ಸಂಪೂರ್ಣ ಹದಗೆಟ್ಟಿರುವ ಅಬ್ಬನಡ್ಕ ಸಂಪರ್ಕ ರಸ್ತೆ.  
ಉಡುಪಿ

ಹೊಂಡ-ಗುಂಡಿಗೆ ರಸ್ತೆ ಮಾಯ

ಹರಿಪ್ರಸಾದ್ ನಂದಳಿಕೆ ಕಾರ್ಕಳ

ರಸ್ತೆಯುದ್ದಕ್ಕೂ ಬೃಹತ್ ಗಾತ್ರದ ಹೊಂಡ ಗುಂಡಿಗಳು... ಕೆಸರು ತುಂಬಿದ ನೀರು... ಹೊಂಡದ ಅರಿವಿಲ್ಲದೆ ನಿತ್ಯ ಎಡವಟ್ಟು ಮಾಡಿಕೊಳ್ಳುವ ವಾಹನ ಸವಾರರು... ಕೆಸರು ನೀರಿನಲ್ಲಿ ಗ್ರಾಮದ ಜನರ ಓಡಾಟ..!
ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗಿರುವುದು ಕೆದಿಂಜೆಯಿಂದ ಸಂಪರ್ಕ ಪಡೆದು ಬೋಳ ಹಾಗೂ ಬೆಳ್ಮಣ್ ದೇಗುಲವನ್ನು ಸಂಪರ್ಕಿಸುವ ಅಬ್ಬನಡ್ಕ ರಸ್ತೆಯಲ್ಲಿ. ಒಂದೆಡೆ ನಂದಳಿಕೆ ಗ್ರಾಪಂ ಇನ್ನೊಂದೆಡೆ ಬೆಳ್ಮಣ್ ಗ್ರಾಪಂ, ಮತ್ತೊಂದೆಡೆ ಬೋಳ ಗ್ರಾಪಂನ ಗಡಿ ಭಾಗದಲ್ಲಿ ಹಾದು ಹೋಗುವ ನೂರಾರು ಜನರಿಗೆ ಉಪಯೋಗವಿರುವ ಅಬ್ಬನಡ್ಕ ಜಿಪಂ ರಸ್ತೆ ತೀರ ಹದಗೆಟ್ಟು ಹಲವು ವರ್ಷಗಳು ಕಳೆದರೂ ರಸ್ತೆ ಸರಿಪಡಿಸುವಲ್ಲಿ ಅಧಿಕಾರಿಗಳು ಮುಂದಾಗುತ್ತಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ.
ಈ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ರಸ್ತೆ ದುರಸ್ತಿಗೆ ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ಕೂಡಲೇ ಗಮನ ಹರಿಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ತೀವ್ರವಾಗಿ ಕೇಳಿಬರುತ್ತಿದೆ.

ಸಂಪರ್ಕ ರಸ್ತೆ ದುಸ್ಥಿತಿ

ಈ ರಸ್ತೆ ಒಂದು ಕಡೆಯಲ್ಲಿ ಬೋಳ ಹಾಗೂ ಸಚ್ಚರಿಪೇಟೆ ಭಾಗವನ್ನು ಸಂಪರ್ಕಿಸಲು ಅತ್ಯಂತ ಹತ್ತಿರದ ಮತ್ತು ಪ್ರಮುಖ ಮಾರ್ಗ. ಇದರೊಂದಿಗೆ ಬೆಳ್ಮಣ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳಲು ಭಕ್ತರು ಮತ್ತು ಸಾರ್ವಜನಿಕರು ಹೆಚ್ಚಾಗಿ ಈ ರಸ್ತೆಯನ್ನೇ ನೆಚ್ಚಿಕೊಂಡಿದ್ದಾರೆ. ಆದರೆ ನಿರ್ಲಕ್ಷೃಕ್ಕೆ ಒಳಗಾಗಿರುವ ಈ ರಸ್ತೆ ಪ್ರಸ್ತುತ ಸಂಪೂರ್ಣ ಹೊಂಡ- ಗುಂಡಿಗಳಿಂದ ಕೂಡಿದೆ. ಪ್ರತಿ ನಿತ್ಯ ಈ ಭಾಗದಲ್ಲಿ ನೂರಾರು ಸಣ್ಣ ಪುಟ್ಟ ವಾಹನಗಳು, ಶಾಲಾ ವಾಹನಗಳು ಓಡಾಡುತ್ತಿದ್ದರೂ ರಸ್ತೆ ಹೊಂಡ ಮುಚ್ಚುವ ಬಗ್ಗೆ ಯಾರೊಬ್ಬರೂ ಮನಸ್ಸು ಮಾಡುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ.

ಅಪಾಯ ಮುನ್ಸೂಚನೆ

ಮಳೆ ಹಾಗೂ ವಾಹನಗಳ ಓಡಾಟದಿಂದ ರಸ್ತೆ ಡಾಂಬರು ಸಂಪೂರ್ಣ ಕಿತ್ತುಹೋಗಿ, ರಸ್ತೆ ತುಂಬಾ ಬೃಹತ್ ಗಾತ್ರದ ಹೊಂಡಗಳು ನಿರ್ಮಾಣವಾಗಿವೆ. ಇದರಿಂದ ಸಣ್ಣ ಪುಟ್ಟ ವಾಹನಗಳು ಸಂಚರಿಸುವುದು ಅಸಾಧ್ಯ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೃಹತ್ ಗಾತ್ರದ ಹೊಂಡಗಳು ನಿರ್ಮಾಣವಾಗಿದ್ದು, ರಸ್ತೆಯ ಜಲ್ಲಿ, ಡಾಂಬರು ಎಲ್ಲವೂ ಮಳೆ ನೀರಿನಲ್ಲಿ ಕೊಚ್ಚಿ ಹೋಗಿವೆ. ಇನ್ನು ರಸ್ತೆಯ ಮಧ್ಯದಲ್ಲಿ ದೊಡ್ಡ ದೊಡ್ದ ಗಾತ್ರದ ಹೊಂಡದಲ್ಲಿ ನಿಂತ ಕೆಸರು ನೀರಿನಿಂದ ಹೊಂಡದ ಬಗ್ಗೆ ಗೊತ್ತು ಗುರಿಯಿಲ್ಲದ ವಾಹನ ಸವಾರರು ಹೊಂಡಕ್ಕೆ ವಾಹನ ಇಳಿಸಿ ಅಲ್ಲೇ ವಾಹನ ಕೆಟ್ಟು ನಿಲ್ಲುವ ನಿದರ್ಶನವೂ ಸಾಕಷ್ಟಿವೆ. ಈ ಭಾಗದಲ್ಲಿ ನಿತ್ಯ ಶಾಲಾ ಮಕ್ಕಳು ಕಾಲ್ನಡಿಗೆಯಲ್ಲಿ ಸಂಚರಿಸುತ್ತಿದ್ದು, ವಾಹನಗಳು ಓಡಾಡುವ ರಭಸಕ್ಕೆ ಕೆಸರು ನೀರು ಮೈಗೆ ಮೆತ್ತಿಕೊಂಡು ಅದೇ ಸ್ಥಿತಿಯಲ್ಲಿ ತರಗತಿಗಳಿಗೆ ಹಾಜರಾಗುವ ಪರಿಸ್ಥಿತಿ ಇಲ್ಲಿದೆ. ದ್ವಿಚಕ್ರ ವಾಹನ ಸವಾರರು ರಾತ್ರಿ ವೇಳೆ ಅಥವಾ ಮಳೆ ಬಂದಾಗ ಬೃಹತ್ ಹೊಂಡಗಳು ಕಾಣದೆ ಬಿದ್ದು ಗಾಯಗೊಂಡಿರುವ ನಿದರ್ಶನಗಳಿವೆ. ಕಾರು ಹಾಗೂ ಆಟೋ ರಿಕ್ಷಾಗಳಂತಹ ವಾಹನಗಳು ಹೊಂಡಗಳಿಗೆ ಸಿಲುಕಿ ಹಾನಿಗೊಳಗಾಗಿ ಆರ್ಥಿಕ ನಷ್ಟ ಅನುಭವಿಸುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಜನಪ್ರತಿನಿಧಿಗಳ ಮೌನಕ್ಕೆ ಆಕ್ರೋಶ

ಪ್ರಮುಖ ದೇವಸ್ಥಾನ ಹಾಗೂ ವಾಣಿಜ್ಯ ಪ್ರದೇಶಗಳನ್ನು ಸಂಪರ್ಕಿಸುವ ರಸ್ತೆ ಜನಸಂಚಾರದಿಂದ ಕೂಡಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮೌನ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಎಚ್ಚೆತ್ತುಕೊಂಡು, ತಕ್ಷಣ ಅಬ್ಬನಡ್ಕ ರಸ್ತೆಯನ್ನು ದುರಸ್ತಿಪಡಿಸಿ ಡಾಂಬರು ಕಾಮಗಾರಿ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ರಸ್ತೆ ತೀರ ಹದಗೆಟ್ಟಿದ್ದು ವಾಹನದಲ್ಲಿ ಬಿಡಿ ಕಾಲ್ನಡಿಗೆಯಲ್ಲೂ ನಡೆಯಲು ಸಾಧ್ಯವಿಲ್ಲ. ಹಲವು ಬಾರಿ ಈ ರಸ್ತೆ ಸರಿಪಡಿಸುವಂತೆ ಮನವಿ ಮಾಡುತ್ತಿದ್ದರೂ ಇನ್ನೂ ಸರಿಯಾಗಿಲ್ಲ. ಹೀಗಾಗಿ ಈ ರಸ್ತೆಯನ್ನು ಅವಲಂಬಿಸಿದ ಮೂರು- ನಾಲ್ಕು ಗ್ರಾಮದ ಜನರಿಗೆ ನಿತ್ಯ ತೊಂದರೆಯಾಗುತ್ತಿದೆ.

— ಸತೀಶ್ ಅಬ್ಬನಡ್ಕ ಗ್ರಾಮಸ್ಥರು

ಹಲವು ವರ್ಷಗಳಿಂದ ಈ ರಸ್ತೆ ಹದಗೆಟ್ಟಿದೆ. ಪದೇ ಪದೆ ತೇಪೆ ಹಾಕುವುದನ್ನು ಬಿಟ್ಟರೆ ಸಂಪೂರ್ಣ ರಸ್ತೆ ಸರಿಪಡಿಸುವಲ್ಲಿ ಅಧಿಕಾರಿಗಳು ಮನಸ್ಸು ಮಾಡಬೇಕಾಗಿದೆ. ರಸ್ತೆಯುದ್ದಕ್ಕೂ ಬೃಹತ್ ಗಾತ್ರದ ಹೊಂಡಗಳು ನಿರ್ಮಾಣವಾಗಿದ್ದು, ರಸ್ತೆ ಎಲ್ಲಿದೆ ಎಂದು ಹುಡುಕುವ ಸ್ಥಿತಿ ನಿರ್ಮಾಣವಾಗಿದೆ.

— ಸಂದೀಪ್ ಕುಮಾರ್ ಸ್ಥಳೀಯರು