ಉಡುಪಿ: ಸಾಮಾಜಿಕ ಸುರಕ್ಷತೆ, ಸಾರ್ವಜನಿಕರ ರಕ್ಷಣೆ, ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವುದು ಹಾಗೂ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಿಸುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ಅನನ್ಯ. ಅವರ ಕಾರ್ಯಗಳಿಗೆ ಸಾಮಾಜಿಕ ಜವಾಬ್ದಾರಿಯ ಆಶಯದೊಂದಿಗೆ ಎಲ್ಐಸಿಯಿಂದಲೂ ಸಣ್ಣ ಸಹಕಾರದೊಂದಿಗೆ ಕೈಜೋಡಿಸುತ್ತಿದ್ದೇವೆ ಎಂದು ಎಲ್ಐಸಿ ಉಡುಪಿ ವಿಭಾಗದ ಹಿರಿಯ ವಿಭಾಗೀಯ ಪ್ರಬಂಧಕ ಗಣಪತಿ ಭಟ್ ತಿಳಿಸಿದರು.
ಸಾರ್ವಜನಿಕ ಸುರಕ್ಷತೆಯ ಕ್ರಮಕ್ಕಾಗಿ ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ)ದ ಉಡುಪಿ ವಿಭಾಗದ ವತಿಯಿಂದ ಕೊಡುಗೆಯಾಗಿ ನೀಡಿದ ಬ್ಯಾರಿಕೇಡ್ಗಳನ್ನು ಜಿಲ್ಲಾ ಪೊಲೀಸ್ ಇಲಾಖೆಗೆ ಹಸ್ತಾಂತರಿಸಿ ಮಾತನಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠ ಹರಿರಾಮ ಶಂಕರ ಮಾತನಾಡಿ, ಸಮಾಜದ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕರ ಸುರಕ್ಷತೆಗಾಗಿ ಎಲ್ಐಸಿ ಕೈಗೊಂಡಿರುವ ಈ ಉಪಕ್ರಮವು ಸಂಸ್ಥೆಯ ಸಾಮಾಜಿಕ ಬದ್ಧತೆ ಮತ್ತು ಸಮಾಜಮುಖಿ ಕಾಳಜಿಗೆ ಸಾಕ್ಷಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಎಲ್ಐಸಿಯ ಮಾರುಕಟ್ಟೆ ಪ್ರಬಂಧಕ ಗುರುರಾಜ ರಾವ್, ವಿಕ್ರಯ ಪ್ರಬಂಧಕ ದುರ್ಗಾರಾಮ ಶೆಣೈ, ಹೆಚ್ಚುವರಿ ಪೊಲೀಸ್ ವರಿಷ್ಠ ಸುಧಾಕರ ನಾಯಕ ಹಾಗೂ ಎಲ್ಐಸಿ ಸಿಬ್ಬಂದಿ ಉಪಸ್ಥಿತರಿದ್ದರು.