ಸಂಪೂರ್ಣ ಹದಗೆಟ್ಟು ಕೆಸರು ರಾಡಿಯಾಗಿರುವ ಧರೆಮನೆ ಸಂಪರ್ಕಿಸುವ ರಸ್ತೆ.  
ಉಡುಪಿ

ಧರೆಮನೆ ದಾರಿ ಸಂಕಷ್ಟ!

ಇಂದಿರಾ ಎನ್ ಕೆ
ನರೇಂದ್ರ ಎಸ್.ಮರಸಣಿಗೆ ಹೆಬ್ರಿ
ಹೆಬ್ರಿ ತಾಲೂಕಿನ ಕುಚ್ಚೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಧರೆಮನೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟು ಕೆಸರು ರಾಡಿಯಿಂದ ಚಲಿಸಲು ಸಾಧ್ಯವಾಗದಷ್ಟು ಹದಗೆಟ್ಟಿರುವುದರಿಂದ, ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ.
ಬೇಸಿಗೆಯಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದರಿಂದ ಸಂಪೂರ್ಣ ಧೂಳುಮಯವಾಗಿತ್ತು. ಈ ರಸ್ತೆಯನ್ನು ಸ್ವಲ್ಪಮಟ್ಟಿಗೆ ಮಣ್ಣು ಹಾಕಿ ದುರಸ್ತಿ ಮಾಡಿಕೊಡಲಾಗಿತ್ತು. ಆದರೆ ಮಳೆಗಾಲದಲ್ಲಿ ಹಾಕಿದ ಮಣ್ಣಿನಿಂದ ಸಮಸ್ಯೆ ಉಂಟಾಗಿ ಓಡಾಡಲು ಅನನುಕೂಲವಾಗುತ್ತಿದೆ. ಈ ಭಾಗದಲ್ಲಿ ಅನೇಕ ವಿದ್ಯಾರ್ಥಿಗಳು ಈ ರಸ್ತೆಯನ್ನು ಅವಲಂಭಿಸಿದ್ದಾರೆ. ಕೆಸರು ರಾಡಿಯಲ್ಲಿ ಮಕ್ಕಳಿಗೆ ಸೈಕಲ್ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಕೂಲಿ ಕಾರ್ಮಿಕರು, ಡೇರಿಗೆ ಹಾಲು ತೆಗೆದುಕೊಂಡು ಹೋಗುವರು ರಸ್ತೆಯ ಅವ್ಯವಸ್ಥೆಗೆ ಹಿಡಿಶಾಪ ಹಾಕುತ್ತಾರೆ. ಈ ಭಾಗದ 30 ಮನೆಯವರು ರಸ್ತೆ ಸಮಸ್ಯೆಯಿಂದ ಕಂಗೆಟ್ಟಿದ್ದಾರೆ.

ಆಶ್ವಾಸನೆಗೆ ಸೀಮಿತ

ಪ್ರತಿ ಚುನಾವಣೆ ಬಂದಾಗ ರಾಜಕೀಯ ನಾಯಕರು ಬಂದು ಶೀಘ್ರದಲ್ಲಿ ರಸ್ತೆ ಮಾಡಿಕೊಡುತ್ತೇವೆ ಎನ್ನುತ್ತಾರೆ. ಚುನಾವಣೆ ಮುಗಿದ ನಂತರ ಯಾರೂ ಈ ಬದಿ ಸುಳಿಯುವುದಿಲ್ಲ. ಬಹುತೇಕ ಸಂದರ್ಭಗಳಲ್ಲಿ ನಾವೆಲ್ಲರೂ ಸೇರಿ ಈ ರಸ್ತೆಯನ್ನು ನಿರಂತರವಾಗಿ ದುರಸ್ತಿ ಮಾಡುತ್ತಾ ಬಂದಿದ್ದೇವೆ. ಸಂಬಂಧಪಟ್ಟ ಎಲ್ಲರಿಗೂ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೆಲಸಕ್ಕೆ ಹೋಗುವ ಮಹಿಳೆಯರು ಸ್ಕೂಟರ್ ತೆಗೆಯಲು ಹಿಂಜರಿಯುತ್ತಾರೆ. ಈ ಭಾಗದ ಯುವಕರು ಬೈಕನ್ನು ಸಂಬಂಧಿಕರ ಮನೆಯಲ್ಲಿ ಇಟ್ಟು ಬರುತ್ತಿದ್ದಾರೆ ಎಂದು ಸ್ಥಳೀಯರಾದ ರಮೇಶ್ ಬೇಸರ ವ್ಯಕ್ತಪಡಿಸಿದರು.

ಸುಸಜ್ಜಿತ ರಸ್ತೆ ಬೇಕು

ಅನೇಕ ವರ್ಷಗಳಿಂದ ಊರಿನ ಜನ ಈ ರಸ್ತೆ ಬಳಸುತ್ತಿದ್ದು, ನಮಗೆ ಸುಸಜ್ಜಿತವಾದ ಕಾಂಕ್ರೀಟ್ ರಸ್ತೆ ನಿರ್ಮಾಣ ಆಗಬೇಕು. ಇಲ್ಲದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳಿಗೆ ಸಮರ್ಪಕ ಉತ್ತರ ನೀಡುತ್ತೇವೆ. ಸದ್ಯಕ್ಕೆ ತಾತ್ಕಾಲಿಕ ದುರಸ್ತಿ ಮಾಡಿ, ಜನರು ಓಡಾಡಲು ವ್ಯವಸ್ಥೆ ಕಲ್ಪಿಸಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ನಾವು ಬಾಲ್ಯದಿಂದ ಈ ರಸ್ತೆಯನ್ನು ಬಳಸುತ್ತಿದ್ದೇವೆ. ನಿರಂತರವಾಗಿ ಮಳೆ, ಬೇಸಿಗೆ ಕಾಲದಲ್ಲಿ ರಸ್ತೆಯಲ್ಲಿ ಸಮಸ್ಯೆ ಇರುತ್ತದೆ. ಬೇಸಿಗೆ ಕಾಲದಲ್ಲಿ ದುರಸ್ತಿ ಮಾಡಿದರೆ ಮಳೆಗಾಲಕ್ಕೆ ಅದು ಶಾಪವಾಗಿದೆ. ಇಲ್ಲಿನ ಶಾಲೆ ಮಕ್ಕಳು ಕೆಸರು ರಾಡಿಯಲ್ಲಿ ನಡೆದುಕೊಂಡು ಹೋಗಲು ಪರದಾಡುತ್ತಾರೆ. ಪ್ರತಿ ಚುನಾವಣೆ ಬಂದಾಗ ಎಲ್ಲ ರಾಜಕೀಯ ನಾಯಕರು ರಸ್ತೆ ನಿರ್ಮಿಸುತ್ತೇವೆ ಎನ್ನುತ್ತಾರೆ. ನಂತರ ಯಾರು ಈ ಬದಿ ಸುಳಿಯುವುದಿಲ್ಲ. ದಯಮಾಡಿ ಬಹು ಬೇಡಿಕೆಯ ರಸ್ತೆಯನ್ನು ನಿರ್ಮಾಣ ಮಾಡಿಕೊಡಿ.

— ಮಹಾಬಲ ನಾಯ್ಕ ಊರಿನ ಹಿರಿಯರು

ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಿಕೊಳ್ಳುತ್ತೇವೆ. ಕಾಂಕ್ರೀಟ್ ರಸ್ತೆ ಮಾಡಿ ಕೊಡುವಷ್ಟು ನಮ್ಮಲ್ಲಿ ಅನುದಾನವಿಲ್ಲ. ದಯಮಾಡಿ ಸಾರ್ವಜನಿಕರು ಸಹಕರಿಸಬೇಕು.

— ರಿತೇಶ್ ಪುತ್ರನ್ ಪಿಡಿಒ, ಕುಚ್ಚೂರು ಗ್ರಾಮ ಪಂಚಾಯಿತಿ