ತಲಪ್ಪಾಡಿ-ಚೆಂಗಳ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ನಿರ್ಮಿಸಿರುವ ಪ್ರಯಾಣಿಕರ ತಂಗುದಾಣದ ಮೇಲ್ಛಾವಣಿ ತೀರಾ ರಸ್ತೆ ಅಂಚಿಗೆ ಬಂದಿರುವುದು. 
ಉಡುಪಿ

ಬಸ್‌ಗಳಿಗೆ ತಾಗುವ ತಂಗುದಾಣದ ಮೇಲ್ಛಾವಣಿ

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ರಾಷ್ಟ್ರೀಯ ಹೆದ್ದಾರಿ ತಲಪ್ಪಾಡಿ-ಚೆಂಗಳ ರೀಚ್‌ನ ಮೊದಲ ಹಂತದ ಕಾಮಗಾರಿ ಪೂರ್ತಿಗೊಳ್ಳುತ್ತಿದ್ದಂತೆ ಸರ್ವೀಸ್ ರಸ್ತೆಯಲ್ಲಿ ನಿರ್ಮಿಸಲಾಗಿರುವ ಪ್ರಯಾಣಿಕರ ತಂಗುದಾಣಗಳಿಂದ ಬಸ್ ನಿಲುಗಡೆಗೆ ಸಮಸ್ಯೆ ಉಂಟಾಗುತ್ತಿದೆ.
ರಸ್ತೆ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಊರೂಲುಂಗಾಲ್ ಸೊಸೈಟಿ ಸರ್ವೀಸ್ ರಸ್ತೆಯಲ್ಲಿ ನಿರ್ಮಿಸಿರುವ ತಂಗುದಾಣಗಳು ತೀರಾ ರಸ್ತೆಯ ಅಂಚಿಗೆ ಬಂದಿವೆ. ಇದರಿಂದ ಅಗಲ ಕಿರಿದಾದ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಎರಡು ಕಂಬಗಳನ್ನು ಆಧಾರಸ್ತಂಭವಾಗಿಟ್ಟು ರಚಿಸಿರುವ ತಂಗುದಾಣಗಳ ಮೇಲ್ಭಾಗ ರಸ್ತೆಗೆ ಚಾಚುತ್ತಿದೆ. ಬಹುತೇಕ ಕಡೆ ಫುಟ್‌ಪಾತ್ ಅಗಲ ಕಿರಿದಾಗಿದ್ದು, ಬಸ್ ಬೇ ನಿರ್ಮಿಸದಿರುವುದರಿಂದ ಚಾಲಕರಿಗೆ ಸಮಸ್ಯೆ ಆಗುತ್ತಿದೆ.
ಇಕ್ಕಟ್ಟಾದ ಸರ್ವೀಸ್ ರಸ್ತೆ: ಸರ್ವೀಸ್ ರಸ್ತೆಯಲ್ಲಿ ಬಸ್ ಬೇ ಇಲ್ಲದ ಕಾರಣ, ಬಸ್‌ಗಳು ಪ್ರಯಾಣಿಕರನ್ನು ಇಳಿಸಲು ಮತ್ತು ಹತ್ತಿಸಲು ಸರ್ವೀಸ್ ರಸ್ತೆಯಲ್ಲೇ ನಿಲ್ಲಿಸಬೇಕಾಗುತ್ತದೆ. ಎರಡು ಭಾರಿ ವಾಹನಗಳು ಸಲೀಸಾಗಿ ಸಂಚರಿಸಲೂ ಸಾಧ್ಯವಾಗದಷ್ಟು ಸರ್ವೀಸ್ ರಸ್ತೆ ಇಕ್ಕಟ್ಟಾಗಿವೆ. ಈ ವೇಳೆ ರಸ್ತೆ ಅಂಚಿಗೆ ಬಸ್‌ಗಳು ಬಂದರೆ ತಂಗುದಾಗಣಗಳ ಮೇಲ್ಛಾವಣಿಗೆ ಡಿಕ್ಕಿಯಾಗುತ್ತವೆ. ಇದರಿಂದ ಬಸ್‌ಗಳಿಗೂ, ತಂಗುದಾಣಕ್ಕೂ ಹಾನಿಯುಂಟಾಗುವ ಭೀತಿ ಇದೆ. ಇದನ್ನು ತಪ್ಪಿಸುವುದಕ್ಕಾಗಿ ಮುಂಜಾಗ್ರತಾ ಕ್ರಮವಾಗಿ ಊರೂಲುಂಗಾಲ್ ಸೊಸೈಟಿ ರಸ್ತೆ ಬದಿಯಲ್ಲಿ ಬ್ಯಾರೆಲ್ ಅಡ್ಡ ಇರಿಸಿ ಬಸ್‌ಗಳು ತಂಗುದಾಣದ ಸಮೀಪಕ್ಕೆ ಬಾರದಂತೆ ಕ್ರಮ ಕೈಗೊಂಡಿದೆ. ಆದರೆ ರಸ್ತೆ ಗುತ್ತಿಗೆ ವಹಿಸಿಕೊಂಡಿರುವ ಸಂಸ್ಥೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡು ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸರ್ವೀಸ್ ರಸ್ತೆಯಲ್ಲಿ ಬಸ್ ನಿಲುಗಡೆ ಮಾಡಲು ಸಮಸ್ಯೆ ಇದೆ. ಈ ಬಗ್ಗೆ ಪೊಲೀಸ್ ಠಾಣೆ ಹಾಗೂ ಈ ಹಿಂದಿನ ಜಿಲ್ಲಾಧಿಕಾರಿಗೆ ದೂರು ನೀಡಲಾಗಿತ್ತು. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದರೂ ಇದುವರೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿಲ್ಲ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು.