ಸ್ಮಶಾನದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು 
ಉಡುಪಿ

ಮಸಣ ಕಾರ್ಮಿಕರ ಮೌನ ರೋದನ

ವಿವಿಧ ಸೌಲಭ್ಯಕ್ಕಾಗಿ ಪರದಾಟ

ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ

ರಾಜ್ಯದ ಸ್ಮಶಾನ ಕಾರ್ಮಿಕರಿಗೆ ಸರ್ಕಾರಿ ಸವಲತ್ತುಗಳು ಘೋಷಣೆಗಳಿಗಷ್ಟೇ ಸೀಮಿತವಾಗಿದ್ದು, ಸಂಪೂರ್ಣ ಅನುಷ್ಠಾನ ಇನ್ನೂ ಒದಗಿಬಂದಿಲ್ಲ.

ಕರ್ನಾಟಕ ಮಸಣ ಕಾರ್ಮಿಕರ ಸಂಘದ ಅಂಕಿಅಂಶ ಪ್ರಕಾರ ರಾಜ್ಯದಲ್ಲಿ 2 ಲಕ್ಷ ಕುಟುಂಬಗಳು ಸ್ಮಶಾನ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿದ್ದು, ಉಡುಪಿ ಹಾಗೂ ದ.ಕ.ದಲ್ಲಿ 1,000 ಕುಟುಂಬಗಳಿವೆ. ಬೆಂಗಳೂರಿನಲ್ಲಿ ಸ್ಮಶಾನ ಕಾರ್ಮಿಕರಿಗೆ ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯಲ್ಲಿ ಅಪಘಾತ ಪರಿಹಾರ, ಸಹಜ ಮರಣ ಪರಿಹಾರ ಮತ್ತು ಅಂತ್ಯಕ್ರಿಯೆಗೆ ಕೆಲವೊಂದು ಸೌಲಭ್ಯ ಒದಗಿಸಲಾಗುತ್ತಿದ್ದು, ರಾಜ್ಯದ ಉಳಿದ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಸ್ಮಶಾನ ಕಾರ್ಮಿಕರ ಹಕ್ಕೊತ್ತಾಯ ಸರ್ಕಾರಕ್ಕೆ ಕೇಳಿಸುತ್ತಿಲ್ಲ. ಈವರೆಗೆ ರಾಜ್ಯದಲ್ಲಿ ಅಧಿಕೃತ ಸಮೀಕ್ಷೆಯೂ ನಡೆದಿಲ್ಲ.

ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯಲ್ಲಿ ಫಲಾನುಭವಿಗಳ ವಯೋಮಿತಿ 18ರಿಂದ 60 ವರ್ಷ ಆಗಿದ್ದು, ಇದನ್ನು 75ಕ್ಕೆ ಹೆಚ್ಚಿಸಿ ಯೋಜನೆಯನ್ನು ರಾಜ್ಯಾದ್ಯಂತ ಅನುಷ್ಠಾನ ಮಾಡಬೇಕಾದ ಅಗತ್ಯವಿದೆ. ಸ್ಮಶಾನ ಕಾರ್ಮಿಕರಿಗೆ ಭವಿಷ್ಯ ನಿಧಿ, ವಿಮೆ, ಆರೋಗ್ಯ, ವಸತಿ ಯೋಜನೆ ಕಲ್ಪಿಸಬೇಕೆಂಬ ಬೇಡಿಕೆಯೂ ಇದೆ. ಈ ಕಾರ್ಮಿಕರನ್ನು ಸಫಾಯಿ ಕರ್ಮಚಾರಿಗಳಂತೆ ನೇಮಕ ಮಾಡಿದರೆ ಸಮಸ್ಯೆ ಪರಿಹಾರವಾಗಲಿದೆ.

45 ವರ್ಷ ಮೇಲ್ಪಟ್ಟ ಎಲ್ಲ ಸ್ಮಶಾನ ಕಾರ್ಮಿಕರಿಗೆ ರಾಜ್ಯ ಸರ್ಕಾರ ಮಾಸಿಕ 5,000 ರೂ. ಸಾಮಾಜಿಕ ಪಿಂಚಣಿ ಜಾರಿಗೊಳಿಸಬೇಕು ಅಥವಾ ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಪಿಂಚಣಿ ಯೋಜನೆಗೆ ಕಾರ್ಮಿಕರ ಪರವಾಗಿ ರಾಜ್ಯ ಸರ್ಕಾರವೇ ಒಂದು ಬಾರಿಯ ವಂತಿಗೆ ತುಂಬಿ ಪಿಂಚಣಿ ದೊರೆಯುವಂತೆ ಮಾಡಬೇಕು.
ರಾಜು ಪಾಣಾರ ಸ್ಮಶಾನ ಕಾರ್ಮಿಕ, ಮೂಡುಬೆಳ್ಳೆ
ಗ್ರಾಮೀಣ ಪ್ರದೇಶದಲ್ಲಿ ದಲಿತ ಸಮುದಾಯಗಳು ಯಾವುದೇ ವೇತನವಿಲ್ಲದೆ ಕಾರ್ಯನಿರ್ವಹಿಸುತ್ತಿವೆ. ನಮ್ಮ ಹೋರಾಟದ ಫಲವಾಗಿ ಬೆಂಗಳೂರಿನ ಗುತ್ತಿಗೆ ಕಾರ್ಮಿಕರನ್ನು ಗುರುತಿಸಲಾಗಿದೆ. ಕನಿಷ್ಠ ವೇತನ ನಿಗದಿಪಡಿಸಲಾಗಿದೆ. ಪಿಂಚಣಿ ಮತ್ತಿತರ ಹಕ್ಕೊತ್ತಾಯ ಬಾಕಿ ಇವೆ.
ಯು.ಬಸವರಾಜ್ ಸಂಚಾಲಕ, ರಾಜ್ಯ ಮಸಣ ಕಾರ್ಮಿಕ ಸಂಘ
ಸ್ಮಶಾನದಲ್ಲಿ ಕಾರ್ಯನಿರ್ವಹಿಸುವ ದಲಿತ ಸಮುದಾಯದ ಕುಟುಂಬಗಳಿಗೆ ಸರ್ಕಾರ ಆರೋಗ್ಯ, ಪಿಂಚಣಿ, ಶೈಕ್ಷಣಿಕ ನೆರವು, ಉದ್ಯೋಗ ಭದ್ರತೆ, ವಿಮೆ, ವಸತಿ ಸೌಲಭ್ಯ ಒದಗಿಸಬೇಕು. ಜಿಲ್ಲಾಡಳಿತ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಿ ಮೊದಲು ಸ್ಮಶಾನ ಕಾರ್ಮಿಕರನ್ನು ಗುರುತಿಸುವ ಸಮೀಕ್ಷೆ ನಡೆಸಬೇಕು.
ಸಂಜೀವ ಬಳ್ಕೂರು ಅಧ್ಯಕ್ಷ, ಉಡುಪಿ ಜಿಲ್ಲಾ ದಲಿತ ಹಕ್ಕುಗಳ ಸಮಿತಿ