ಬಿ.ಸಿ.ರೋಡ್‌ನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅಧ್ಯಕ್ಷತೆಯಲ್ಲಿ ಎಸ್ಸಿ-ಎಸ್ಟಿ ಸಭೆ ನಡೆಯಿತು. ಅಧಿಕಾರಿಗಳಾದ ಅರ್ಚಿತ್ ಡೋಂಗ್ರೆ, ಮಂಜುನಾಥ್, ಸಚಿನ್ ಕುಮಾರ್, ತೀರ್ಥಪ್ರಸಾದ್ ಮೊದಲಾದವರಿದ್ದರು.
ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಬಿ.ಸಿ.ರೋಡಿನಲ್ಲಿ ಕಾರ್ಯಾಚರಿಸುತ್ತಿದ್ದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಬೆಂಜನಪದವಿನ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಗೊಂಡು 7 ವರ್ಷ ಕಳೆದರೂ ಹೊಸ ಕಟ್ಟಡ ನಿರ್ಮಾಣಗೊಂಡಿಲ್ಲ ಎಂದು ವಿಶ್ವನಾಥ ಚೆಂಡ್ತಿಮಾರ್ ದೂರಿದರು.
ಬಿ.ಸಿ.ರೋಡಿನ ತಾಲೂಕು ಪಂಚಾಯಿತಿ ಎಸ್‌ಜೆಸ್‌ಆರ್‌ವೈ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.
ವಸತಿ ಶಾಲೆ ಇದ್ದ ಜಾಗ ಪರಂಬೋಕು ಜಮೀನಾಗಿದ್ದು, ಅದು ಸಮಾಜ ಕಲ್ಯಾಣ ಇಲಾಖೆ ಹೆಸರಿಗೆ ಆಗಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ಇದು ಸರ್ಕಾರದ ಮೂಲಕವೇ ಆಗಬೇಕಾದ ಕಾರ್ಯ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದರು.
ಕಪ್ಪುಕಲ್ಲು ಕ್ವಾರಿ ಸಮಸ್ಯೆ
ನಾವೂರು ಗ್ರಾಮದಲ್ಲಿ ಕಪ್ಪುಕಲ್ಲು ಕ್ವಾರಿಯಿಂದ ಸ್ಥಳೀಯ ಪರಿಶಿಷ್ಟ ಸಮುದಾಯದ ಮನೆಗಳಿಗೆ ತೊಂದರೆಯಾಗುತ್ತಿದೆ ಎಂದು ಸತೀಶ್ ಅರಳ ಆರೋಪಿಸಿದರು. ಅಲ್ಲಿ ಎಷ್ಟು ಪರಿಶಿಷ್ಟ ಮನೆಗಳಿವೆ. ಕಲ್ಲು ಕ್ವಾರಿ ಮನೆ ಹಾಗೂ ಶಾಲೆಯಿಂದ ಎಷ್ಟು ದೂರದಲ್ಲಿದೆ ಎಂದು ಪರಿಶೀಲಿಸಿ ವರದಿ ನೀಡುವಂತೆ ಸಂಬಂಧಪಟ್ಟ ಕಂದಾಯ ನಿರೀಕ್ಷಕರಿಗೆ ಡಿಸಿ ಸೂಚಿಸಿದರು.
ಸರಪಾಡಿ ಹಾಗೂ ಮಣಿನಾಲ್ಕೂರು ಗ್ರಾಮದಲ್ಲಿ ಸ್ಮಶಾನ ಇಲ್ಲ, ಎಸ್ಸಿ, ಎಸ್ಟಿಗಳಿಗೆ ನಿವೇಶನ ಒದಗಿಸಿಲು ಬಡವಾಣೆ ನಿರ್ಮಾಣ, ಅಪಾಯಕಾರಿ ಮರ ತೆರವು ಮೊದಲಾದ ವಿಷಯಗಳ ಬಗ್ಗೆ ಚರ್ಚೆ ನಡೆದವು.
ಪ್ರೊಬೆಷನರಿ ಐಎಎಸ್ ಅಧಿಕಾರಿ ಅರ್ಚಿತ್ ಡೋಂಗ್ರೆ, ತಹಸೀಲ್ದಾರ್ ಮಂಜುನಾಥ್, ತಾಪಂ ಇಒ ಸಚಿನ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ತೀರ್ಥಪ್ರಸಾದ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವಿಜಯ ಕುಮಾರಿ, ದಲಿತ ಮುಖಂಡರಾದ ವಿಶ್ವನಾಥ ಚೆಂಡ್ತಿಮಾರ್, ನಾರಾಯಣ ಪುಂಚಮೆ, ಗಂಗಾಧರ ಪರಾರಿ, ಕೇಶವ ನಾಯ್ಕ, ಮೋಹನ್ ಚೆಂಡ್ತಿಮಾರ್, ಸತೀಶ್ ಉಪಸ್ಥಿತರಿದ್ದರು.
ತಾಲೂಕಿನ ಬೋಳಂತೂರು ಗ್ರಾಮದ ಅರಣ್ಯದಂಚಿನಲ್ಲಿರುವ ಕೊರಗರು ಬುಟ್ಟಿ ನೇಯ್ಗೆಗೆ ಬಳ್ಳಿ ತರಲು ಅರಣ್ಯಕ್ಕೆ ಹೋಗಬೇಕಾಗುತ್ತದೆ. ಇಂಥ ಸಂದರ್ಭ ಗುರುತಿನ ಚೀಟಿ ಅಗತ್ಯವಿದ್ದು ಗುರುತಿನ ಚೀಟಿ ನೀಡುವಂತೆ ಸ್ಥಳೀಯ ಮಹಿಳೆಯೊಬ್ಬರು ಆಗ್ರಹಿಸಿದರು. ಈ ಬಗ್ಗೆ ಚರ್ಚೆ ನಡೆಸಿದ ಡಿಸಿ, ಪ್ರಸ್ತಾವನೆ ಕಳುಹಿಸಿ ಕೊಡಲು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಿಗೆ ತಿಳಿಸಿದರು.
ತಾಲೂಕು ಕಚೇರಿಯಲ್ಲಿ ಕಡತ ಕಾಣೆ
ಬಂಟ್ವಾಳ ಕಂದಾಯ ಇಲಾಖೆಯಲ್ಲಿರುವ ಕಡತಗಳು ಕಾಣೆಯಾಗುತ್ತಿವೆ. ಕೆಲವೊಂದು ಕಡತಗಳನ್ನು ಪಡೆಯಲು ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ಸೇಸಪ್ಪ ಬೆದ್ರಕಾಡು, ಕಾಣೆಯಾಗಿರುವ ದಾಖಲೆಗಳ ವಿವರವಾದ ಮಾಹಿತಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.