ಅಸೈಗೋಳಿಯಲ್ಲಿ ರಸ್ತೆ ಅಗಲೀಕರಣದಿಂದ ಮರದ ಬೇರುಗಳು ಮಣ್ಣಿನಿಂದ ಮೇಲ್ಭಾಗಕ್ಕೆ ಬಂದು ಅಪಾಯದಲ್ಲಿರುವುದು.
ರಸ್ತೆ ಅಗಲೀಕರಣಗೊಂಡಿದೆ... ಸುಂದರವಾದ ರಸ್ತೆ ನಿರ್ಮಾಣವಾಗಿದೆ... ವಾಹನಗಳ ವೇಗ ನಿಯಂತ್ರಣಕ್ಕೆ ಹಂಪ್‌ಗಳ ಬೇಡಿಕೆಯೂ ಈಡೇರಿದೆ. ಆದರೆ, ಈ ಅಭಿವೃದ್ಧಿಯ ಭರಾಟೆಯಲ್ಲಿ ಸಾರ್ವಜನಿಕರಿಗೆ ಗಾಳಿ, ನೆರಳು ನೀಡುತ್ತಿದ್ದ ಅಸೈಗೋಳಿ ರಸ್ತೆಬದಿಯ ಬೃಹತ್ ವೃಕ್ಷಗಳು ಈಗ ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿವೆ.
ಅಸೈಗೋಳಿ ರಸ್ತೆಯ ಇಕ್ಕೆಲೆಗಳಲ್ಲಿ ನೆಡಲಾಗಿದ್ದ ಗಿಡಗಳು ಇಂದು ಬೃಹತ್ ಮರಗಳಾಗಿ ಬೆಳೆದು ನಿಂತಿವೆ. ಕಳೆದ ಜನವರಿಯಲ್ಲಿ ಇಲ್ಲಿ ಚತುಷ್ಪಥ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಕಾಮಗಾರಿ ವೇಳೆ ರಸ್ತೆಬದಿಯಲ್ಲಿದ್ದ ಗ್ರಾಮ ಪಂಚಾಯಿತಿಯ ಅಂಗಡಿಗಳ ತೆರವು ಸಮಸ್ಯೆ ಎದುರಾಗಿತ್ತು. ಬಳಿಕ ಮರಗಳನ್ನು ಉಳಿಸಬೇಕೋ, ಉರುಳಿಸಬೇಕೋ ಎಂಬ ಚರ್ಚೆ ನಡೆದಿದ್ದು, ಅರಣ್ಯ ಇಲಾಖೆ ಕಟಾವಿಗೆ ಅನುಮತಿ ನೀಡದ ಕಾರಣ ಅವುಗಳನ್ನು ಯಥಾಸ್ಥಿತಿಯಲ್ಲಿ ಬಿಡಲಾಗಿತ್ತು.
ಅಪಾಯದ ಮುನ್ಸೂಚನೆ
ರಸ್ತೆಯನ್ನು ಸಮತಟ್ಟಾಗಿ ನಿರ್ಮಿಸುವ ಉದ್ದೇಶದಿಂದ ಅಗೆತ ನಡೆಸಿದಾಗ, ಬೃಹತ್ ಆಲದ ಮರಗಳು ಸೇರಿದಂತೆ ಸುಮಾರು 15 ಮರಗಳ ಬೇರುಗಳು ಮಣ್ಣಿನಿಂದ ಮೇಲ್ಭಾಗಕ್ಕೆ ಬಂದಿವೆ. ತಾಯಿ ಬೇರು ಹೊರತುಪಡಿಸಿ, ಇತರ ಪೋಷಕ ಬೇರುಗಳು ಈಗಾಗಲೇ ತುಂಡಾಗಿವೆ. ಈ ಸ್ಥಿತಿಯಲ್ಲಿ ಮಳೆಗಾಲದಲ್ಲಿ ಮಣ್ಣು ಕೊಚ್ಚಿ ಹೋದರೆ, ಈ ಮರಗಳು ಧರೆಗುರುಳುವ ಭೀತಿ ಎದುರಾಗಿದೆ. ಮರಗಳ ಪಕ್ಕದಲ್ಲೇ ವ್ಯಾಪಾರಿ ಮಳಿಗೆಗಳಿದ್ದು, ದಿನವಿಡೀ ವಾಹನ ಸಂಚಾರ ಮತ್ತು ಜನಜಂಗುಳಿ ಇರುವುದರಿಂದ ಮರಗಳು ಬಿದ್ದರೆ ಭಾರಿ ಅನಾಹುತ ಸಂಭವಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಉಳಿಸುವ ಜವಾಬ್ದಾರಿ ಯಾರದ್ದು?
ಮರಗಳ ಸುತ್ತಲೂ ಕಟ್ಟೆ ನಿರ್ಮಿಸಿ ಮಣ್ಣು ಹಾಕುವ ಮೂಲಕ ಈ ಅಪಾಯವನ್ನು ತಡೆಗಟ್ಟಬಹುದು. ಆದರೆ, ಈ ಕಾಮಗಾರಿಯನ್ನು ಕೈಗೊಳ್ಳಬೇಕಾದವರು ಯಾರು ಎಂಬ ಪ್ರಶ್ನೆ ಸ್ಥಳೀಯರು ಮತ್ತು ಪರಿಸರಪ್ರೇಮಿಗಳದ್ದು.
ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳನ್ನು ಪರಿಶೀಲಿಸಿ, ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
— ರಾಜೇಶ್ ಬಳಿಗಾರ್, ವಲಯ ಅರಣ್ಯಾಧಿಕಾರಿ
ಅಸೈಗೋಳಿ ರಸ್ತೆಬದಿ ಹಿಂದೆ ನಾವೇ ಗಿಡಗಳನ್ನು ನೆಟ್ಟಿದ್ದೆವು. ರಸ್ತೆ ಅಗಲೀಕರಣದಿಂದ ಅವುಗಳಿಗೆ ಧಕ್ಕೆಯಾಗಿದೆ. ಚರಂಡಿ ಸೇರಿದಂತೆ ಇತರ ಕಾಮಗಾರಿಗಳು ಮುಗಿದ ಬಳಿಕ, ಮರಗಳನ್ನು ಉಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ.
— ರಾಧಾಕೃಷ್ಣ ರೈ ಉಮಿಯ, ಲಯನ್ಸ್ ಜಿಲ್ಲಾ ಕನ್ವೆನ್ಷನ್ ಕೋ ಆರ್ಡಿನೇಟರ್