ಶರೀರದ ಹಸಿವಿಗೆ ಮೂಲ ಒಳಗಿನ ಅಗ್ನಿ. ಅಗ್ನಿಯಿಂದ ದೇಹಕ್ಕೆ ಹಸಿವು.

ಹಸಿವು ಅಗ್ನಿಯದೇ ಒಂದು ಅಭಿವ್ಯಕ್ತಿ ಎಂದು 33ನೇ ಅನ್ನಬ್ರಹ್ಮ ಚಾತುರ್ಮಾಸ್ಯ (

Chaturmasya)

ನಿರತ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.

ಇಲ್ಲಿನ ಅಶೋಕೆಯ ಶ್ರೀರಾಮಚಂದ್ರಾಪುರ ಮಠದಲ್ಲಿ ಗುರುವಾರ ಧರ್ಮಸಭೆಯಲ್ಲಿ ಶ್ರೀಗಳು ಅಗ್ನಿಯ ಸ್ವರೂಪ ವೈವಿಧ್ಯಗಳಲ್ಲೊಂದಾದ ಜಠರಾಗ್ನಿ ಅಥವಾ ವೈಶ್ವಾನರ ಅಗ್ನಿಯ ಸ್ಮರಣೆಯ ಪ್ರವಚನವನ್ನು ಅನುಗ್ರಹಿಸಿದರು.
ಅಗ್ನಿ ಸದ್ಭಾವೇ ಲಿಂಗಮ್: ದೇಹದಲ್ಲಿ ಅಥವಾ ಜಠದಲ್ಲಿ ಅಗ್ನಿ ಇದೆ ಎನ್ನುವುದಕ್ಕೆ ಸಾಕ್ಷಿ ಯಾವುದು? ಶರೀರಾಗ್ನಿಯ ಅಸ್ತಿತ್ವಕ್ಕೆ ಮೈ ಬೆಚ್ಚಗಿರುವುದೇ ಜ್ವಲಂತ ನಿದರ್ಶನ.
ಇದಕ್ಕೆ ಪ್ರಸಿದ್ಧ ಆಯುರ್ವೇದ ಶಾಸ್ತ್ರ ಸಂಪನ್ನ ಸಾಯಣಾಚಾರ್ಯರು ’ಸೋಯಂ ಶರೀರ ಗತ ಸಂತಾಪಃ ಅಗ್ನಿ ಸದ್ಭಾವೇ ಲಿಂಗಮ್‌’ ಶರೀರವನ್ನು ಆವರಿಸಿಕೊಂಡಿರುವ ತಾಪವೇ ಅಗ್ನಿ ಇರುವುದಕ್ಕೆ ಸಾಕ್ಷಾತ್ ಕುರುಹು ಎಂದಿದ್ದಾರೆ.
ಜೀವಿತಾವಧಿಯಲ್ಲಿ ಪರ್ವತ ರೂಪದಲ್ಲಿ ಅನ್ನ ಒಳಗೆ ಸೇರಿದಾಗ ಅದನ್ನು ದಹಿಸಿ ಮಾಯ ಮಾಡುವುದು ಇದೇ ಅಗ್ನಿ. ಆಹಾರವಾದ ಅನ್ನ ಬ್ರಹ್ಮ ಅಥವಾ ದೇವ ಸ್ವರೂಪ. ಅಂತಹ ದೈವಿಕ ಸ್ವರೂಪವನ್ನು ಜೀರ್ಣಿಸುವ ಶಕ್ತಿ ಸಾಧಾರಣವಾದ ಬೆಂಕಿಗೆ ಸಾಧ್ಯವೇ ಇಲ್ಲ.
ಈ ಹಿನ್ನೆಲೆಯಲ್ಲಿ ಅನ್ನವನ್ನು ಪಚನಗೊಳಿಸಿ ಇಂಧನವಾಗಿಸುವ ಅಗಾಧ ಜ್ವಲನ ಶಕ್ತಿಯನ್ನು ಹೊಂದಿರುವ ಅಗ್ನಿ ದೈವಿಕ ರೂಪ. ಪಿಂಡಾಂಡವೇ ಬ್ರಹ್ಮಾಂಡ. ಬ್ರಹ್ಮಾಂವೇ ಪಿಂಡಾಂಡ.
ಕಾರಣ ಈ ಬ್ರಹ್ಮಾಂಡವನ್ನು ನಡೆಸುತ್ತಿರುವುದು ಕೂಡ ಅಗ್ನಿಯೇ ಎಂದು ಆಯುರ್ವೇದ ಶಾಸ್ತ್ರಜ್ಞರ ಅಭಿಮತವಾಗಿದೆ ಎಂದು ತಿಳಿಸಿದ ಶ್ರೀಗಳು ಅಗ್ನಿಯ ದೇವತಾ ಸ್ವರೂಪದ ಋಜುತ್ವವನ್ನು ಪರಿಚಯಿಸಿದರು.
ಗೀತೆಯ ಸ್ಪಷ್ಟನೆ: ಗೀತೋಪದೇಶದಲ್ಲಿ ಸ್ವತಃ ಗೀತಾಚಾರ್ಯ ಶ್ರೀಕೃಷ್ಣ ಅಗ್ನಿಯನ್ನು ವೈಶ್ವಾನರ ಎಂದು ಸೂಚಿಸಿ ಅಗ್ನಿಯ ದೈವಿಕ ಸ್ವರೂಪವನ್ನು ಸಾರಿದ್ದಾನೆ.
ಆತನೇ ನುಡಿದಂತೆ, ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ ಪ್ರಾಣಾಪಾನ ಸಮಾಯುಕ್ತಃ ಪಚಮ್ಮನ್ನಂ ಚತುರ್ವಿಧಮ್‌.
ಅಂದರೆ ನಾನೇ ಸರ್ವ ಜೀವಿಗಳ ದೇಹವನ್ನು ಆವರಿಸಿರುವ ವೈಶ್ವಾನರ ಎಂಬ ಅಗ್ನಿ.ಪ್ರಾಣ,ಅಪಾನ ಮತ್ತು ಸಮಾನ ಎಂಬ ವಿಧಿಯುಕ್ತವಾಗಿ ಭಕ್ಷ್ಯ-ಭೋಜ್ಯ,ಪೇಯ,ಚೋಷ್ಯ ಮತ್ತು ಲೇಹ್ಯ ಎಂಬ ನಾಲ್ಕು ವಿಧ ಅನ್ನವನ್ನು ಜೀಣಿಸುವವನಾಗಿದ್ದೇನೆ ಎಂದಿದ್ದಾನೆ ಎಂದು ಶ್ರೀಗಳು ಅಗ್ನಿ ಸ್ಮರಣೆಯನ್ನು ಸದರ್ಚಿಸಿದರು.
ಧರ್ಮಸಭೆಯಲ್ಲಿ ಮಾಜಿ ಸಚಿವ ಶಿವಾನಂದ ನಾಯ್ಕ ಭಟ್ಕಳ, ಪಶ್ಚಿಮ ಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ಶಿಕ್ಷಣ ತಜ್ಞ ಡಾ.ಜಿ.ಜಿ.ಹೆಗಡೆ ಮತ್ತು ಜಿ.ಎಸ್.ಹೆಗಡೆ ಆಶೀರ್ವಾದ ಮಂತ್ರಾಕ್ಷತೆ ಪಡೆದರು.
ಕುಮಟಾ ಹವ್ಯಕ ಮಂಡಲದ ವಿವಿಧ ವಲಯಗಳ ವತಿಯಿಂದ ದತ್ತಾತ್ರೇಯ ಚಂದ್ರಶೇಖರ ಭಟ್ಟ ದಂಪತಿ ಶ್ರೀಗುರುಭಿಕ್ಷಾ ಸೇವೆ ಸಮರ್ಪಿಸಿದರು. ವೇ.ಕೇಶವಪ್ರಸಾದ ಭಟ್ಟ ಕೊಟೇಲು, ಜಿ.ಎಸ್.ಭಟ್ಟ ಉಪ್ಪುಂದ, ಸೌಮ್ಯ ಮಧ್ಯಸ್ಥ ಮತ್ತು ದಿನಪ್ರಧಾನರಾದ ಸುಬ್ರಾಯ ಹೆಗಡೆ ದಂಪತಿ ಉಪಸ್ಥಿತರಿದ್ದರು.