ಉಡುಪಿ: ಕೇಂದ್ರ ಸಚಿವ ಶ್ರೀಪಾದ್ ನಾಯ್ಕ್ ಅವರು ಗೋವಾ ರಾಜ್ಯದ ಜನಪ್ರಿಯ ನಾಯಕರು. ರಾಜಕೀಯ ಭಿನ್ನಾಭಿಪ್ರಾಯ ಬದಿಗಿಟ್ಟು ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಶುಭ ಹಾರೈಸಲು ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಜನರು ಬಂದಿರುವುದು ದೀರ್ಘಕಾಲದ ಸಾರ್ವಜನಿಕ ಜೀವನದಲ್ಲಿ ಗಳಿಸಿರುವ ವಿಶ್ವಾಸ ಮತ್ತು ಗೌರವಕ್ಕೆ ಸಾಕ್ಷಿಯಾಗಿದೆ. ಈ ಸಂದರ್ಭದಲ್ಲಿ ಪ್ರಸಾದ್ ನೇತ್ರಾಲಯದವರ ನೇತ್ರಸೇವೆ ಅರ್ಥಪೂರ್ಣವಾಗಿದ್ದು ಇಲ್ಲಿನ ಜನ ಕೃತಜ್ಞರಾಗಿದ್ದಾರೆ ಎಂದು ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅಭಿಪ್ರಾಯಪಟ್ಟರು.
ಗೋವಾದಲ್ಲಿ ಕೇಂದ್ರ ಬಿಜೆಪಿ ಸಚಿವ ಶ್ರೀಪಾದ್ ಯೆಸ್ಸೋ ನಾಯ್ಕ್ ಅವರ ಜನ್ಮದಿನದ ನಿಮಿತ್ತ ಅವರ ಅಭಿಮಾನಿ ಬಳಗದ ವತಿಯಿಂದ ಉಡುಪಿಯ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಸಹಭಾಗಿತ್ವದಲ್ಲಿ ಆಯೋಜಿಸಿದ್ದ 9ನೇ ವರ್ಷದ ನೇತ್ರ ಉಚಿತ ತಪಾಸಣೆ, ಕನ್ನಡಕ ವಿತರಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸಾರ್ವಜನಿಕ ಸೇವೆ ಮಾದರಿ
ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಹಾಗೂ ಕರ್ನಾಟಕ ರಾಜ್ಯ ದೃಷ್ಟಿ ನೀತಿ ಸಮಿತಿಯ ಅಧ್ಯಕ್ಷ ಡಾ. ಕೃಷ್ಣ ಪ್ರಸಾದ್ ಕೂಡ್ಲು ಮಾತನಾಡಿ, ಶ್ರೀಪಾದ್ ನಾಯ್ಕ್ ಅವರು ಪಕ್ಷ ರಾಜಕೀಯ ಗಡಿ ಮೀರಿ ವಿವಿಧ ಕ್ಷೇತ್ರಗಳ ಜನರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದಾರೆ. ಅವರ ಸಾರ್ವಜನಿಕ ಸೇವೆ ಮಾದರಿಯಾಗಿದೆ. 9 ವರ್ಷದಿಂದ ಗೋವಾದಲ್ಲಿ ನಮ್ಮ ನೇತ್ರಾಲಯದಿಂದ ಉಚಿತವಾಗಿ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ ಎಂದರು.
ರಾಜ್ಯಸಭಾ ಸದಸ್ಯ ಸದಾನಂದ್ ಶೇಟ್ ತಾನವಾಡೆ, ಬಿಜೆಪಿ ರಾಜ್ಯಾಧ್ಯಕ್ಷ ದಾಮು ನಾಯಕ್, ಸಚಿವ ದಿಗಂಬರ್ ಕಾಮತ್, ಡಾ. ಗೋವಿಂದ ಕಾಳೆ, ಜಿಪಂ ಸದಸ್ಯ ಸಿದ್ಧೇಶ್ ನಾಯಕ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 492 ಮಂದಿಯ ನೇತ್ರ ತಪಾಸಣೆ ಮಾಡಲಾಯಿತು, 52 ಜನರನ್ನು ಉಚಿತ ಶಸ್ತ್ರ ಚಿಕಿತ್ಸೆಗೆ ಗುರುತಿಸಲಾಯಿತು, 368 ಜನರಿಗೆ ಉಚಿತ ಕನ್ನಡಕ ವಿತರಣೆಗೆ ಆಯ್ಕೆಮಾಡಲಾಯಿತು. ಆರೋಗ್ಯ ತಪಾಸಣಾ ಶಿಬಿರವನ್ನೂ ಆಯೋಜಿಸಲಾಗಿತ್ತು.
ರಾಜಕೀಯ ಜೀವನದಲ್ಲಿ ಅಟಲ್ಜಿ ಅವರಿಂದ ಸ್ಫೂರ್ತಿ ಪಡೆದಿದ್ದೇನೆ. ದೀರ್ಘಕಾಲದ ಸಾರ್ವಜನಿಕ ಜೀವನದಲ್ಲಿ ಜನರಿಂದ ಅಪಾರ ಪ್ರೀತಿ, ಬೆಂಬಲ ಹಾಗೂ ಆಶೀರ್ವಾದ ದೊರೆತಿದೆ. ಡಾ. ಕೃಷ್ಣ ಪ್ರಸಾದ್ ಅವರ ಅಭಿಮಾನವನ್ನು ಗೋವಾ ಜನತೆಗೆ ನೀಡುತ್ತಿರುವ ನೇತ್ರ ಸೇವೆಯಲ್ಲಿ ಕಂಡುಕೊಂಡಿದ್ದು ಅವರಿಗೆ ಕೃತಜ್ಞನಾಗಿದ್ದೇನೆ.ಶ್ರೀಪಾದ್ ಯೆಸ್ಸೋ ನಾಯ್ಕ್. ಕೇಂದ್ರ ಸಚಿವ.