ಸಂಪೂರ್ಣ ಹದಗೆಟ್ಟು ಹೊಂಡಗುಂಡಿಗಳಿಂದ ಕೂಡಿದ ಹಾಳೆಕಟ್ಟೆ-ಕುಂಟಾಡಿ ಸಂಪರ್ಕಿಸುವ ರಸ್ತೆ. 
ಉಡುಪಿ

ಕಲ್ಯಾದ ರಸ್ತೆಗಳು ಶಾಪಗ್ರಸ್ತ!

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಕಲ್ಯಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರತಿವರ್ಷ ರಸ್ತೆ ಸಮಸ್ಯೆಯಿಂದಾಗಿ ಗ್ರಾಮಸ್ಥರು ಶಾಪ ಹಾಕುತ್ತಿದ್ದಾರೆ. ರಸ್ತೆಯುದ್ದಕ್ಕೂ ದೊಡ್ಡ ಹೊಂಡಗಳು ನಿರ್ಮಾಣವಾಗಿದ್ದು, ಕಾಲು ನಡಿಗೆಗೂ ಅಯೋಗ್ಯವಾದ ಸ್ಥಿತಿ ಇದೆ. ಕಲ್ಯಾದ ಹಾಳೆಕಟ್ಟೆ, ಕಲ್ಯಾ ಭಾಗದಿಂದ ಮಲ್ಲಾಯಬೆಟ್ಟು ಮೂಲಕ ಕುಂಟಾಡಿ ಸಂಪರ್ಕಿಸುವ ಪ್ರಮುಖ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಈ ಸಮಸ್ಯೆಗೆ ಪರಿಹಾರವೇ ಇಲ್ಲದಂತಾಗಿ ರಸ್ತೆಗಳು ದಶಕಗಳಿಂದ ಶಾಪಗ್ರಸ್ತವಾಗಿ ಉಳಿದಿವೆ.

ರಸ್ತೆಯ ದುಸ್ಥಿತಿಯಿಂದ ಬೇಸತ್ತ ಗ್ರಾಮಸ್ಥರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮೊರೆ ಹೋಗುವುದು ಮಾಮೂಲಾಗಿದೆ. ಇದರಲ್ಲಿ ಒಂದೂವರೆ ಕಿಲೋಮೀಟರ್‌ನಷ್ಟು ರಸ್ತೆ ಅರಣ್ಯ ಇಲಾಖೆ ಅಡ್ಡಿಯಿಂದ ಡಾಂಬರೀಕರಣಗೊಳ್ಳದೆ ಬಾಕಿ ಉಳಿದಿದೆ. ಈ ಭಾಗದಲ್ಲಿ ಹಿಂದೆ ಕೇವಲ ಜಲ್ಲಿಯನ್ನಷ್ಟೇ ಹಾಕಲಾಗಿದ್ದು, ಕಾಲಕ್ರಮೇಣ ಆ ಜಲ್ಲಿ ಚೆಲ್ಲಾಪಿಲ್ಲಿಯಾಗಿ ಈಗ ಮಣ್ಣಿನ ರಸ್ತೆಯಾಗಿ ಮಾರ್ಪಟ್ಟಿದೆ. ಈ ಮಾರ್ಗದಲ್ಲಿ ದ್ವಿಚಕ್ರ ವಾಹನ ಹಾಗೂ ಆಟೋರಿಕ್ಷಾ ಪ್ರಯಾಣಿಸುವುದು ಸಾಹಸ ಎಂಬಂತಾಗಿದೆ.
ಈ ಪ್ರದೇಶದಲ್ಲಿ ಸಾಕಷ್ಟು ಗಣಿಗಳು ಹಾಗೂ ಕ್ರಷರ್‌ಗಳು ಇವೆ. ನಿತ್ಯವೂ ನೂರಾರು ಸಂಖ್ಯೆಯಲ್ಲಿ 10, 16 ಹಾಗೂ 18 ಚಕ್ರಗಳ ಅತಿಭಾರದ ವಾಹನಗಳು ಓಡಾಡುತ್ತಿವೆ. ಅದರಿಂದಾಗಿ ರಸ್ತೆಗಳು ಸಂಪೂರ್ಣವಾಗಿ ಛಿದ್ರಗೊಂಡಿವೆ. ಬೇಸಿಗೆಯಲ್ಲಿ ಧೂಳಿನ ಸಮಸ್ಯೆಯಾದರೆ ಮಳೆಗಾಲದಲ್ಲಿ ಕೆಸರು ನೀರಿನಿಂದ ನಡೆದಾಡಲು ಅಸಾಧ್ಯವಾಗಿದೆ.

ಶಾಲಾ ವಾಹನಗಳು ಬರಲು ಹಿಂದೇಟು

ರಸ್ತೆ ದುಸ್ಥಿತಿಯಿಂದ ಶಾಲಾ ವಾಹನಗಳು ಹಾಗೂ ಇತರ ಬಾಡಿಗೆ ವಾಹನಗಳು ಈ ಭಾಗಕ್ಕೆ ಬರಲು ಹಿಂದೇಟು ಹಾಕುತ್ತಿವೆ. ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ತುರ್ತು ವಾಹನ ಸಿಗದೆ ಪರದಾಡುವ ಪರಿಸ್ಥಿತಿ ಇದೆ. ಹಿಂದೆ ಈ ಭಾಗದಲ್ಲಿ ಓಡಾಡುತ್ತಿದ್ದ ಶಾಲಾ ವಾಹನ ಈ ರಸ್ತೆಯಲ್ಲಿ ಸಂಚರಿಸದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕಿ.ಮೀ ಗಟ್ಟಲೇ ನಡಿಗೆಯಲ್ಲೇ ಸಾಗಬೇಕಾದ ಸ್ಥಿತಿ ಇದೆ.
ಮಲ್ಲಾಯಬೆಟ್ಟು ಮಾತ್ರವಲ್ಲದೆ, ಕೈರಬೆಟ್ಟು ಹಾಗೂ ನೆಲ್ಲಿಗುಡ್ಡೆ ಭಾಗದ ರಸ್ತೆಗಳೂ ಸಂಪೂರ್ಣವಾಗಿ ಹದಗೆಟ್ಟಿವೆ. ಕಲ್ಯಾ ಗ್ರಾಪಂ ವ್ಯಾಪ್ತಿಯಲ್ಲಿ ರಸ್ತೆಗಳ ಅಭಿವೃದ್ಧಿ ಮರೀಚಿಕೆಯಾಗಿದ್ದು, ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷೃದ ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಗ್ರಾಮಸಭೆಯಲ್ಲೂ ಆಕ್ರೋಶ

ಆ.20ರಂದು ಕುಂಟಾಡಿ ಬಿಲ್ಲವ ಸಂಘದಲ್ಲಿ ಕಲ್ಯಾ ಗ್ರಾಮಸಭೆ ಆಯೋಜಿಸಲಾಗಿತ್ತು. ಗ್ರಾಪಂ ವ್ಯಾಪ್ತಿಯಲ್ಲಿ ಸಾಕಷ್ಟು ಅಕ್ರಮ ಕಲ್ಲು ಗಣಿಗಳು ಕಾರ್ಯಾಚರಿಸುತ್ತಿವೆ, ಅದರ ಫಲವಾಗಿ ಇಡೀ ಗ್ರಾಮದ ರಸ್ತೆಗಳು ಹಾಳಾಗಿವೆ. ಹೀಗಾಗಿ ಆರ್‌ಟಿಒ, ಗಣಿ ಇಲಾಖೆ ಮತ್ತು ಕಂದಾಯ ಅಧಿಕಾರಿಗಳು ಇಲ್ಲದೆ ಸಭೆ ನಡೆಸುವುದು ಬೇಡ, ಅಧಿಕಾರಿಗಳು ಬಂದು ಸ್ಪಷ್ಟನೆ ನೀಡಬೇಕು, ರಸ್ತೆ ಸರಿಯಾಗುವವರೆಗೂ ಯಾವುದೇ ಕಾರಣಕ್ಕೂ ಗ್ರಾಮಸಭೆ ನಡೆಸಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ಜನರ ಆಕ್ರೋಶ ಹಾಗೂ ಪ್ರತಿಭಟನೆ ತೀವ್ರತೆ ಅರಿತ ಅಧಿಕಾರಿಗಳು ಅಂತಿಮವಾಗಿ ಗ್ರಾಮಸಭೆಯನ್ನೇ ಮುಂದೂಡಬೇಕಾಯಿತು.

ಶಾಶ್ವತ ಪರಿಹಾರ ಮರೀಚಿಕೆ

ಹಾಳೆಕಟ್ಟೆಯಿಂದ ಕಲ್ಕಾರ್ ಮತ್ತು ಕುಂಟಾಡಿ ಸಂಪರ್ಕಿಸುವ ಎರಡು ರಸ್ತೆಗಳು ಹದಗೆಡುತ್ತಿರುವುದು ಇಂದು ನಿನ್ನೆಯ ವಿಚಾರವಲ್ಲ. ದಶಕಗಳಿಂದ ಈ ಸಮಸ್ಯೆ ಇದೆ. ಇದಕ್ಕೆ ಕಾರಣ ಕ್ರಷರ್‌ಗಳಿಂದ ಜಲ್ಲಿ ಹೊತ್ತುಕೊಂಡು ಸಾಗುವ ಬೃಹತ್ ಲಾರಿಗಳ ಓಡಾಟ. ಬೇಸಿಗೆಯಲ್ಲೂ ಈ ಭಾಗದ ರಸ್ತೆಗಳು ಸುಸ್ಥಿಯಲ್ಲಿರುವುದಿಲ್ಲ. ಕಲ್ಯಾದ ಜನರಿಗೆ ಉತ್ತಮ ರಸ್ತೆಯಲ್ಲಿ ಓಡಾಡಿಯೇ ಗೊತ್ತಿಲ್ಲ ಎಂಬಂತಾಗಿದೆ. ಜನರ ಕೂಗು ತೀವ್ರಗೊಂಡಾಗ ಒಂದಷ್ಟು ತೇಪೆ ಹಾಕುವುದು, ತಿಂಗಳಾಗುವ ಮೊದಲೇ ಅದು ಕಿತ್ತು ಹೋಗುವುದು ಇಲ್ಲಿ ವಾಡಿಕೆ ಎಂಬಂತಾಗಿದೆ. ನೂರಾರು ಮನವಿ ಸಲ್ಲಿಸಿದರೂ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ.

ನಮ್ಮ ಊರಿನಲ್ಲಿ ಓಡಾಡಲು ರಸ್ತೆಯೇ ಇಲ್ಲದಂತಾಗಿದೆ. ಜಲ್ಲಿ ಲಾರಿಗಳ ಓಡಾಟದಿಂದ ಇಡೀ ರಸ್ತೆ ಹೊಂಡಮಯವಾಗಿದೆ. ಶಾಲಾ ಮಕ್ಕಳು ಶಾಲೆಗೆ ಹೋಗಲು ಹೆಣಗಾಡುತ್ತಿದ್ದಾರೆ. ರಸ್ತೆ ಸರಿಯಾಗದಿದ್ದಲ್ಲಿ ಹೋರಾಟ ಅನಿವಾರ್ಯವಾಗಿದೆ.

— ಸತೀಶ್ ಕಲ್ಯಾ, ಗ್ರಾಮಸ್ಥ

ನಮ್ಮ ಗ್ರಾಮದ ರಸ್ತೆ ಸಮಸ್ಯೆ ಇಂದು ನಿನ್ನೆಯದಲ್ಲ. ಪ್ರತಿ ನಿತ್ಯ ನಾವು ಇದೇ ರಸ್ತೆಯಲ್ಲಿ ಓಡಾಡಬೇಕಾಗಿದೆ. ಇಲ್ಲಿ ರಸ್ತೆಯಲ್ಲಿ ಹೊಂಡ ಇದೆಯಾ ಅಥವಾ ಹೊಂಡದಲ್ಲಿ ರಸ್ತೆ ಇದೆಯಾ ಎನ್ನುವ ಅನುಮಾನವಾಗುತ್ತದೆ. ಗ್ರಾಮಸ್ಥರು ನಿತ್ಯ ಸಂಕಟ ಅನುಭವಿಸುವಂತಾಗಿದೆ.

— ಮಿಥುನ್, ಗ್ರಾಮಸ್ಥ