ಉಡುಪಿಯಲ್ಲಿ ಆಯೋಜಿಸಿದ್ದ ಜಕಣಾಚಾರಿ ಸಂಸ್ಮರಣಾ ದಿನವನ್ನು ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಎಂ.ಎ. ಗಫೂರ್​, ಎ.ಕಿರಣಕುಮಾರ್​ ಕೊಡ್ಗಿ, ಪ್ರತೀಕ್​ ಬಾಯಲ್​, ಅಬೀದ್​ ಗದ್ಯಾಳ, ಎಸ್​.ಎಸ್​. ಕಾದ್ರೊಳ್ಳಿ, ಮಧು ಆಚಾರ್ಯ ಮೂಲ್ಕಿ, ಪೂರ್ಣಿಮಾ ಇತರರಿದ್ದರು. 
ಉಡುಪಿ

ಪೌರಾಣಿಕ ಶಿಲ್ಪಯ ಕೌಶಲ ಇಂದಿಗೂ ಜೀವಂತ

* ಉಡುಪಿ ಸಂಸದ ಕೋಟ ಪೂಜಾರಿ ಶ್ಲಾಘನೆ

* ಜಕಣಾಚಾರಿ ಸಂಸ್ಮರಣಾ ದಿನ ಉದ್ಘಾಟನೆ

ಉಡುಪಿ: ನಿರ್ಮಾಣಗಳ ಮೂಲಕರ್ತೃವಾಗಿರುವ ಅಮರಶಿಲ್ಪಿ ಜಕಣಾಚಾರಿಯ ಶಿಲ್ಪಕಲಾ ಕುಶಲತೆ ಭಾರತ ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿ ಇಂದಿಗೂ ಜೀವಂತವಾಗಿದೆ. ಹೊಯ್ಸಳ ಮತ್ತು ಕಲ್ಯಾಣಿ ಚಾಲುಕ್ಯ ಶೈಲಿಯ ಅದ್ಭುತ ದೇವಾಲಯ ನಿರ್ಮಿಸಿದ ಪೌರಾಣಿಕ ಶಿಲ್ಪಿ. ಬೇಲೂರು ಮತ್ತು ಹಳೇಬೀಡಿನ ಕೆತ್ತನೆಗಳು ಹೆಸರುವಾಸಿಯಾಗಿದ್ದು, ಭಾರತೀಯ ಸುವರ್ಣ ಯುಗಕ್ಕೆ ಹಾಗೂ ಭಾರತದ ಶಿಲ್ಪಕಲೆಗೆ ಅವರು ನೀಡಿರುವ ಕೊಡುಗೆಗೆ ಸಾಕ್ಷಿಯಾಗಿ ಅವುಗಳು ನಿಂತಿವೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಉಡುಪಿಯ ಜಿಪಂನ ಡಾ. ವಿ.ಎಸ್​. ಆಚಾರ್ಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಗುರುವಾರ (ಜ.1) ಆಯೋಜಿಸಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನ ಉದ್ಘಾಟಿಸಿ ಮಾತನಾಡಿದರು.

ಇತಿಹಾಸ ಹೇಳುವ ಕೆತ್ತನೆ

ಯಾವುದೇ ತಂತ್ರಜ್ಞಾನ ಇಲ್ಲದ ಕಾಲದಲ್ಲಿಯೂ ಕಲಾತ್ಮಕ ದೇವಾಲಯ ನಿರ್ಮಾಣ ಸಾಧ್ಯ ಎನ್ನುವುದಕ್ಕೆ ಹಾಸನ ಬೇಲೂರಿನ ಚೆನ್ನಕೇಶವ ದೇವಸ್ಥಾನ ಮಾದರಿಯಾಗಿದೆ. ಅಲ್ಲಿನ ಒಂದೊಂದು ಕಲ್ಲುಗಳೂ ಸಹ ಐತಿಹಾಸಿಕ ದಾಖಲೆಗಳನ್ನು ತೆರೆದಿಡುತ್ತದೆ. ಕಲಾತ್ಮಕತೆಯ ಮೆರುಗು, ಕಲ್ಲುಗಳ ಮೇಲಿನ ಕುಸುರಿ ಕೆಲಸಗಳು ಜಕಣಾಚಾರಿಯನ್ನು ಸರಿದೂಗಿಸುವಂತಹ ಶಿಲ್ಪಿ ಮತ್ತೊಬ್ಬರಿಲ್ಲ ಎಂಬುದಕ್ಕೆ ನಿದರ್ಶನವಾಗಿದೆ ಎಂದರು.

ವಾಸ್ತುಶಿಲ್ಪದ ಸಂಕೇತ

ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್​ ಮಾತನಾಡಿ, ನಾಡಿನ ಶಿಲ್ಪಕಲಾ ಕ್ಷೇತ್ರ ಶ್ರೀಮಂತಗೊಳಿಸಿದ ಜಕಣಾಚಾರಿಗಳು ಇಂದಿಗೂ  ಅವಿಸ್ಮರಣೀಯರಾಗಿದ್ದಾರೆ. ಹೊಯ್ಸಳರ ಆಡಳಿತದ ಮೂಡಿಬಂದ ಅವರು ಕೇವಲ ಶಿಲ್ಪಿಯಲ್ಲ. ಅವರು ಭಾರತೀಯ ವಾಸ್ತುಶಿಲ್ಪದ ಸಂಕೇತ. ನಶಿಸಿಹೋಗುತ್ತಿರುವ ವಿಶ್ವಕರ್ಮರ ಕುಲಕಸುಬುಗಳನ್ನು ಮುಂದಿನ ಪೀಳಿಗೆ ಉಳಿಸಿ ಬೆಳೆಸಬೇಕಿದೆ ಎಂದರು.
ಕೋಟೇಶ್ವರ ರಥಶಿಲ್ಪಿ ರಾಜಗೋಪಾಲ ಆಚಾರ್ಯ ಉಪನ್ಯಾಸ ನೀಡಿದರು. ಶಿಲ್ಪಿ ಕಾರ್ಕಳದ ಕೆ.ಸತೀಶ್​ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಕುಂದಾಪುರ ಶಾಸಕ ಎ.ಕಿರಣಕುಮಾರ್​ ಕೊಡ್ಗಿ, ಜಿಪಂ ಸಿಇಒ ಪ್ರತೀಕ್​ ಬಾಯಲ್​, ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ, ಜಿಪಂ ಉಪ ಕಾರ್ಯದರ್ಶಿ ಎಸ್​.ಎಸ್​. ಕಾದ್ರೊಳ್ಳಿ, ದ.ಕ. ಮತ್ತು ಉಡುಪಿ ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಮೂಲ್ಕಿ, ಕುಂಜಿಬೆಟ್ಟು ರಾಷ್ಟ್ರೀಯ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ನಾಗರಾಜ್​ ಆಚಾರ್ಯ, ವಿಶ್ವಕರ್ಮ ಸಮುದಾಯಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ನಿವೃತ್ತ ತಹಸೀಲ್ದಾರ್​ ಮುರುಳೀಧರ್​ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
"

ಜಕಣಾಚಾರಿಯ ಶಿಲ್ಪಕಲೆ, ಕರಕುಶಲತೆ, ಐತಿಹಾಸಿಕ ವಿಚಾರಗಳು ಸಮಾಜಕ್ಕೆ ಆದರ್ಶವಾಗಿದ್ದು ಯುವಜನಾಂಗ ಅದನ್ನೆಲ್ಲ ಅರಿತುಕೊಳ್ಳಬೇಕು. ಅವರ ಆದರ್ಶದಿಂದಲೇ ವಿಶ್ವಕರ್ಮ ಸಮಾಜವು ಕುಸುರಿ ಕೆಲಸದ ಮೂಲಕ ಶಕ್ತಿಯಾಗಿ ಬೆಳೆಯುತ್ತಿದೆ. ಕುಶಲಕರ್ಮಿಗಳಿಗೆ ಕೇಂದ್ರ ಸರ್ಕಾರವು ವಿಶ್ವಕರ್ಮ ಯೋಜನೆ ಜಾರಿಗೊಳಿಸಿದ್ದು, ಇತ್ತೀಚೆಗೆ 12 ಸಾವಿರ ಕೋಟಿ ರೂ.ಗಳನ್ನು ಅವರುಗಳ ಭದ್ರತೆಗಾಗಿ ಮೀಸಲಿಡಲಾಗಿದೆ.