ಆಳ್ವಾಸ್‌ನಿಂದ ರಾಜ್ಯಮಟ್ಟದ ಮಹಿಳಾ ಮದ್ಯವರ್ಜನ ಶಿಬಿರಕ್ಕೆ ಚಾಲನೆ ನೀಡಲಾಯಿತು. ಡಾ.ಹಿಲ್ಡಾ ರಾಯಪ್ಪನ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಡಾ.ವಿನಯ್ ಆಳ್ವ ಮೊದಲಾದವರಿದ್ದರು.
ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಮದ್ಯವ್ಯಸನವು ಚಿಕಿತ್ಸೆಯಿಂದ ಗುಣಪಡಿಸಬಹುದಾದ ಕಾಯಿಲೆಯಾಗಿದ್ದು, ವ್ಯಸನಿಗಳನ್ನು ಕಳಂಕದ ಪ್ರತೀಕವಾಗಿ ಕಾಣದೆ ಆತ್ಮವಿಶ್ವಾಸ ತುಂಬಿ ಹೊಸ ಬದುಕಿನತ್ತ ಕರೆದೊಯ್ಯುವುದು ಸಮಾಜದ ಜವಾಬ್ದಾರಿ ಎಂದು ಮಂಗಳೂರಿನ ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್‌ನ ಸಂಸ್ಥಾಪಕಿ ಡಾ.ಹಿಲ್ಡಾ ರಾಯಪ್ಪನ್ ಹೇಳಿದರು.
ಆಳ್ವಾಸ್ ಪುನರ್ಜನ್ಮ, ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಧರ್ಮಸ್ಥಳ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಮಹಿಳಾ ಮದ್ಯವರ್ಜನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಮಾತನಾಡಿ, ಕುಟುಂಬದ ಸಮಸ್ಯೆಗಳು, ಮಾನಸಿಕ ಒತ್ತಡ, ಆರ್ಥಿಕ ಸಂಕಷ್ಟ ಹಾಗೂ ಸಾಮಾಜಿಕ ಕಾರಣಗಳಿಂದ ಮಹಿಳೆಯರಲ್ಲಿ ಮದ್ಯವ್ಯಸನ ಹೆಚ್ಚುತ್ತಿದ್ದು, ಅವರನ್ನು ಮುಖ್ಯವಾಹಿನಿಗೆ ಮರಳಿ ತರುವ ಇಂತಹ ಪುನರ್ವಸತಿ ಕಾರ್ಯಕ್ರಮ ಅಗತ್ಯ ಎಂದು ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವ ಅವರ ಸಮಾಜಮುಖಿ ಚಿಂತನೆಯನ್ನು ಅಭಿನಂದಿಸಿದರು.
ಜನಜಾಗೃತಿ ಪ್ರಾದೇಶಿಕ ಕಚೇರಿ, ಬೆಳ್ತಂಗಡಿಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯ್ಸ ಮಾತನಾಡಿ, ಮಹಿಳೆಯರ ಘನತೆ ಮತ್ತು ಗೌರವಕ್ಕೆ ಧಕ್ಕೆಯಾಗದ ರೀತಿಯಲ್ಲಿ ಶಿಬಿರದ ವ್ಯವಸ್ಥೆ ಮಾಡಲಾಗಿದ್ದು, ಇದರ ಮೂಲಕ ವ್ಯಸನಿಗಳ ಬದುಕಿನಲ್ಲಿ ಪರಿವರ್ತನೆ ಉಂಟಾಗಿ ಕುಟುಂಬಗಳಲ್ಲಿ ಸುಖ, ಶಾಂತಿ ಮತ್ತು ಆಶಾಭಾವನೆ ಮರುಸ್ಥಾಪನೆಯಾಗಲಿ ಎಂದು ಆಶಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಡಾ.ವಿನಯ್ ಆಳ್ವ, ಉದ್ಯಮಿ ಕೆ.ಶ್ರೀಪತಿ ಭಟ್, ಚೌಟರ ಅರಮನೆಯ ಕುಲದೀಪ್ ಎಂ.ಹಾಗೂ ಮೂಡುಬಿದಿರೆ ಜನಜಾಗೃತಿ ವೇದಿಕೆ ಅಧ್ಯಕ್ಷ ವಾಸುದೇವ್ ನಾಯ್ಕ ಉಪಸ್ಥಿತರಿದ್ದರು.
ಆಳ್ವಾಸ್ ಪುನರ್ಜನ್ಮದ ಆಪ್ತಸಮಾಲೋಚಕಿ ಸುಮನಾ ಪಿಂಟೋ ಕಾರ್ಯಕ್ರಮ ನಿರೂಪಿಸಿದರು. ಎಸ್‌ಕೆಆರ್‌ಡಿಪಿಯ ಯೋಜನಾಧಿಕಾರಿ ಗಣೇಶ್ ಆಚಾರ್ಯ ಸ್ವಾಗತಿಸಿ, ಆಳ್ವಾಸ್ ಪುನರ್ಜನ್ಮದ ಆಪ್ತಸಮಾಲೋಚಕ ಲೋಹಿತ್ ಬಂಟ್ವಾಳ್ ವಂದಿಸಿದರು.