ಪತ್ರಿಕಾ ದಿನಾಚರಣಾ ಕಾರ್ಯಕ್ರಮವನ್ನು ಕುಕ್ಕೆ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಉದ್ಘಾಟಿಸಿದರು. ಪ್ರಮುಖರಾದ ವಾಲ್ಟರ್ ನಂದಳಿಕೆ, ಕೆ.ಎಸ್.ಬಾಲಕೃಷ್ಣ ಕೊಲ, ಸೋಮಶೇಖರ ನಾಯಕ್, ಶ್ರೀನಿವಾಸ ನಾಯಕ್ ಇಂದಾಜೆ ಮತ್ತಿತರರು ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ: ಸಮಾಜ ತಿದ್ದುವಂತಹ ಜವಾಬ್ದಾರಿಯುತ ಕಾರ್ಯವನ್ನು ಪತ್ರಿಕೆಗಳು ಮಾಡುತ್ತಿವೆ. ಹರಿತವಾದ ಆಯುಧ ಪೆನ್ನಿನ ಮೂಲಕ ಜನರ ಆಶೋತ್ತರಕ್ಕೆ ತಕ್ಕದಾಗಿ ಕಾರ್ಯನಿರ್ವಹಿಸುವ ಅಂಗ ಇದಾಗಿದೆ. ಪತ್ರಕರ್ತರು ಪತ್ರಿಕೆಯಲ್ಲಿನ ತಮ್ಮ ಬರಹಗಳ ಮೂಲಕ ಸಮಾಜದಲ್ಲಿ ಜಾಗೃತಿಯ ಬೀಜ ಬಿತ್ತುತ್ತಾರೆ. ಸಮಾಜ ಒಗ್ಗೂಡಿಸಿ ದೇಶ ಕಟ್ಟುವ ಕಾಯಕವನ್ನು ಪತ್ರಿಕೋದ್ಯಮ ಮಾಡುತ್ತಿದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಹೇಳಿದರು.
ಕಡಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಸುಬ್ರಹ್ಮಣ್ಯ ಪ್ರೆಸ್‌ಕ್ಲಬ್ ಆಶ್ರಯದಲ್ಲಿ ಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜಿನಲ್ಲಿ ಗುರುವಾರ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಕುಕ್ಕೆ ವ್ಯವಸ್ಥಾಪನಾ ಸಮಿತಿ ಸದಸ್ಯ ಅಶೋಕ್ ನೆಕ್ರಾಜೆ ಮಾತನಾಡಿ, ವ್ಯಕ್ತಿಯ ವ್ಯಕ್ತಿತ್ವವನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯವನ್ನು ಪತ್ರಿಕೆಗಳು ಮಾಡುತ್ತಿವೆ. ಪತ್ರಿಕೆ ಓದುವುದು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಬೇಕು ಎಂದರು.
ಕಡಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಕೆ.ಎಸ್.ಬಾಲಕೃಷ್ಣ ಕೊಲ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಸೋಮಶೇಖರ ನಾಯಕ್ ಬಹುಮಾನ ವಿತರಿಸಿದರು.
ಹಿರಿಯ ಪತ್ರಕರ್ತ ವಾಲ್ಟರ್ ನಂದಳಿಕೆ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಪುಷ್ಪರಾಜ್ ಬಿ.ಎನ್., ಎಸ್‌ಎಸ್‌ಪಿಯು ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎನ್.ಎಸ್., ಎಸ್‌ಎಸ್‌ಪಿಯು ಕಾಲೇಜಿನ ಶಿಕ್ಷಕ ರಕ್ಷಕ ಸಂಘ ಅಧ್ಯಕ್ಷ ಗುಣವರ್ಧನ ಕೆದಿಲ, ಸುಬ್ರಹ್ಮಣ್ಯ ಪ್ರೆಸ್‌ಕ್ಲಬ್ ಅಧ್ಯಕ್ಷ ರತ್ನಾಕರ ಸುಬ್ರಹ್ಮಣ್ಯ, ಕಾರ್ಯದರ್ಶಿ ಶಿವರಾಮ ಕಜೆಮೂಲೆ, ಕಡಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರವೀಣ್‌ಕುಮಾರ್ ಇದ್ದರು. ಪತ್ರಕರ್ತ ನಾಗರಾಜ್ ಎನ್.ಕೆ. ನಿರೂಪಿಸಿದರು.
ಪುರಸ್ಕಾರ ಪ್ರದಾನ
ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅವರಿಗೆ ಮಾಧ್ಯಮ ಸಾಧಕ ಪುರಸ್ಕಾರ ಮತ್ತು ಹಿರಿಯ ಪತ್ರಿಕಾ ವಿತರಕ ಬಸವರಾಜ್ ಎಸ್.ಟೋಂಗಳೆ ಅವರಿಗೆ ಶ್ರೇಷ್ಠ ಪತ್ರಿಕಾ ವಿತರಕ ಪುರಸ್ಕಾರ ಪ್ರದಾನ ಮಾಡಲಾಯಿತು. ಪತ್ರಿಕಾ ದಿನಾಚರಣೆ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳಿಗೆ ಬಹುಮಾನ ವಿತರಿಸಲಾಯಿತು.